ತಾಲ್ಲೂಕಿನ ಮೇಲೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಮುದಾಯ ಭವನದಲ್ಲಿ ಭಾನುವಾರ ತಾಲ್ಲೂಕು ಕಸಾಪ ವತಿಯಿಂದ ಆಯೋಜಿಸಿದ್ದ ೧೦೫ನೇ ಕಸಾಪ ಸಂಸ್ಥಾಪನಾ ದಿನಾಚರಣೆಯ ಸಮಾರಂಭದಲ್ಲಿ ವಿಶೇಷ ಉಪನ್ಯಾಸ ನೀಡಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಶೇಖರ ಬಿ ಹಡಪದ್ ಮಾತನಾಡಿದರು.
ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಸರ್.ಎಂ.ವಿಶ್ವೇಶ್ವರಯ್ಯ ಅವರ ದೂರದೃಷ್ಟಿ ಫಲವಾಗಿ ಕನ್ನಡ ಸಾಹಿತ್ಯ ಪರಿಷತ್ತು ಉದಯವಾಗಿ, ಕರ್ನಾಟಕ ಏಕೀಕರಣ ಹೋರಾಟಕ್ಕೆ ಸಮಗ್ರತೆ ಒದಗಿಸಿತು. ಕನ್ನಡದ ಅಶ್ವಿನಿ ದೇವತೆಗಳಾದ ಎ.ಆರ್.ಕೃಷ್ಣಶಾಸ್ತ್ರೀ ಮತ್ತು ಟಿ.ಎಸ್.ವೆಂಕಣ್ಣಯ್ಯ ಅವರ ಕೊಡುಗೆಯೂ ಅನನ್ಯವಾದದ್ದು ಎಂದು ಅವರು ತಿಳಿಸಿದರು.
ಟಿಪ್ಪುವಿನ ನಂತರದ ಕಾಲದಲ್ಲಿ ಒಡೆದುಹೋಗಿದ್ದ ಕನ್ನಡ ನಾಡು, ಬ್ರಿಟಿಷರ ಕಾಲದಲ್ಲಿ ಇನ್ನಷ್ಟು ಹರಿದು ಹಂಚಿ ಹೋಯಿತು. ಇದರಿಂದ ಕನ್ನಡ ನಾಡಿನಲ್ಲಿ ಕನ್ನಡಿಗರೇ ಅನಾಥರಾಗುವಂತಾಗಿತ್ತು. ಈ ಸಂದರ್ಭದಲ್ಲಿ ಧಾರವಾಡದಲ್ಲಿ ರಾಮಚಂದ್ರ ಹಣಮಂತರಾವ ದೇಶಪಾಂಡೆ ಮತ್ತು ಸಮಾನ ಮನಸ್ಕರಿಂದ ಪ್ರಾರಂಭವಾದ ಕರ್ನಾಟಕ ವಿದ್ಯಾವರ್ಧಕ ಸಂಘ ಕನ್ನಡಕ್ಕೆ ಹೊಸ ಚೈತನ್ಯವನ್ನು ತುಂಬಿತು. ಕನ್ನಡಿಗರು ಅಸ್ಪೃಶ್ಯರಂತೆ ಅಡಗಿಕೊಳ್ಳಬೇಕಿದ್ದ ಸಮಯದಲ್ಲಿ ದೇಶಪಾಂಡೆಯವರು ಹೋರಾಟಗಳನ್ನು ರೂಪಿಸಿದರು. ಸಿರಿಗನ್ನಡಂ ಗೆಲ್ಗೆ ಎಂಬ ಸಪ್ತಾಕ್ಷರಿ ಮಂತ್ರದೊಂದಿಗೆ ಕರ್ನಾಟಕದ ಏಕೀಕರಣದ ಮೊದಲ ಕಿಡಿ ಹೊತ್ತಿಸಿದರು. ಧಾರವಾಡದಲ್ಲಿ ಎದ್ದು ನಿಂತ ವಿದ್ಯಾವರ್ಧಕ ಸಂಘವೇ ಮುಂದೆ ಬೆಂಗಳೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತೆಂಬ ಸಂಸ್ಥೆ ಉದಯವಾಗಲು ಕಾರಣವಾದದ್ದು ಎಂದು ವಿವರಿಸಿದರು.
ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಕೈವಾರ ಶ್ರೀನಿವಾಸ್ ಮಾತನಾಡಿ, ಕನ್ನಡ ಕರ್ನಾಟಕದ ಸಾರ್ವಭೌಮ ಭಾಷೆ. ಕರ್ನಾಟಕದಲ್ಲಿಯೇ ಕನ್ನಡ ಅಲ್ಪ ಸಂಖ್ಯಾತ ಭಾಷೆಯಾಗಿ ಕಳೆದು ಹೋದರೆ ಮತ್ತೆಲ್ಲಿಯೂ ಬೆಳೆಯಲು ಸಾಧ್ಯವಿಲ್ಲ. ಕನ್ನಡವನ್ನು ಆಡು ಭಾಷೆಯಾಗಿ ಬಳಸುವ ಮೂಲಕ ಪ್ರತಿ ಮನೆ ಮನಗಳಲ್ಲಿ ಬೆಳಗುವಂತೆ ಮಾಡಬೇಕು ಎಂದರು.
ಕಸಾಪ ತಾಲ್ಲೂಕು ಅಧ್ಯಕ್ಷ ಎ.ಎಂ.ತ್ಯಾಗರಾಜ್ ಮಾತನಾಡಿ, ಸುಲಲಿತವಾದ ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಸಮೃದ್ಧ ಸಾಹಿತ್ಯ ನಿರ್ಮಾಣಗೊಂಡಿದೆ. ಆಂಗ್ಲ ಭಾಷೆಯ ಪ್ರಭಾವದ ನಡುವೆಯೂ ಕನ್ನಡ ಸತ್ವಯುತವಾಗಿ ಬೆಳೆಯುತ್ತಿದೆ ಎಂದು ಹೇಳಿದರು.
ವಿಜಯಪುರ ಪ್ರಗತಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಕನ್ನಡಿಗ ಬಸವರಾಜು ಕಸಾಪ ಬೆಳೆದು ಬಂದ ಹಾದಿಯ ಕುರಿತು ಮಾತನಾಡಿದರು. ರೇಷ್ಮೆ ಇಲಾಖೆ ನಿವೃತ್ತ ಉಪನಿರ್ದೇಶಕ ಹಾಗೂ ಕನ್ನಡ ಪರಿಚಾರಕ ಎಚ್.ಆರ್.ಅಮರನಾಥ ಅವರನ್ನು ಕಸಾಪ ವತಿಯಿಂದ ಸನ್ಮಾನಿಸಲಾಯಿತು.
ಮೇಲೂರು ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷರು ಹಾಗೂ ಸದಸ್ಯರು, ಕಸಾಪ ಗೌರವ ಕಾರ್ಯದರ್ಶಿ ಎಚ್.ಸತೀಶ್, ನಗರ ಘಟಕದ ಅಧ್ಯಕ್ಷ ಸಿ.ಎನ್.ಮುನಿರಾಜು, ಸಂಘಸಂಸ್ಥೆಗಳ ಪ್ರತಿನಿಧಿ ಶಂಕರ್, ಮುನಿಯಪ್ಪ, ದಾಕ್ಷಾಯಿಣಿ, ಸುಧೀರ್, ಆರ್.ಎ.ಉಮೇಶ್, ಧರ್ಮೇಂದ್ರ, ಸುದರ್ಶನ್, ರಾಮಾಂಜಿನಪ್ಪ, ನಾಮದೇವ್, ಪ್ರತೀಶ್, ಕೆಂಪಣ್ಣ, ಅಭಿಷೇಕ್, ಮಹೇಂದ್ರ, ವೆಂಕಟರಮಣರೆಡ್ಡಿ ಹಾಜರಿದ್ದರು.
- Advertisement -
- Advertisement -
- Advertisement -