ಕರೋನಾ ತಂದಿಟ್ಟ ಸಂಕಷ್ಟದಲ್ಲಿ ಮಾನವೀಯತೆ ಬಹಳ ಮುಖ್ಯ – ತಾಲ್ಲೂಕು ಪಂಚಾಯಿತಿ ಇಒ ಶಿವಕುಮಾರ್

0
104

ನಗರದ ಕೋಟೆ ವೃತ್ತದಲ್ಲಿ ಬೈತುಲ್ ಮಾಲ್ ಸಹಾಯ ಕೇಂದ್ರದಲ್ಲಿ ಗುರುವಾರ ಮರ್ಕಜ್ ಎ ಇತ್ತೆಹಾದುಲ್ ಮುಸ್ಲಿಮೀನ್ (ಬೈತುಲ್ ಮಾಲ್ ಮತ್ತು ಜಕಾತ್ ಫೌಂಡೇಶನ್), ಮದೀನತುಲ್ ಉಲೂಮ್ ವೆಲ್ಫೇರ್ ಟ್ರಸ್ಟ್, ಮದೀನಾ ಮಸ್ಜಿದ್ ಆಡಳಿತ ಮಂಡಳಿ, ಟೀಮ್ ಸಿಲ್ಕಿಸ್ತಾನ್ (ಸ್ವಯಂ ಸೇವಕರ ಬಳಗ)ದ ವತಿಯಿಂದ ಅತ್ಯಂತ ಬಡ ಕುಟುಂಬಗಳಿಗೆ ಒಂದು ತಿಂಗಳಿಗಾಗುವಷ್ಟು ಆಹಾರ ಪದಾರ್ಥಗಳ ಕಿಟ್ ವಿತರಿಸಿ ತಾಲ್ಲೂಕು ಪಂಚಾಯಿತಿ ಇಒ ಶಿವಕುಮಾರ್ ಮಾತನಾಡಿದರು.
ಮಾನವೀಯತೆಯು ನಮ್ಮ ಸಂಸ್ಕೃತಿಯ, ಬದುಕಿನ ಭಾಗವಾಗಿದೆ. ಅದಕ್ಕಾಗಿಯೇ ಕೊರೊನಾ ತಂದಿಟ್ಟ ಸಂಕಷ್ಟಕರ ದಿನಗಳಲ್ಲಿ ಉಳ್ಳವರು, ಇಲ್ಲದವರಿಗೆ ನೆರವಾಗುತ್ತಿದ್ದಾರೆ. ಸರ್ಕಾರವನ್ನೇ ನೆಚ್ಚಿಕೊಂಡು ಕೂರದೆ ಸಂಘಸಂಸ್ಥೆಗಳು ಬಡವರಿಗೆ ಸಹಾಯಹಸ್ತವನ್ನು ಚಾಚುತ್ತಿದ್ದಾರೆ ಎಂದು ಅವರು ತಿಳಿಸಿದರು.
ಶಿಡ್ಲಘಟ್ಟದಲ್ಲಿ ರೇಷ್ಮೆಯನ್ನು ನಂಬಿ ಬದುಕುವ ನೂರಾರು ಕೆಲಸಗಾರರಿದ್ದಾರೆ. ಅವರುಗಳೀಗ ನಿರುದ್ಯೋಗಿಗಳಾಗಿದ್ದಾರೆ. ಅವರ ಕುಟುಂಬಗಳಿಗೆ ನೆರವಾಗುತ್ತಿರುವುದು ಅಭಿನಂದನೀಯ ಎಂದರು.
ಯೂನಿಟಿ ಸಿಲ್ ಸಿಲಾ ಅಧ್ಯಕ್ಷ ಮಹಮ್ಮದ್ ಅಸದ್ ಮಾತನಾಡಿ, ” ಟೀಮ್ ಸಿಲ್ಕಿಸ್ತಾನ್ ಸ್ವಯಂ ಸೇವಕರ ತಂಡದ ಮೂಲಕ ನಾವು ನಗರದಾದ್ಯಂತ ಸಮೀಕ್ಷೆ ನಡೆಸಿದ್ದೇವೆ. ಆಹಾರ ಪದಾರ್ಥಗಳು, ತರಕಾರಿ, ಔಷಧಿ ಅಗತ್ಯವಿರುವವರ ಪಟ್ಟಿ ತಯಾರಿಸಿದ್ದು, ಲಾಕ್ ಡೌನ್ ನಿಂದ ಕಷ್ಟಪಡುತ್ತಿರುವ 1058 ಬಡ ಕುಟುಂಬಗಳನ್ನು ನಾವು ಗುರುತಿಸಿದ್ದೇವೆ. ಮೊದಲ ಹಂತದಲ್ಲಿ 350 ಕುಟುಂಬಗಳಿಗೆ ಸಕ್ಕರೆ, ಅಕ್ಕಿ, ಮೈದಾ, ಬೇಳೆ, ಎಣ್ಣೆ, ರಾಗಿಹಿಟ್ಟು ಮೊದಲಾದ ಎಂಟು ಆಹಾರ ಪದಾರ್ಥಗಳ ಕಿಟ್ ವಿತರಿಸುತ್ತಿದ್ದೇವೆ. ಸ್ವಯಂ ಸೇವಕರು ಗುರುತಿಸಿರುವ ಮನೆಗಳಿಗೇ ತೆರಳಿ ಅವಶ್ಯಕ ವಸ್ತುಗಳನ್ನು ವಿತರಿಸಿ ಬರುತ್ತೇವೆ” ಎಂದು ಹೇಳಿದರು.
ತಹಶೀಲ್ದಾರ್ ಕೆ.ಅರುಂಧತಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ, ನಗರಸಭೆ ಪೌರಾಯುಕ್ತ ತ್ಯಾಗರಾಜ್, ವಾರ್ಡ್ ನಂ 7 ರ ನಗರಸಭೆ ನೋಡಲ್ ಅಧಿಕಾರಿ ಸುಧಾ, ಸಬ್ ಇನ್ಸ್ ಪೆಕ್ಟರ್ ಲಿಯಾಖತುಲ್ಲಾ, ಮದೀನ ಮಸೀದಿ ಆಡಳಿತ ಮಂಡಳಿ ಸದಸ್ಯರಾದ ಎಚ್.ಎಸ್ ಫಯಾಜ್ ಅಹ್ಮದ್, ನಿಸಾರ್ ಅಹ್ಮದ್, ಸಾದಿಖ್ ಆಹ್ಮದ್, ಟೀಮ್ ಸಿಲ್ಕಿಸ್ತಾನ್ ಸ್ವಯಂ ಸೇವಕರಾದ ಮೊಹಮ್ಮದ್ ಅಸದ್, ಅಫ್ಸರ್ ಪಾಷ, ಖಾಜಾ ಷರೀಫ್, ಮುಜಾಹಿದ್ ಖಾನ್, ಫರೀದ್ ಖಾನ್, ಯೂನಿಟಿ ಸಿಲ್‌ಸಿಲಾ ಉಪಾಧ್ಯಕ್ಷ ಅಕ್ರಮ್ ಹಾಜರಿದ್ದರು.

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!