ಓದಿನ ಅರಮನೆಯಲ್ಲಿ ಪುಸ್ತಕ ಪರಿಚಯ ಕಾರ್ಯಕ್ರಮ

0
541

‘ಹೂವಿನ ಹಾರ ಹಾಕಿಸಿಕೊಳ್ಳಲು ಸಮಯವಿದೆ, ಮಾಡುವ ಕೆಲಸ ಬಹಳಷ್ಟಿದೆ’ ಎಂಬ ಎಚ್ಚರಿಕೆ ಬರಹಗಾರನಿಗೆ ಸದಾ ಇರಬೇಕು. ಕುವೆಂಪು ಅವರು ಹೇಳಿದಂತೆ ‘ಕೀರ್ತಿ ಶನಿ’ಯಿಂದ ದೂರವಿರಬೇಕು ಎಂದು ಸಾಹಿತಿ ಹಾಗೂ ಶಿಕ್ಷಕ ಸದಾಶಿವ ಸೊರಟೂರು ತಿಳಿಸಿದರು.
ನಗರದ ಸಾರ್ವಜನಿಕ ಗ್ರಂಥಾಲಯದಲ್ಲಿ ಭಾನುವಾರ ಕನ್ನಡ ಸಾರಸ್ವತ ಪರಿಚಾರಿಕೆ ಹಾಗೂ ಕೇಂದ್ರ ಗ್ರಂಥಾಲಯದ ಸಹಯೋಗದಲ್ಲಿ ನಡೆದ ‘ಓದಿನ ಅರಮನೆಯಲ್ಲಿ ಪುಸ್ತಕ ಪರಿಚಯ’ ಒಂಭತ್ತನೇ ತಿಂಗಳ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರಷ್ಯಾ ಕಾಂತಿಗೆ ಕಾರಣವಾಗಿದ್ದು ಮ್ಯಾಕ್ಸಿಮ್ ಗಾರ್ಕಿ ಅವರ ‘ತಾಯಿ’ ಎಂಬ ಪುಸ್ತಕ. ಗಾಂಧೀಜಿ ಮಹಾತ್ಮನಾಗಲು ಪ್ರೇರಣೆ ನೀಡಿದ್ದು ಜಾನ್ ರಸ್ಕಿನ್ ಬರೆದ ‘ಅನ್ ಟು ದಿ ಲಾಸ್ಟ್’ ಎಂಬ ಕೃತಿ. ಪುಸ್ತಕ ಸಂಸ್ಕೃತಿಯು ಬದುಕಿನಲ್ಲಿ ಬಹು ಮಹತ್ವದ ಪಾತ್ರ ವಹಿಸುತ್ತದೆ. ಮಕ್ಕಳಿಗೆ ಎಳೆ ವಯಸ್ಸಿನಿಂದಲೇ ಪುಸ್ತಕ ಓದುವ ಅಭಿರುಚಿ ಬೆಳೆಸಿ, ಅವರ ವ್ಯಕ್ತಿತ್ವ ಬದಲಾಗುತ್ತದೆ, ಕಳೆಕಟ್ಟುತ್ತದೆ. ಮಕ್ಕಳ ಹುಟ್ಟುಹಬ್ಬಕ್ಕೆ ಪುಸ್ತಕವನ್ನು ಉಡುಗೊರೆಯಾಗಿ ನೀಡಿ ಎಂದು ಹೇಳಿದರು.
ಪ್ರಶಸ್ತಿಗೆ ಅರ್ಜಿ ಹಾಕುವುದು ಕೆಟ್ಟ ಪದ್ಧತಿ. ಓದುವುದು ಮತ್ತು ಅನುಭವಕ್ಕೆ ದಕ್ಕಿದ್ದನ್ನು ಬರೆಯುವುದು ನನ್ನ ಮನಸ್ಥಿತಿ. ಬದಲಾವಣೆ ಯಾರಿಂದಲೋ ಬಯಸುವ ಮುನ್ನ ನಮ್ಮಿಂದಲೇ ಪ್ರಾರಂಭವಾಗಲಿ. ಈ ಉದ್ದೇಶದಿಂದ ಕುವೆಂಪು ಅವರ ಮಂತ್ರಮಾಂಗಲ್ಯದ ತತ್ವದಂತೆ ಕುಪ್ಪಳ್ಳಿಯಲ್ಲಿಯೇ ಸರಳವಾಗಿ ವಿವಾಹವಾದೆ. ಮದುವೆಯಂದು ನನ್ನ ಎರಡು ಕೃತಿಗಳು ಲೋಕಾರ್ಪಣೆಯಾದವು. ಕವಿಗೋಷ್ಠಿ ನಡೆಸಿದೆವು. ನನ್ನ ಲೇಖನಗಳನ್ನು ಓದಿ ಎಲ್ಲೋ ಹಾವೇರಿಯಿಂದ ಒಬ್ಬ ಬಾಲಕಿ, ಗೋವಾದಿಂದ ಒಬ್ಬ ಕನ್ನಡಿಗರು ಕರೆ ಮಾಡಿದಾಗ ಸಿಗುವ ಸಂತಸ ಪ್ರಶಸ್ತಿ ಪುರಸ್ಕಾರಗಳಿಗೆ ಮೀರಿದ್ದು. ತುಮಕೂರಿನಲ್ಲಿ ಆಸ್ಪತ್ರೆಯೊಂದರ ಗೋಡೆಯ ಮೇಲೆ ಅಂಟಿಸಿದ್ದ ‘ಹೇಗೆ ಬರಲಮ್ಮಾ ಭೂಮಿಗೆ?’ ಎಂಬ ನನ್ನ ಲೇಖನ ಓದಿ ಒಬ್ಬ ಗರ್ಭಿಣಿ ಕರೆ ಮಾಡಿದ್ದು ಬರವಣಿಗೆಯ ಮಹತ್ವವನ್ನು ತಿಳಿಸಿಕೊಟ್ಟಿತು ಎಂದು ನುಡಿದರು.
ಈ ಸಂದರ್ಭದಲ್ಲಿ ಗ್ರಂಥಾಲಯಕ್ಕೆ ಸಾಹಿತಿ ಸದಾಶಿವ ಸೊರಟೂರು ತಮ್ಮ ‘ಕನಸುಗಳಿವೆ ಕೊಳ್ಳುವವರಿಲ್ಲ’, ‘ಹೆಸರಿಲ್ಲದ ಬಯಲು’, ‘ಹೊಸ್ತಿಲಾಚೆ ಬೆತ್ತಲೆ’, ‘ತೂತುಬಿದ್ದ ಚಂದಿರ’ ಕೃತಿಗಳನ್ನು ಕೊಡುಗೆಯಾಗಿ ನೀಡಿದರು.
ಕನ್ನಡ ಸಾರಸ್ವತ ಪರಿಚಾರಿಕೆ ವತಿಯಿಂದ ಸಾಹಿತಿ ಸದಾಶಿವ ಸೊರಟೂರು ಅವರನ್ನು ಗೌರವಿಸಲಾಯಿತು.
ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ಕಾರ್ಯದರ್ಶಿ ಎ.ಎಂ.ತ್ಯಾಗರಾಜ್, ಗ್ರಂಥಪಾಲಕ ಶ್ರೀನಿವಾಸ್, ಸಹಾಯಕಿ ಬಾಂಧವ್ಯ, ನೃತ್ಯ ಕಲಾವಿದ ಸಿ.ಎನ್.ಮುನಿರಾಜು, ಚಾಂದ್ಪಾಷ, ವಿ.ವೆಂಕಟರಮಣ, ವೃಷಬೇಂದ್ರಪ್ಪ, ನೃತ್ಯ ನಿರ್ದೇಶಕ ರಾಹುಲ್, ಟಿ.ಟಿ.ನರಸಿಂಹಪ್ಪ ಹಾಜರಿದ್ದರು.

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!