ನಗರದ ರೇಷ್ಮೆ ಗೂಡಿನ ಮಾರುಕಟ್ಟೆಯ ಸಮೀಪದ ಆನಂದ ಬಾಬು ಮತ್ತು ಮಂಜುಳಾ ದಂಪತಿಯ ಮನೆಯಲ್ಲಿ ಕಸಾಪ ವತಿಯಿಂದ ಆಯೋಜಿಸಿದ್ದ “ಮನೆಯಂಗಳದಲ್ಲಿ ನುಡಿಸಿರಿ” ಕಾರ್ಯಕ್ರಮದಲ್ಲಿ ಕಸಾಪ ತಾಲ್ಲೂಕು ಅಧ್ಯಕ್ಷ ಎ.ಎಂ.ತ್ಯಾಗರಾಜ್ ಮಾತನಾಡಿದರು.
ಬೆಳಕು ಜ್ಞಾನದ ಸಂಕೇತ. ಪರಸ್ಪರರನ್ನು ಅರಿತುಕೊಂಡು ಪ್ರೀತಿಯಿಂದ ಜೀವನ ಮಾಡುವ ಪಾಠವನ್ನು ದೀಪಾವಳಿ ಕಲಿಸುತ್ತದೆ. ಪಟಾಕಿ ಹಚ್ಚಿ, ಪರಿಸರ ಹಾಳು ಮಾಡುವುದರ ಬದಲು ದೀಪಗಳನ್ನು ಬೆಳಗಿಸಿ, ಗಿಡಗಳನ್ನು ನೆಟ್ಟು ದೀಪಾವಳಿ ಆಚರಿಸೋಣ ಎಂದು ಅವರು ತಿಳಿಸಿದರು.
ದೀಪಾವಳಿ ಹಬ್ಬ ಪಟಾಕಿಗಳ ಹಾವಳಿಯಿಂದ ಶಬ್ದಾವಳಿಯಾಗಿ ಮಾರ್ಪಾಟಾಗಿ, ಪರಿಸರ, ಮಾನವ, ಪ್ರಾಣಿ ಮತ್ತು ಪಕ್ಷಿ ಸಂಕುಲದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ದೀಪಾವಳಿಯನ್ನು ಪಟಾಕಿ ಹಚ್ಚಿ ಮಾಲಿನ್ಯದ ಹಬ್ಬವಾಗದೇ ಇರಲಿ ಎಂದು ಅರಿವನ್ನು ಮೂಡಿಸಬೇಕು. ಪ್ರತಿಯೊಬ್ಬರೂ ಈ ಆಚರಣೆಯನ್ನು ಪರಿಸರ ಸ್ನೇಹಿಯಾಗಿ ಮತ್ತು ಸುರಕ್ಷಿತವಾಗಿ ಆಚರಿಸಬೇಕು ಎಂದು ಹೇಳಿದರು.
ಪಾಶ್ಚಿಮಾತ್ಯ ಕಲೆ, ಸಂಸ್ಕೃತಿಯನ್ನು ತಿರಸ್ಕರಿಸಿ, ಪ್ರಪಂಚದಲ್ಲೇ ಗೌರವ-ಘನತೆ ತಂದುಕೊಟ್ಟಿರುವ ಭಾರತೀಯ ಕಲೆ, ಸಂಸ್ಕೃತಿ, ಪರಂಪರೆ ಬಿಂಬಿಸುವ ಭರತ ನಾಟ್ಯ ಕಲೆಯನ್ನು ಹಲವಾರು ಪೋಷಕರು ತಮ್ಮ ಮಕ್ಕಳಿಗೆ ಕಲಿಸುತ್ತಿರುವುದು ಅಭಿನಂದನೀಯ. ಕಲೆ, ಸಂಸ್ಕೃತಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಭರತನಾಟ್ಯ ಕಲಾವಿದೆಯರನ್ನು ಕಸಾಪ ವತಿಯಿಂದ ಸನ್ಮಾನಿಸಲಾಗುತ್ತಿದೆ ಎಂದು ನುಡಿದರು.
ಭರತನಾಟ್ಯ ಕಲಾವಿದೆಯರಾದ ಎಸ್.ಎ.ಶೋಭಿತ ಹಾಗೂ ಎನ್.ಭುವನ ನೃತ್ಯ ಪ್ರದರ್ಶನ ನೀಡಿದರು. ಈ ಸಂದರ್ಭದಲ್ಲಿ ಭರತನಾಟ್ಯ ಕಲಾವಿದೆಯರನ್ನು ಕಸಾಪ ವತಿಯಿಂದ ಸನ್ಮಾನಿಸಲಾಯಿತು.
ಕಲಾವಿದೆಯರ ಪೋಷಕರಾದ ಆನಂದ ಬಾಬು ಮತ್ತು ಮಂಜುಳಾ ದಂಪತಿ, ಲಕ್ಷ್ಮೀನಾರಾಯಣ ಮತ್ತು ನಾಗಮಣಿ ದಂಪತಿ, ನಗರಸಭೆ ಸದಸ್ಯ ಎಸ್.ಎ.ನಾರಾಯಣಸ್ವಾಮಿ, ವಿ.ಕೆ.ಸೋಮಶೇಖರ್, ಕಸಾಪ ಕಾರ್ಯದರ್ಶಿ ಎಸ್.ಸತೀಶ್, ನಗರ ಘಟಕ ಅಧ್ಯಕ್ಷ ಸಿ.ಎನ್. ಮುನಿರಾಜ್, ಸಂಘ ಸಂಸ್ಥೆಗಳ ಪ್ರತಿನಿಧಿ ಶಂಕರ್, ಮಹಿಳಾ ಪ್ರತಿನಿಧಿ ದಾಕ್ಷಾಯಣಿ, ನಾಗನರಸಿಂಹ, ರಾಮಚಂದ್ರಪ್ಪ, ಸುಬ್ರಮಣಿ, ಶೋಭ, ಭಾಗ್ಯಲಕ್ಷ್ಮಿ, ಮುರಳಿ, ಲಕ್ಷ್ಮಿ, ಮಂಜುಳಮ್ಮ, ಕವಿತ, ಮಂಜುನಾಥ್ ಹಾಜರಿದ್ದರು.
- Advertisement -
- Advertisement -
- Advertisement -