ನಗರದ ಮುತ್ತೂರು ಬೀದಿಯಲ್ಲಿ ಶುಕ್ರವಾರ ಇನ್ಫೋಸಿಸ್ ಫೌಂಡೇಷನ್ ವತಿಯಿಂದ ಆಹಾರದ ಕಿಟ್ ಗಳನ್ನು ರಿಚ್ ಮಂಡ್ ಸೊಸೈಟಿ ಕಾರ್ಯದರ್ಶಿ ಎನ್.ಕೆ.ಗುರುರಾಜರಾವ್ ಹಾಗೂ ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಅವರಿಗೆ ಹಸ್ತಾಂತರಿಸಿ ಇನ್ಫೋಸಿಸ್ ಫೌಂಡೇಷನ್ ನ ರಮೇಶ್ ರೆಡ್ಡಿ ಮಾತನಾಡಿದರು.
ರಾಜ್ಯದಾದ್ಯಂತ ಬಡವರಿಗೆ ಕೋವಿಡ್ 19 ಪರಿಹಾರ ಸಾಮಗ್ರಿಗಳನ್ನು ಇನ್ಫೋಸಿಸ್ ಫೌಂಡೇಷನ್ ವತಿಯಿಂದ ನೀಡುತ್ತಿದ್ದು, ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್.ನಾರಾಯಣಮೂರ್ತಿ ಅವರು ಹುಟ್ಟೂರಾದ ಶಿಡ್ಲಘಟ್ಟ ತಾಲ್ಲೂಕಿನಲ್ಲಿನ ಬಡ ಕೂಲಿ ಕಾರ್ಮಿಕರು ಹಾಗೂ ಆಹಾರದ ಅಗತ್ಯವಿರುವವರಿಗೆ ವಿತರಿಸಲು ಮೊದಲ ಹಂತದಲ್ಲಿ 500 ಆಹಾರದ ಕಿಟ್ ಅನ್ನು ಹಸ್ತಾಂತರಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಶಿಡ್ಲಘಟ್ಟ ತಾಲ್ಲೂಕಿನಲ್ಲಿ ರೇಷ್ಮೆಯನ್ನು ನಂಬಿ ಬದುಕುತ್ತಿರುವ ಕೂಲಿ ಕಾರ್ಮಿಕರು ಹಾಗೂ ದಿನಗೂಲಿ ನೌಕರರು, ವೃದ್ಧರು, ಅಸಹಾಯಕರು ಮುಂತಾದವರನ್ನು ಗುರುತಿಸಿ ಸಮರ್ಪಕವಾಗಿ ವಿತರಿಸಿ. ಮುಂದಿನ ಹಂತದಲ್ಲಿ ಇನ್ನಷ್ಟು ಕಿಟ್ ಗಳನ್ನು ಕಳುಹಿಸುವುದಾಗಿ ಅವರು ಹೇಳಿದರು.
ರಿಚ್ ಮಂಡ್ ಸೊಸೈಟಿ ಕಾರ್ಯದರ್ಶಿ ಎನ್.ಕೆ.ಗುರುರಾಜರಾವ್ ಮಾತನಾಡಿ, ಇನ್ಫೋಸಿಸ್ ಫೌಂಡೇಷನ್ ಅಧ್ಯಕ್ಷೆ ಸುಧಾಮೂರ್ತಿಯವರು ಶಿಡ್ಲಘಟ್ಟ ತಾಲ್ಲೂಕಿನ ಬಡಜನರಿಗೆ ತಲುಪಿಸುವಂತೆ ತಿಳಿಸಿ ಆಹಾರದ ಕಿಟ್ ಗಳನ್ನು ಕಳುಹಿಸಿದ್ದಾರೆ. ತಹಶಿಲ್ದಾರ್ ಅವರ ಉಪಸ್ಥಿತಿಯಲ್ಲಿ ಬಡಜನರಿಗೆ ವಿತರಣೆ ಮಾಡುವುದಾಗಿ ಹೇಳಿದರು.
ಇನ್ಫೋಸಿಸ್ ಫೌಂಡೇಷನ್ ನ ಬಾಬಣ್ಣ, ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ಎ.ಆರ್.ನಾಗರತ್ನಮ್ಮ, ವೈಶಾಖ್ ಹಾಜರಿದ್ದರು