ನಗರದ ದಿಬ್ಬೂರಹಳ್ಳಿ ರಸ್ತೆಯ ನ್ಯಾಯಾಲಯದ ಆವರಣದಲ್ಲಿ ಮಂಗಳವಾರ ತಾಲ್ಲೂಕು ಕಾನೂನು ಸೇವಾ ಸಮಿತಿ, ತಾಲ್ಲೂಕು ವಕೀಲರ ಸಂಘ, ಕಂದಾಯ, ಶಿಕ್ಷಣ, ಆರೋಗ್ಯ, ಪೋಲಿಸ್, ಅರಣ್ಯ, ಕಾರ್ಮಿಕ, ಸಮಾಜ ಕಲ್ಯಾಣ, ನಗರಸಭೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಮಹಿಳಾ ಸಾಂತ್ವನ ಕೇಂದ್ರ ಸಂಯುಕ್ತಾಶ್ರಯದಲ್ಲಿ ಕಾನೂನು ಅರಿವು ನೆರವು ಕಾರ್ಯಕ್ರಮ ಹಾಗೂ ಕಾನೂನು ಸಾಕ್ಷರತಾ ರಥಕ್ಕೆ ಚಾಲನೆ ನೀಡಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕೆ.ಅಮರನಾರಾಯಣ ಮಾತನಾಡಿದರು.
ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿರುವ ಜನರಿಗೆ ಕಾನೂನಿನ ಅರಿವು ಮತ್ತು ನೆರವು ಒದಗಿಸುವ ದೃಷ್ಠಿಯಿಂದ ಕಾನೂನು ಸಾಕ್ಷರತಾ ರಥ ಕಾರ್ಯಕ್ರಮ ಆರಂಭವಾಗಿದ್ದು ನಾಗರಿಕರು ಸದುಪಯೋಗ ಮಾಡಿಕೊಳ್ಳಬೇಕೆಂದು ಅವರು ತಿಳಿಸಿದರು.
ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಸಾಮಾನ್ಯ ನಾಗರಿಕರಿಗಿರುವ ಸಹ ಹಕ್ಕುಗಳು ಮತ್ತು ಕಾನೂನು ಕಾಯ್ದೆಗಳ ಕುರಿತು ಸಮಗ್ರವಾಗಿ ಮಾಹಿತಿ ನೀಡುವ ಉದ್ದೇಶದಿಂದ ಕಾನೂನು ಸಾಕ್ಷರತಾ ರಥ ಮೂಲಕ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ತಾಲ್ಲೂಕಿನ ವಿವಿದೆಡೆ ನಾಲ್ಕು ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ. ಬಿ.ಜಿ.ಎಸ್ ವಿದ್ಯಾ ಸಂಸ್ಥೆ, ನಲ್ಲೋಜನಹಳ್ಳಿ, ಎಸ್.ಎಂ.ಕೊಂಡರಾಜನಹಳ್ಳಿ, ಜಂಗಮಕೋಟೆ, ಗರುಡಾದ್ರಿ ಶಾಲೆ, ಎಚ್.ಕ್ರಾಸ್, ಕೊಂಡಪ್ಪಗಾರಹಳ್ಳಿ, ವಾಸವಿ ಶಾಲೆ, ಚಾಕ್ಕಪ್ಪನಹಳ್ಳಿ, ನಾರಾಯಣದಾಸರಹಳ್ಳಿ, ಮಳಮಾಚನಹಳ್ಳಿ, ಕಾಳನಾಯಕನಹಳ್ಳಿ ಹಾಗೂ ಶಿಡ್ಲಘಟ್ಟ ನಗರದಲ್ಲಿ ನಡೆಸಲಾಗುತ್ತಿದ್ದು ನಾಗರಿಕರು ಈ ಕಾರ್ಯಕ್ರಮವನ್ನು ಸದುಪಯೋಗ ಮಾಡಿಕೊಳ್ಳಬೇಕೆಂದು ಮನವಿ ಮಾಡಿದರು.
