ಪರಸ್ಪರ ಪ್ರೀತಿ ವಿಶ್ವಾಸ ಬೆಳೆಸಿಕೊಳ್ಳುವ ಮೂಲಕ ಎಲ್ಲಾ ಕಾರ್ಮಿಕರು ಒಗ್ಗಟ್ಟಾಗಿ ಸೇರಿ ಸಂಘಟಿತರಾಗಿರಬೇಕು ಎಂದು ಶ್ರೀ ಶರಾವತಿ ವಿದ್ಯುತ್ ವೈರ್ಮನ್ ಮತ್ತು ಪ್ಲಂಬಿಂಗ್ ಕಾರ್ಮಿಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎನ್.ಆನಂದ ತಿಳಿಸಿದರು.
ನಗರದ ಶ್ರೀ ವೇಣುಗೋಪಾಲಸ್ವಾಮಿ ದೇವಾಲಯದ ಆವರಣದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ವಿದ್ಯುತ್ ವೈರ್ಮನ್ ಮತ್ತು ಪ್ಲಂಬಿಂಗ್ ಕಾರ್ಮಿಕರ ಸಂಘದ ಜಿಲ್ಲಾ ಮತ್ತು ತಾಲ್ಲೂಕು ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕಾರ್ಮಿಕರ ನಡುವೆ ಕೆಲವೊಮ್ಮೆ ಉಂಟಾಗುವ ಗೊಂದಲಗಳನ್ನು ಸಂಘದ ಗಮನಕ್ಕೆ ತಂದು ಪರಿಹರಿಸಿಕೊಳ್ಳುವ ಮೂಲಕ ಸಂಘದ ಯಶಸ್ಸಿಗೆ ಪ್ರತಿಯೊಬ್ಬರೂ ಪ್ರಾಮಾಣಿಕ ಪ್ರಯತ್ನ ನಡೆಸಬೇಕು ಎಂದರು.
ಜಿಲ್ಲಾ ಸಮಿತಿಯ ಗೌರವಾಧ್ಯಕ್ಷ ಮುನಿಸ್ವಾಮಿ ಮಾತನಾಡಿ, ಸಂಘಗಳನ್ನು ಕಟ್ಟಿಕೊಂಡ ಮಾತ್ರಕ್ಕೆ ಕಾರ್ಮಿಕರಿಗೆ ಯಾವುದೇ ಉಪಯೋಗವಿಲ್ಲ ಬದಲಿಗೆ ಸಂಘದ ದ್ಯೇಯೋದ್ದೇಶಗಳನ್ನು ತಮ್ಮ ವೃತ್ತಿಯಲ್ಲಿ ಅಳವಡಿಸಿಕೊಂಡು ಸಂಘದ ಸಭೆಗಳಲ್ಲಿ ತಮ್ಮ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಂಡಾಗ ಮಾತ್ರ ಸಂಘಗಳನ್ನು ಕಟ್ಟಿದ್ದಕ್ಕೆ ಸಾರ್ಥಕವಾಗುತ್ತದೆ ಎಂದರು.
ನಮ್ಮದೇ ಸಂಘದ ಒಬ್ಬ ಕಾರ್ಮಿಕ ಯಾವುದೋ ಕೆಲಸ ಒಪ್ಪಿಕೊಂಡು ಮಾಡುವಾಗ ಬೇರೊಬ್ಬ ಕಾರ್ಮಿಕ ಅಲ್ಲಿ ಹೋಗಿ ಕಡಿಮೆ ದರದಲ್ಲಿ ಕೆಲಸ ಮುಗಿಸಲು ಮುಂದಾಗುವುದು ಬೇಡ. ಅಂತಹ ಸಂದರ್ಭಗಳು ಎದುರಾದಾಗ ಸಂಘದ ಗಮನಕ್ಕೆ ತಂದು ಪರಸ್ಪರ ಕುಳಿತು ಬಗೆಹರಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸಮಿತಿ ಅಧ್ಯಕ್ಷ ಬಿ.ಎನ್.ಗಂಗಾಧರ್, ಉಪಾಧ್ಯಕ್ಷರಾದ ಮಂಜುನಾಥ್, ಅಲ್ತಾಫ್ಖಾನ್, ಎಂ.ದೇವರಾಜ್, ಶ್ರೀನಿವಾಸಮೂರ್ತಿ, ತಾಲ್ಲೂಕು ಘಟಕದ ಗೌರವಾಧ್ಯಕ್ಷ ಎಸ್.ಗುಂಡೂರಾವ್, ಅಲ್ಲಾಬಕಾಷ್, ಶ್ರೀನಿವಾಸ್ ಹಾಜರಿದ್ದರು.