ಕುಡಿಯುವ ನೀರಿನ ಸಮಸ್ಯೆ 24 ಗಂಟೆಗಳೊಳಗೆ ಪರಿಹರಿಸಬೇಕು. ಕುಡಿಯುವ ನೀರಿನ ಸಮಸ್ಯೆ ಬಗೆಹರಿಯದಿದ್ದಲ್ಲಿ ಗ್ರಾಮ ಪಂಚಾಯಿತಿ ಅಧಿಕಾರಿ ವಿರುದ್ಧ ಪೊಲೀಸರಲ್ಲಿ ದೂರು ನೀಡುವಂತೆ ಕಾಕಚೊಕ್ಕಂಡಹಳ್ಳಿಯ ಸರ್ಕಾರಿ ಶಾಲೆಯ ವಿದ್ಯಾರ್ಥಿ ಚಿನ್ಮಯಿಗೆ ಪರಿಸರತಜ್ಞ ಅ.ನಾ.ಯಲ್ಲಪ್ಪರೆಡ್ಡಿ ತಿಳಿಸಿದರು.
ಕಲುಷಿತ ನೀರಿನಿಂದಾಗಿ ಶೇಕಡಾ 90 ರಷ್ಟು ರೋಗಗಳು ಬರುವುದು, ಆದ್ದರಿಂದ ಜನಪ್ರತಿನಿಧಿಗಳಾಗಲೀ, ಅಧಿಕಾರಿಗಳಾಗಲೀ ಇದರ ಬಗ್ಗೆ ಕ್ರಮ ಕೈಗೊಳ್ಳಬೇಕಾದುದು ಬಹು ಮುಖ್ಯ. ಮಕ್ಕಳು ತಿಳಿಸಿದ ಎಲ್ಲಾ ಸಮಸ್ಯೆಗಳಿಗೂ ಪರಿಹಾರವಿದೆ. ಸಾರ್ವಜನಿಕರು ಕೂಡ ಸಹಕರಿಸಬೇಕು. ಸ್ವಚ್ಛತೆಗೆ ಆದ್ಯತೆಯನ್ನು ನೀಡಬೇಕು. ನಮ್ಮ ಗ್ರಾಮ ಎಂಬ ಮನೋಭಾವ ಬಂದರೆ ಎಲ್ಲವೂ ಸಾಧ್ಯವಿದೆ ಎಂದು ಹೇಳಿದರು.
ಕುಡಿಯುವ ನೀರಿನ ವ್ಯವಸ್ಥೆ, ಶಾಲೆಯಲ್ಲಿನ ಸಮಸ್ಯೆ, ಆಡಲು ಮೈದಾನ, ಶೌಚಾಲಯ, ಸ್ವಚ್ಛತೆಯಿಲ್ಲದ ಸಂಪ್ ಮುಂತಾದ ಸಮಸ್ಯೆಗಳನ್ನು ವಿವರಿಸಿದ ವಿದ್ಯಾರ್ಥಿಗಳು ಅವುಗಳನ್ನು ಪರಿಹರಿಸುವಂತೆ ಕೋರಿದರು.
ಕಾಕಚೊಕ್ಕಂಡಹಳ್ಳಿಯ ಸರ್ಕಾರಿ ಶಾಲೆಯ ವಿದ್ಯಾರ್ಥಿ ಚಿನ್ಮಯಿ, ನಮಗೆ ಆಡಲು ಮೈದಾನವಿಲ್ಲ, ನಮ್ಮ ಶಾಲೆಯಲ್ಲಿನ ನೀರಿನ ಟ್ಯಾಂಕ್ ಮುಚ್ಚಳವಿಲ್ಲದೆ, ಕೋತಿಗಳು ಬಂದು ಗಲೀಜು ಮಾಡುತ್ತವೆ, ದಯಮಾಡಿ ಸರಿಪಡಿಸಿಕೊಡಿ ಎಂದನು. ಭಕ್ತರಹಳ್ಳಿಯ ಸರ್ಕಾರಿ ಶಾಲೆಯ ಆರನೇ ತರಗತಿಯ ನವೀಷಾ ಮಾತನಾಡಿ, ನಮ್ಮ ಶಾಲೆ ಕಾಂಪೌಂಡ್ ಒಳಗೆ ಗ್ರಾಮಸ್ಥರು ಬಂದು ಗಲೀಜು ಮಾಡುತ್ತಾರೆ. ಬೀಡಿ, ಸಿಗರೇಟ್ ಮತ್ತು ಮದ್ಯದ ಬಾಟಲ್ ಬಿದ್ದಿರುತ್ತವೆ. ನಮಗೆ ಶೌಚಾಲಯ ಸರಿಯಾಗಿಲ್ಲ, ಆಟದ ಮೈದಾನವಿಲ್ಲ ಎಂದು ಸಮಸ್ಯೆಗಳನ್ನು ವಿವರಿಸಿದಳು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚೆನ್ನಮ್ಮ, ಪಿ.ಡಿ.ಒ ಯಮುನಾರಾಣಿ, ಬಿ.ಎಂ.ವಿ. ವಿದ್ಯಾಸಂಸ್ಥೆಯ ಕಾರ್ಯದರ್ಶಿ ಎಲ್.ಕಾಳಪ್ಪ, ಗ್ರಾಮಾಂತರ ಟ್ರಸ್ಟ್ ನ ಉಷಾಶೆಟ್ಟಿ, ಗ್ರಾಮ ಪಂಚಾಯಿತಿ ಸದಸ್ಯರಾದ ಕಲ್ಪನಾ, ಸುಲೋಚನಾ, ಲಲಿತಮ್ಮ, ಚಿದಾನಂದಮೂರ್ತಿ, ದ್ಯಾವಮ್ಮ, ಸಿ.ಆರ್.ಟಿ ಸತೀಶ್, ಮುಖ್ಯಶಿಕ್ಷಕ ಪಂಚಮೂರ್ತಿ ಹಾಜರಿದ್ದರು.
- Advertisement -
- Advertisement -
- Advertisement -