ಎಲ್ಲರೂ ಕಾನೂನಿನ ಅರಿವು ಹೊಂದುವುದು ಸಂವಿಧಾನದಲ್ಲಿಯೇ ಹೇಳಿದೆ. ಹಾಗಾಗಿ ಕಾನೂನು ರಥದೊಂದಿಗೆ ವಿವಿಧ ಗ್ರಾಮಗಳಿಗೆ ಆಗಮಿಸುತ್ತಿದ್ದು ಕಾನೂನಿನ ಬಗ್ಗೆ ವಕೀಲರು ತಿಳಿಸಿಕೊಡುತ್ತಾರೆ. ಬಡತನವೆಂದು ಕೈಕಟ್ಟಿ ಅನ್ಯಾಯ ಸಹಿಸಬಾರದು. ಜನ ತಮ್ಮ ಹಕ್ಕುಗಳ ಜೊತೆಗೆ ಕರ್ತವ್ಯದ ಬಗ್ಗೆಯೂ ಯೋಚಿಸುವಂತಾಗಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ಹಾಗೂ ಸಂಸ್ಕಾರವನ್ನು ನೀಡುವುದು ಅತ್ಯವಶ್ಯಕವಾಗಿದೆ. ಇಂದು ಮಕ್ಕಳ ಮೇಲೆ ಅನೇಕ ರೀತಿಯ ದೌರ್ಜನ್ಯಗಳು, ಲೈಂಗಿಕ ಶೋಷಣೆಗಳು ನಡೆಯುತ್ತಿರುವುದು ಖೇದದ ಸಂಗತಿ. ತಾಯಂದಿರು ಇದರ ಸೂಕ್ಷ್ಮತೆಯನ್ನು ಅರಿತು ಮಕ್ಕಳ ಚಲನವಲನ, ವರ್ತನೆಗಳ ಮೇಲೆ ನಿಗಾ ವಹಿಸಬೇಕು. ಅಲ್ಲದೇ ತಮ್ಮ ಜೀವಕ್ಕೆ ಮತ್ತು ಆಸ್ತಿ ಪಾಸ್ತಿಗೆ ಹಾನಿ ಉಂಟಾದಲ್ಲಿ ಪ್ರಾಧಿಕಾರ ಅವಶ್ಯಕ ನೆರವು ನೀಡಿ ನ್ಯಾಯ ಒದಗಿಸುತ್ತದೆ ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶರಾದ ದೇವರಾಜ್, ಡಿ.ಆರ್.ಮಂಜುನಾಥ್, ಪ್ರಧಾನ ಸಿವಿಲ್ ನ್ಯಾಯಾಧೀಶ ಸಂಜುಕುಮಾರ್ ಎ.ಪಚ್ಚಾಪುರೆ, ಅಪರ ಸಿವಿಲ್ ನ್ಯಾಯಾಧೀಶೆ ಡಿ.ರೋಹಿಣಿ, ಜಿಲ್ಲಾ ಹಿರಿಯ ಶ್ರೇಣಿ ನ್ಯಾಯಾಧೀಶೆ ರೂಪ, ತಾಲ್ಲೂಕು ವಕೀಲರ ಸಂಘದ ಗೌರವಾಧ್ಯಕ್ಷ ಎಂ.ಪಾಪಿರೆಡ್ಡಿ, ಅಧ್ಯಕ್ಷ ಟಿ.ವಿ.ಚಂದ್ರಶೇಖರಗೌಡ, ಎ.ಪಿ.ಪಿ ಕುಮುದಿನಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ವೈ.ನಾಗವೇಣಿ, ಸಾಂತ್ವನ ಕೇಂದ್ರದ ವಿಜಯ ವೆಂಕಟರಾಮ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ, ವಕೀಲರಾದ ಎಂ.ಬಿ.ಲೋಕೇಶ್, ವಿ.ಸುಬ್ರಮಣ್ಯಪ್ಪ, ಡಾ.ವಿಜಯಕುಮಾರ್ ಹಾಜರಿದ್ದರು.
- Advertisement -
- Advertisement -
- Advertisement -