ತಾಲ್ಲುಕಿನ ಚೌಡಸಂದ್ರ ಗ್ರಾಮದಲ್ಲಿ ಹರಿಕಥೆ ವಿದ್ವಾನ್ ಹಾಗೂ ಭಜನೆ ಕಲಾವಿದ ನಾಮದೇವ್ ಅವರ ಮನೆಯಲ್ಲಿ ಮಂಗಳವಾರ ಸಂಜೆ ಕಸಾಪ ತಾಲ್ಲೂಕು ಘಟಕದಿಂದ ಆಯೋಜಿಸಿದ್ದ ‘ಮನೆಯಂಗಳದಲ್ಲಿ ನುಡಿಸಿರಿ’ ಕಾರ್ಯಕ್ರಮದಲ್ಲಿ ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಕೈವಾರ ಶ್ರೀನಿವಾಸ್ ಮಾತನಾಡಿದರು.
ಜಾನಪದ ಕಲೆಗಳನ್ನು ಉಳಿಸಿ, ಬೆಳೆಸಿದರೆ ಗ್ರಾಮದಲ್ಲಿ ಹೊಂದಾಣಿಕೆ, ಸಹಬಾಳ್ವೆ ಇರುತ್ತದೆ. ಜನರಿಗೆ ರಾಮಾಯಣ, ಭಾರತಗಳ ಪರಿಚಯವನ್ನು ಮಾಡಿಕೊಡುವಲ್ಲಿ ಹರಿಕಥೆ, ಭಜನೆ ಮತ್ತು ಪುರಾಣ ವಾಚನಗಳು ನೆರವಾಗಿವೆ. ಜನರ ಬದುಕು, ಕಷ್ಟ ಸುಖ, ನೋವು ನಲಿವುಗಳಿಗೆ ಮುಲಾಮಿನಂತೆ ಕೆಲಸ ಮಾಡುವ ಭಕ್ತಿ ರಸವು ಕನ್ನಡ ಸಾಹಿತ್ಯ ಪರಿಷತ್ತಿನ ಭಾಗವಾಗಿದೆ ಎಂದು ಅವರು ಹೇಳಿದರು.
ಗ್ರಾಮೀಣ ಭಾಗದಲ್ಲಿ ಎಲೆಮರೆಯ ಕಾಯಿಗಳಂತೆ ಕೇವಲ ತಮ್ಮ ಆತ್ಮ ಸಂತೋಷಕ್ಕಾಗಿ ಹರಿಕಥೆ, ಭಜನೆ ಕಲೆ, ತತ್ವಪದ, ವಿವಿಧ ವಾದ್ಯಗಳನ್ನು ಕರಗತ ಮಾಡಿಕೊಂಡ ಸಾಧಕರೇ ನಿಜವಾದ ಕನ್ನಡದ ರಾಯಭಾರಿಗಳು. ಅವರ ಮನೆಯಲ್ಲಿ ನಾದಗಂಗೆಯನ್ನು ಕನ್ನಡದ ಬಂಧುಗಳು ಆಲಿಸಿ ಕಲಾವಿದರ ಮನಸ್ಸಿನೊಳಗೆ ಪ್ರವೇಶ ಪಡೆಯುವ ಅವಕಾಶವನ್ನು ಕಸಾಪ ಪಡೆದಿದೆ ಎಂದು ತಿಳಿಸಿದರು.
ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಎ.ಎಂ.ತ್ಯಾಗರಾಜ್ ಮಾತನಾಡಿ, ತಾಲ್ಲೂಕಿನ ಗಡಿ ತೆಲುಗುಮಯವಾಗಿದೆ ಎಂದು ಎಲ್ಲರೂ ಹೇಳುತ್ತಾರೆ. ಈ ಕರಣದಿಂದ ಕಸಾಪ ಕಾರ್ಯಕ್ರಮಗಳನ್ನು ಗ್ರಾಮೀಣ ಭಾಗದಲ್ಲಿಯೇ ನಡೆಸಲು ತೀರ್ಮಾನಿಸಿದ್ದು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದೇವೆ. ಜನರಿಂದ ಸಕಾರಾತ್ಮಕವಾಗಿ ಸ್ಪಂದನೆಯಿದೆ ಎಂದರು.
ಹರಿಕಥೆ ವಿದ್ವಾನ್ ಹಾಗೂ ಭಜನೆ ಕಲಾವಿದ ನಾಮದೇವ್ ಮಾತನಾಡಿ, ಮೊಟ್ಟ ಮೊದಲ ಬಾರಿಗೆ ಕಲಾವಿದರ ಮನೆಯಲ್ಲಿ ಅದರಲ್ಲೂ ಹಳ್ಳಿಗೆ ಕಸಾಪ ಬಂದಿರುವುದು ಸಂತಸದ ವಿಷಯ. ಕ್ರಿಯಾಶೀಲ ಆಲೋಚನೆಯುಳ್ಳ ಮುಂದಿನ ಕಸಾಪ ಕಾರ್ಯಕ್ರಮಗಳಿಗೆ ಕಲಾವಿದರು ತನುಮನಧನದ ಜೊತೆಯಲ್ಲಿ ಸದಾ ತೊಡಗಿಸಿಕೊಳ್ಳುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಕಸಾಪ ವತಿಯಿಂದ ಹರಿಕಥೆ ವಿದ್ವಾನ್ ನಾಮದೇವ್ ಅವರನ್ನು ಗೌರವಿಸಲಾಯಿತು.
ನಿವೃತ್ತ ರೇಷ್ಮೆ ಪ್ರದರ್ಶಕ ಬಸವರಾಜ್, ರೇಷ್ಮೆ ಇಲಾಖೆಯ ಅಧಿಕಾರಿ ಜಯದೇವಪ್ಪ ಗುಗ್ರಿ, ಕಸಾಪ ತಾಲ್ಲೂಕು ಘಟಕದ ಕಾರ್ಯದರ್ಶಿಗಳಾದ ಎಸ್.ಸತೀಶ್, ಚಾಂದ್‌ಪಾಷ, ಖಜಾಂಚಿ ಸುಧೀರ್, ಮಹಿಳಾ ಪ್ರತಿನಿಧಿ ದಾಕ್ಷಾಯಿಣಿ, ಮುನಿರಾಜು, ರಮೇಶ್, ಎಸ್.ವಿ.ನಾಗರಾಜರಾವ್, ಶಂಕರ್, ಎಂ.ಎನ್.ನಾಗರಾಜ್, ಮುನಿಶಾಮಪ್ಪ, ಸಿ.ವಿ.ಕೃಷ್ಣಪ್ಪ, ನರಸಿಂಹಮೂರ್ತಿ, ದೇವರಾಜ್, ನಾಗರಾಜ್, ಕೃಷ್ಣಪ್ಪ, ನಂಜುಂಡಪ್ಪ, ಶಿವಾನಂದ ಹಾಜರಿದ್ದರು.
- Advertisement -
- Advertisement -
- Advertisement -