ನಗರದ ಬಸ್ ನಿಲ್ದಾಣದ ಬಳಿಯಿರುವ ರೇಷ್ಮೆ ಬಿತ್ತನೆ ಕೋಠಿ ಕಟ್ಟಡದಲ್ಲಿ ಕೆ.ಎಸ್.ಎಂ.ಬಿ (ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ) ವತಿಯಿಂದ ರೀಲರುಗಳಿಂದ ರೇಷ್ಮೆ ಅಡವಿಟ್ಟುಕೊಂಡು ಹಣ ನೀಡುವ ಪ್ರಕ್ರಿಯೆ ಪ್ರಾರಂಭವಾದ ಸಂದರ್ಭದಲ್ಲಿ ರೈತ ಸಂಘದ ರಾಜ್ಯ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ ಮಾತನಾಡಿದರು.
ರೇಷ್ಮೆ ಗೂಡನ್ನು ಕೊಳ್ಳುವ ರೀಲರುಗಳ ಬಳಿ ಹಣವಿಲ್ಲ, ಅದಕ್ಕಾಗಿ ರೇಷ್ಮೆ ಗೂಡಿನ ಧಾರಣೆ ಕುಸಿದು ರೈತರು ಕಂಗಾಲಾಗಿದ್ದಾರೆ. ಸರ್ಕಾರ ಮಧ್ಯಪ್ರವೇಶಿಸಬೇಕೆಂದು ರೈತ ಸಂಘ ಒತ್ತಾಯಿಸಿದ ಹಿನ್ನೆಲೆಯಲ್ಲಿ ಈ ದಿನ ಸರ್ಕಾರ ರೇಷ್ಮೆಯನ್ನು ಅಡಮಾನವಾಗಿ ಇಟ್ಟುಕೊಂಡು ಹಣ ನೀಡಲು ಮುಂದಾಗಿದೆ ಎಂದು ಅವರು ತಿಳಿಸಿದರು.
ಕೊರೊನಾ ಎಂಬ ಮಹಾಮಾರಿಯಿಂದ ರೈತಕುಲ ನಶಿಸಿ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ರೇಷ್ಮೆ ಬೆಳೆಗಾರರೂ ಇದಕ್ಕೆ ಹೊರತಾಗಿಲ್ಲ. ರೇಷ್ಮೆ ಬೆಳೆಗಾರರಿಗೆ ಹಣ ಬರುವುದು ರೀಲರುಗಳಿಂದ. ರೀಲರುಗಳು ತಮ್ಮ ರೇಷ್ಮೆಯನ್ನು ವಿವಿಧ ರಾಜ್ಯ, ಜಿಲ್ಲೆಗಳಿಗೆ ತೆಗೆದುಕೊಂಡು ಹೋಗಿ ಮಾರಲಾಗದೇ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಅದಕ್ಕಾಗಿ ಸರ್ಕಾರ ಮಧ್ಯಪ್ರವೇಶಿಸಬೇಕೆಂದು ರಾಜ್ಯ ರೈತ ಸಂಘ ಮನವಿ ಮಾಡಿತ್ತು. ಅದನ್ನು ಪುರಸ್ಕರಿಸಿದ ಸರ್ಕಾರ ಕೆ.ಎಸ್.ಎಂ.ಬಿ ಯಲ್ಲಿರುವ ಒಂಬತ್ತು ಕೋಟಿ ಹಣವನ್ನು ಹಂತಹಂತವಾಗಿ ಬಿಡುಗಡೆ ಮಾಡಿ ರೀಲರುಗಳಿಗೆ ನೆರವಾಗುವುದಾಗಿ ತಿಳಿಸಿದ್ದಾರೆ.
ಆಂಧ್ರ ಸರ್ಕಾರ ರೈತರ ತರಕಾರಿ ಕೊಳ್ಳಲೆಂದು 35 ಕೋಟಿ ಹಣ ಮೀಸಲಿರಿಸಿದೆ. ರೇಷ್ಮೆ ಕೊಳ್ಳಲು 25 ಕೋಟಿ ಹಣ ನೀಡಬೇಕೆಂದು ನಾವು ಒತ್ತಾಯಿಸಿದೆವು. ಸಧ್ಯಕ್ಕೆ ಒಂಬತ್ತು ಕೋಟಿ ರೂ ನೀಡುತ್ತಿದ್ದೇವೆ. ಅಗತ್ಯಬಿದ್ದಲ್ಲಿ ಇನ್ನಷ್ಟು ಕೊಡುವುದಾಗಿ ಭರವಸೆ ನೀಡಿದ್ದಾರೆ. ಕೆ.ಎಸ್.ಎಂ.ಬಿ ವತಿಯಿಂದ ಅಧಿಕಾರಿಯೊಬ್ಬರನ್ನು ನೇಮಿಸಿದ್ದು, ಪ್ರತಿ ದಿನ 50 ಲಕ್ಷ ರೂಗಳಷ್ಟು ರೇಷ್ಮೆಯನ್ನು ಅವರು ಅಡವಿಟ್ಟುಕೊಂಡು ಹಣ ನೀಡಲಿದ್ದಾರೆ ಎಂದು ಹೇಳಿದರು.
ಕೆ.ಎಸ್.ಎಂ.ಬಿ ಅಧಿಕಾರಿ ನಂಜಪ್ಪ ಮಾತನಾಡಿ, ಸರ್ಕಾರದ ಆದೇಶದ ಮೇರೆಗೆ ರೇಷ್ಮೆ ನೂಲು ಬಿಚ್ಚಾಣಿಕೆದಾರರಿಂದ ರೇಷ್ಮೆ ನೂಲನ್ನು ಒತ್ತೆಯಿಟ್ಟುಕೊಂಡು ಶೇ 70 ರಷ್ಟು ಹಣ ನೀಡುವ ಯೋಜನೆಯನ್ನು ಪ್ರಾರಂಭಿಸುತ್ತಿದ್ದೇವೆ. ಸರ್ಕಾರ ರೇಷ್ಮೆಗೆ ನಿಗಧಿಪಡಿಸಿರುವ ಬೆಲೆಯಂತೆ ಒಬ್ಬ ರೀಲರಿಗೆ ಗರಿಷ್ಠ ಒಂದು ಲಕ್ಷ ರೂಗಳವರೆಗೆ ಮಾತ್ರ ನೀಡಲಾಗುತ್ತದೆ. ಒತ್ತೆಯ ಅವಧಿ 90 ದಿನಗಳಾಗಿದ್ದು, ಇದಕ್ಕೆ ಸರಳ ಬಡ್ಡಿ ಹಾಗೂ ಸೇವಾ ಶುಲ್ಕವನ್ನು ವಿಧಿಸಲಾಗುವುದು ಎಂದು ತಿಳಿಸಿದರು.
- Advertisement -
- Advertisement -
- Advertisement -