ತಾಲ್ಲೂಕಿನ ಮುತ್ತೂರು ಗ್ರಾಮದಲ್ಲಿ ಮೇಜರ್ ಸುನಿಲ್‌ಕುಮಾರ್ ಅವರನ್ನು ಶನಿವಾರ ಕನ್ನಡ ಸಾರಸ್ವತ ಪರಿಚಾರಿಕೆ ವತಿಯಿಂದ ಗೌರವಿಸಿ ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಮಾತನಾಡಿದರು.
ಸೈನಿಕರ ಪಾಲಿಗೆ ಭವಿಷ್ಯವೆಂಬುದು ಅನಿಶ್ಚಿತತೆಯಿಂದ ಕೂಡಿರುತ್ತದೆ. ಹತ್ತೊಂಬತ್ತು ವರ್ಷಗಳ ಹಿಂದೆ ನಡೆದ ಕಾರ್ಗಿಲ್ ಯುದ್ಧದಲ್ಲಿ ನೂರಾರು ಸೈನಿಕರು ತಮ್ಮ ಜೀವವನ್ನೇ ಬಲಿಕೊಟ್ಟರು. ವೀರ ಯೋಧರನ್ನು ಗೌರವಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದು ಅವರು ತಿಳಿಸಿದರು.
ಪ್ರತಿವರ್ಷ ಜುಲೈ ತಿಂಗಳು ಬಂದಾಗ ಕಾರ್ಗಿಲ್ ಯುದ್ಧ ನೆನಪಾಗುತ್ತದೆ. ಕಾರ್ಗಿಲ್‌ನಲ್ಲಿ ಭಯೋತ್ಪಾದಕರ ಸದ್ದಡಗಿಸುತ್ತಾ ನೆಲಕ್ಕುರುಳಿದ 533 ವೀರಯೋಧರು, ಕೈ ಕಾಲು ಕಣ್ಣು ಕಳೆದುಕೊಂಡ 1363 ಸೈನಿಕರನ್ನು ನಾವು ನೆನೆಯದಿದ್ದರೆ ಆತ್ಮವಂಚನೆಯಾಗುತ್ತದೆ. ನಮ್ಮ ತಾಲ್ಲೂಕಿನ ವೀರ ಯೋಧರನ್ನು ಗೌರವಿಸಿ ಅವರಿಂದ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಮೇಜರ್ ಸುನಿಲ್‌ಕುಮಾರ್ ಮಾತನಾಡಿ, ಕೇವಲ ಮೂರು ದಿನಗಳ ರಜೆಯಿದ್ದುದರಿಂದ ಹುಟ್ಟಿದ ಊರಿಗೆ ಬಂದಿದ್ದೇನೆ. ಮುಂದಿನ ಬಾರಿ ಬಂದಾಗ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಸೇನೆಯ ಅನುಭವವನ್ನು ವಿವರಿಸಿ ಅವರಿಗೆ ಸೇನೆಯ ಮಹತ್ವವನ್ನು ತಿಳಿಸುತ್ತೇನೆ. ನಮ್ಮ ತಾಲ್ಲೂಕಿನ ಮುಂದಿನ ಪೀಳಿಗೆಯ ಮಕ್ಕಳು ಭಾರತೀಯ ಸೇನೆಯನ್ನು ಇಷ್ಟಪಟ್ಟು ಸೇರಲಿ ಎಂಬುದು ನನ್ನ ಆಸೆ. ಯೋಧರನ್ನು ಕಳೆದುಕೊಂಡ ಕುಟುಂಬದವರನ್ನು ಕರೆಸಿ ಶಾಲೆಗಳಲ್ಲಿ ಕಾರ್ಯಕ್ರಮಗಳನ್ನು ಮಾಡಿ. ಆ ಕುಟುಂಬದವರು ಅತ್ಯಂತ ಶ್ರೇಷ್ಠರು. ಅವರಿಗೆ ಸಮಾಜದ ಬೆಂಬಲವಿರಲಿ ಎಂದು ಹೇಳಿದರು.
ತಾಲ್ಲೂಕು ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಗುರುರಾಜರಾವ್, ಮಾಜಿ ನಗರಸಭಾ ಸದಸ್ಯ ಲಕ್ಷ್ಮೀನಾರಾಯಣ, ಸಿ.ಪಿ.ಈ.ಕರಗಪ್ಪ, ಅಜಿತ್ ಕೌಂಡಿನ್ಯ, ಪ್ರಭು ಹಾಜರಿದ್ದರು.
- Advertisement -
- Advertisement -
- Advertisement -