ಮಾನವರ ದುರಾಸೆಗೆ, ಅಪವಾದಕ್ಕೆ, ಅನುಮಾನಕ್ಕೆ, ನಿಂದನೆ ಹಾಗೂ ದುಷ್ಕೃತ್ಯಕ್ಕೆ ಬಲಿಯಾಗುವ ಜೀವಿಯೊಂದನ್ನು ರಕ್ಷಿಸಿ ಮಂಗಳವಾರ ಕಾಡಿಗೆ ಬಿಡಲಾಯಿತು. ಅಪರೂಪಕ್ಕೆ ಕಾಣಸಿಗುವ ಇಮ್ಮಂಡೆ ಹಾವು ಅಥವಾ ಎರಡು ತಲೆ ಹಾವನ್ನು ರಕ್ಷಿಸಿ ಕಾಡಿಗೆ ಬಿಡಲಾಗಿದೆ.
ಎರಡು ತಲೆ ಹಾವು ಎಂದು ಕರೆಯಲ್ಪಡುವ ಈ ಹಾವನ್ನು ತೆಲುಗಿನಲ್ಲಿ ‘ಪೂಡು ಪಾಮು’ ಎಂದು ಕರೆದರೆ ಇಂಗ್ಲೀಷ್ನಲ್ಲಿ ‘ರೆಡ್ ಸ್ಯಾಂಡ್ ಬೋವ’ ಎಂದು ಕರೆಯುತ್ತಾರೆ. ತಾಲ್ಲೂಕಿನ ಇದ್ಲೂಡು ಗ್ರಾಮದ ಬಿ.ಮಹದೇವ ಅವರ ಜಮೀನಿನಲ್ಲಿ ಮಂಗಳವಾರ ಉಳುಮೆ ಮಾಡುವಾಗ ಸಿಕ್ಕ ರೆಡ್ ಸ್ಯಾಂಡ್ ಬೋವಾ ಹಾವನ್ನು ಮಹದೇವ ಅವರ ಮಗ ಎಂ.ದಿಲೀಪ್ ಕುಮಾರ್ ಉಪ ವಲಯ ಅರಣ್ಯಾಧಿಕಾರಿ ಭಾಸ್ಕರ್ ಅವರಿಗೆ ಒಪ್ಪಿಸಿ, ಅವರ ಮೂಲಕ ಪಟ್ರಹಳ್ಳಿ ಅರಣ್ಯ ಪ್ರದೇಶದಲ್ಲಿ ಬಿಟ್ಟಿದ್ದಾರೆ.
ರೆಡ್ ಸ್ಯಾಂಡ್ ಬೋವಾ ಎಂಬ ಈ ಹಾವಿಗೆ ಕನ್ನಡದಲ್ಲಿ ಮಣ್ಣುಮುಕ್ಕ ಎಂಬ ಹೆಸರೂ ಇದೆ. ಹಲವರಿಗೆ ಈ ಹಾವನ್ನು ಸಾಕುವುದು ಪ್ರತಿಷ್ಠೆಯ ವಿಷಯ. ಇದನ್ನು ಮನೆಯಲ್ಲಿ ಸಾಕಿದರೆ ಶ್ರೀಮಂತಿಕೆ ಬರುತ್ತದೆ ಎಂಬ ನಂಬಿಕೆಯೂ ಇದೆ.
‘ಇದು ವಿಷವಿಲ್ಲದ ಯಾರನ್ನೂ ಕಚ್ಚದ ಅತ್ಯಂತ ನಿರುಪದ್ರವಿ ಹಾವು. ಮಣ್ಣನ್ನು ತೋಡಿಕೊಂಡು ಹೋಗುವ ಇದರ ಗುಣದಿಂದ ಇದರ ತಲೆಯ ಮುಂಭಾಗ ಗುದ್ದಲಿಯ ತುದಿಂತೆ ಗಟ್ಟಿಯಾಗಿರುತ್ತದೆ. ಬಾಲ ಮೊಂಡಾಗಿದ್ದು ಥೇಟ್ ತಲೆಯಂತೆಯೇ ಕಾಣುತ್ತದೆ. ಹಾಗಾಗಿ ಇದನ್ನು ಇಮ್ಮಂಡೆ ಹಾವು ಅಥವಾ ಎರಡು ತಲೆ ಹಾವೆಂದು ಕರೆಯುತ್ತಾರೆ’ ಎಂದು ಈ ಹಾವಿನ ಬಗ್ಗೆ ಸ್ನೇಕ್ ನಾಗರಾಜ್ ತಿಳಿಸಿದರು.
‘ಅತ್ಯಂತ ಭಯ ಹಾಗೂ ನಾಚಿಕೆ ಸ್ವಭಾವದ ಈ ಹಾವು ಅಪಾಯದ ಸುಳಿವು ಸಿಕ್ಕ ತಕ್ಷಣ ಮೈಯನ್ನು ಸುರುಳಿಯಾಕಾರಕ್ಕೆ ಕುಗ್ಗಿಸಿ ತಲೆಯನ್ನು ಬಚ್ಚಿಟ್ಟುಕೊಂಡು ಬಾಲವನ್ನು ಮೇಲೆ ಬಿಟ್ಟು ಅಲ್ಲಾಡಿಸುತ್ತದೆ. ಇದೇ ಇದರ ತಲೆಯಿರಬೇಕೆಂದು ಬೇರೆ ಪ್ರಾಣಿಗಳು ಘಾತ ಮಾಡುತ್ತವೆ. ಹಾಗಾಗಿಯೇ ಬೆಳೆದಿರುವ ಹೂಳುಹಾವಿನ ಬಾಲ ಸಾಮಾನ್ಯವಾಗಿ ಗಾಯಗೊಂಡಿರುವ ಸ್ಥಿತಿಯಲ್ಲಿರುತ್ತದೆ’
‘ಇಂತಹ ಹಾವು ಮರಿಯಾಗಿದ್ದಾಗ ಅಲ್ಲಲ್ಲಿ ಕಿತ್ತಳೆ ಬಣ್ಣವಿದ್ದರೂ ಬೆಳೆದ ಮೇಲೆ ಗಾಢ ಕಂದು ಬಣ್ಣ ಹೊಂದುತ್ತದೆ. ೭೫ ಸೆಮೀ ಉದ್ದ ಬೆಳೆಯುತ್ತದೆ. ಮರಳು, ಮೆದು ಮಣ್ಣು ಇರುವೆಡೆ ಇವು ವಾಸಿಸುತ್ತವೆ. ರೈತರ ಬೆಳೆಗಳಿಗೆ ಹಾನಿ ಮಾಡುವ ಇಲಿ ಮೊದಲಾದ ದಂಶಕಗಳನ್ನು ತಿಂದು ರೈತ ಮಿತ್ರನಾಗಿದೆ. ಒಣ ಪ್ರದೇಶಗಳಲ್ಲಿ ಕಾಣಸಿಗುವ ಈ ಹಾವು ಕರ್ನಾಟಕ, ತಮಿಳುನಾಡು, ಆಂದ್ರಪ್ರದೇಶ ಹಾಗೂ ವಾಯುವ್ಯ ಭಾರತದಲ್ಲಿ ಕಂಡುಬರುತ್ತದೆ. ಇದು ನಿಶಾಚರಿ. ಕತ್ತಲಲ್ಲೇ ತನ್ನ ಆಹಾರಾನ್ವೇಷಣೆ ಮಾಡುತ್ತದೆ. ಜೂನ್ ತಿಂಗಳು ಇವು ಮರಿ ಮಾಡುವ ಕಾಲ. ಈ ಹಾವುಗಳು ಮೊಟ್ಟೆಯಿಡುವುದಿಲ್ಲ. ಆರರಿಂದ ಎಂಟು ಮರಿಗಳಿಗೆ ಜನ್ಮ ನೀಡುತ್ತವೆ.
ಈ ಸಂದರ್ಭದಲ್ಲಿ ಅರಣ್ಯ ರಕ್ಷಕ ಸಂದೀಪ್ ಹಾಜರಿದ್ದರು.
- Advertisement -
- Advertisement -
- Advertisement -