ನಗರದ ಆಶಾಕಿರಣ ಅಂಧ ಮಕ್ಕಳ ಶಾಲೆಯಲ್ಲಿ ಗುರುವಾರ ವರೆಜಾನ್ ಮೀಡಿಯ ಮತ್ತು ಮಾನವನ ಅಗತ್ಯಗಳ ಸಂಶೋಧನಾ ಸಂಸ್ಥೆಯ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ “ದಿ ಗ್ರೇಟ್ ಬಿಲ್ಡ್” ಕಾರ್ಯಕ್ರಮವನ್ನು ಉದ್ಘಾಟಿಸಿ ಸಮಾಜ ವಿಜ್ಞಾನಿ ಹಾಗೂ ಮಾನವನ ಅಗತ್ಯಗಳ ಸಂಶೋಧನಾ ಸಂಸ್ಥೆಯ ಸಂಸ್ಥಾಪಕ ರವೀಂದ್ರನಾಥ್ ಮಾತನಾಡಿದರು.
ಪ್ರತಿಯೊಂದು ಮಗುವೂ ಚೈತನ್ಯಶೀಲವಾಗಿರುತ್ತದೆ. ಕೆಲವು ಮಕ್ಕಳಿಗೆ ಅಂಗ ನ್ಯೂನತೆಯಿರುತ್ತವೆ, ಅಂಥಹ ಮಕ್ಕಳ ಶಕ್ತಿಯನ್ನು ಜಾಗೃತಗೊಳಿಸಿ, ಉತ್ತೇಜಿಸಿ, ಕೌಶಲಗಳನ್ನು ಕಲಿಸಿ ಅವರನ್ನು ಪರಾಧೀನರಾಗದಂತೆ ಮಾಡಬೇಕು ಎಂದು ಅವರು ತಿಳಿಸಿದರು.
ಅಂಧಮಕ್ಕಳಿಗೆ ಈ ದಿನ ಕೆಲವು ಅಗತ್ಯ ವಸ್ತುಗಳಾದ ಟ್ರಂಕ್, ಹೊದಿಕೆಗಳು ಮತ್ತು ಬ್ಯಾಗ್ ಗಳನ್ನು ನೀಡುವ ಜೊತೆಗೆ ವರೆಜಾನ್ ಮೀಡಿಯ ಸಂಸ್ಥೆಯ ತರಬೇತಿ ಪಡೆದ ಕೆಲವು ಉದ್ಯೋಗಿಗಳು ಮಕ್ಕಳಿಗೆ ಕೆಲವಾರು ಕೌಶಲಗಳನ್ನು ಕಲಿಸಲಿದ್ದಾರೆ. ಒಂದು ದಿನ ಮಕ್ಕಳೊಂದಿಗೆ ಬೆರೆತು, ಅವರಿಗೆ ಧ್ವನಿ ಮೂಲಕ ಕಂಪ್ಯೂಟರ್ ಬಳಕೆ, ಮಕ್ಕಳಲ್ಲಿನ ಜೀವನ ಕೌಶಲ್ಯಗಳು, ಸಂವಹನ ಕೌಶಲ್ಯಗಳ ಬೆಳವಣಿಗೆ, ಉಪಕರಣಗಳ ಬಳಕೆ, ಆತ್ಮವಿಶ್ವಾಸ ಹೆಚ್ಚಳ ಮಾಡುವ ಚಟುವಟಿಕೆಗಳನ್ನು ಹಮ್ಮಿಕೊಂಡಿದ್ದೇವೆ ಎಂದು ವಿವರಿಸಿದರು.
ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಕಲ್ಯಾಣ ಇಲಾಖೆಯ ಕಾರ್ಯಕ್ರಮ ನಿಯೋಜಕ ಶಾಂತ ಅರಸ್ ಮಾತನಾಡಿ, ಮನುಷ್ಯನಲ್ಲಿ ಒಂದು ಅಂಗ ಊನವಾದರೆ ಮಿಕ್ಕ ಅಂಗಗಳು ಚುರುಕಾಗಿರುತ್ತವೆ. ಆದರೆ ವೈಜ್ಞಾನಿಕವಾಗಿ ಅಂಗವೈಕಲ್ಯವುಳ್ಳ ಮಕ್ಕಳಿಗೆ ಎಳೆಯ ವಯಸ್ಸಿನಿಂದಲೇ ತರಬೇತಿ ನೀಡಿದಲ್ಲಿ ಅವರು ಜೀವನವನ್ನು ಯಾರ ಮೇಲೂ ಅವಲಂಬಿಸದೆ ಬದುಕಬಹುದಾಗಿದೆ. ಈ ನಿಟ್ಟಿನಲ್ಲಿ ತಾಂತ್ರಿಕ ಕೌಶಲ್ಯವುಳ್ಳ ಸಂಸ್ಥೆಯ ಉದ್ಯೋಗಿಗಳು ಬಂದು ಮಕ್ಕಳಿಗೆ ನೆರವಾಗುತ್ತಿರುವುದು ಶ್ಲಾಘನೀಯ ಎಂದರು.
ಕಸಾಪ ತಾಲ್ಲೂಕು ಅಧ್ಯಕ್ಷ ಎ.ಎಂ.ತ್ಯಾಗರಾಜ್ ಮಾತನಾಡಿ, ಹಲವು ವರ್ಷಗಳಿಂದ ನಗರದಲ್ಲಿ ಆಶಾಕಿರಣ ಅಂಧಮಕ್ಕಳ ಶಾಲೆಯು ತಾಲ್ಲೂಕಿನ ಹಾಗೂ ನೆರೆಯ ತಾಲ್ಲೂಕುಗಳ ಅಂಧಮಕ್ಕಳಿಗೆ ಬೆಳಕಾಗಿದೆ. ಇಲ್ಲಿನ ಮಕ್ಕಳು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸದಾ ಒಳ್ಳೆಯ ಅಂಕಗಳನ್ನು ಪಡೆದು ಉತ್ತೀರ್ಣರಾಗುತ್ತಾರೆ. ಈ ಮಕ್ಕಳಿಗೆ ವಿವಿಧ ಕೌಶಲಗಳನ್ನು ಕೊಟ್ಟರೆ ಇನ್ನಷ್ಟು ಅವರಿಗೆ ಸಹಾಯಕವಾಗುತ್ತದೆ ಎಂದು ಹೇಳಿದರು.
ಆಶಾಕಿರಣ ಅಂಧಮಕ್ಕಳ ಶಾಲೆಯ ಸಂಚಾಲಕ ಗೋಪಾಲಯ್ಯ, ಸಿಬ್ಬಂದಿ ಶಾಂತಮ್ಮ, ಆಂಜಿನಪ್ಪ, ಮಾನವನ ಅಗತ್ಯಗಳ ಸಂಶೋಧನಾ ಸಂಸ್ಥೆಯ ಸಿಇಒ ಶಾರದಾ, ಅಧ್ಯಕ್ಷ ಶೈಲೇಶ್, ಕಾರ್ಯದರ್ಶಿ ಪಾರ್ಥ, ವರೆಜಾನ್ ಮೀಡಿಯ ವ್ಯವಸ್ಥಾಪಕ ಪ್ರೀತಮ್, ಸುಮಾ, ಪುಷ್ಪಾ ಮತ್ತು ತಂಡ ಹಾಜರಿದ್ದರು.
- Advertisement -
- Advertisement -
- Advertisement -