28 C
Sidlaghatta
Friday, October 4, 2024

ಕೂಲಿ ಕಾರ್ಮಿಕರ ಸಮೀಕ್ಷೆ ನಡೆಸಿ

- Advertisement -
- Advertisement -

ಯಾವುದೆ ಕಟ್ಟಡ ಹಾಗೂ ಇತರೆ ನಿರ್ಮಾಣದ ಕೆಲಸ ಕಾರ್ಯಗಳಲ್ಲಿ ೧೪ ವರ್ಷದೊಳಗಿನ ಬಾಲಕ ಬಾಲಕಿಯರನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದು ಕಾನೂನು ರೀತಿಯಲ್ಲಿ ಶಿಕ್ಷಾರ್ಹ ಅಪರಾಧ ಮಾತ್ರವಲ್ಲ ಅದು ಸಮಾಜದ ಮೇಲೆ ವಿಪರೀತವಾದ ದುಷ್ಪರಿಣಾಮ ಬೀರುತ್ತದೆ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶರಾದ ವಿಜಯ ದೇವರಾಜ್ ಅರಸ್ ಅಭಿಪ್ರಾಯಪಟ್ಟರು.
ನಗರದ ದಿಬ್ಬೂರಹಳ್ಳಿ ರಸ್ತೆಯಲ್ಲಿ ನಿರ್ಮಾಣವಾಗುತ್ತಿರುವ ನೂತನ ನ್ಯಾಯಾಲಯದ ಕಟ್ಟಡಕ್ಕೆ ಭಾನುವಾರ ಭೇಟಿ ನೀಡಿದ ಅವರು, ಅಲ್ಲಿ ಕೆಲಸದಲ್ಲಿ ತೊಡಗಿರುವ ಕೂಲಿ ಕಾರ್ಮಿಕರು, ಗುತ್ತಿಗೆದಾರರು ಹಾಗೂ ಕಾರ್ಮಿಕ ನಿರೀಕ್ಷಕ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದರು.
ಇದೀಗ ರಾಜ್ಯದ ಉಚ್ಚ ನ್ಯಾಯಾಲಯವು ಕಟ್ಟಡ ಹಾಗೂ ಇತರೆ ನಿರ್ಮಾಣದಲ್ಲಿ ತೊಡಗಿರುವ ಕೂಲಿ ಕಾರ್ಮಿಕರ ಕಲ್ಯಾಣಕ್ಕೆ ಹೆಚ್ಚು ಒತ್ತು ನೀಡಿದ್ದು ಸಂಬಂದಿಸಿದ ಎಲ್ಲ ಇಲಾಖೆಗಳೂ ಕೂಲಿ ಕಾರ್ಮಿಕರ ಸಮೀಕ್ಷೆ ನಡೆಸಿ ಅವರಿಗೆ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಸಿಗುವ ಎಲ್ಲ ರೀತಿಯ ಸವಲತ್ತುಗಳನ್ನು ಒದಗಿಸಲು ಸೂಚಿಸಿದೆ ಎಂದರು.
ಈ ತಿಂಗಳ ೨೭ ರೊಳಗೆ ಶೇ. ೧೦೦ರಷ್ಟು ಗುರಿಯನ್ನು ಮುಟ್ಟಲು ಘನ ನ್ಯಾಯಾಲಯವು ಆದೇಶಿಸಿದ್ದು ಅದರಂತೆ ಸಂಬಂದಿಸಿದ ಎಲ್ಲ ಇಲಾಖೆಗಳೂ ಸಹ ಕಾರ್ಯೋನ್ಮುಖರಾಗಬೇಕು. ಈ ಆಂದೋಲನದಲ್ಲಿ ಸಂಘ ಸಂಸ್ಥೆಗಳೂ ಸಹ ಸಾಮಾಜಿಕ ಕಳಕಳಿಯನ್ನು ಮೆರೆಯಬೇಕು ಎಂದು ಮನವಿ ಮಾಡಿದರು.
ನಗರ ಸೇರಿದಂತೆ ತಾಲ್ಲೂಕಿನಲ್ಲಿ ಎಲ್ಲಿಯೇ ಆಗಲಿ ಕಟ್ಟಡ ಇನ್ನಿತರೆ ನಿರ್ಮಾಣ ಕಾಮಗಾರಿಗಳಲ್ಲಿ ತೊಡಗಿರುವ ಕೂಲಿ ಕಾರ್ಮಿಕರ, ಗುತ್ತಿಗೆದಾರರ ವಿವರ ನೀಡಿ ಎಂದು ಸಾರ್ವಜನಿಕವಾಗಿ ಮನವಿ ಮಾಡಿರುವ ಅವರು ಇದರಿಂದ ಎಲ್ಲ ಕೂಲಿ ಕಾರ್ಮಿಕರ ನಿಖರ ಸಂಖ್ಯೆ ತಿಳಿಯಲಿದೆಯಲ್ಲದೆ ಮಂಡಳಿಯಿಂದ ಸವಲತ್ತುಗಳನ್ನು ನೀಡಲು ನೆರವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಕಾರ್ಮಿಕ ನಿರೀಕ್ಷಕ ಟಿ.ಡಿ.ರಾಮಯ್ಯ ಮಾತನಾಡಿ, ೧೮-–೬೦ ವರ್ಷದೊಳಗಿನ ಕೂಲಿ ಕಾರ್ಮಿಕರು ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಸದಸ್ಯತ್ವ ಪಡೆಯಲು ಅರ್ಹರಾಗಿದ್ದು ವರ್ಷದ ಎಲ್ಲ ದಿನಗಳಲ್ಲೂ ಸದಸ್ಯತ್ವವನ್ನು ಮಾಡಿಸಬಹುದೆಂದರು.
ಅರ್ಜಿ ನಮೂನೆ ೫ ಮತ್ತು ೬, ೨ ಪಾಸ್ಪೋರ್ಟ್ ಅಳತೆಯ ಭಾವಚಿತ್ರಗಳು, ವಯಸ್ಸಿನ ದೃಡೀಕರಣದ ದಾಖಲೆ, ಚುನಾವಣೆಯ ಗುರ್ತಿನ ಚೀಟಿಯ ಜೆರಾಕ್ಸ್ ಪ್ರತಿ, ಬ್ಯಾಂಕ್ ಖಾತೆಯ ಪಾಸ್ ಪುಸ್ತಕದ ಜೆರಾಕ್ಸ್ ಪ್ರತಿ ಹಾಗು ೩ ವರ್ಷಗಳ ಅವದಿಯ ಸದಸ್ಯತ್ವ ನೋಂದಣಿ ಹಾಗೂ ನವೀಕರಣ ಶುಲ್ಕವಾಗಿ ೧೭೫ ರೂ ಪಾವತಿಸಬೇಕು ಎಂದರು.
ಇದರಿಂದ ಕಾರ್ಮಿಕರ ಇಬ್ಬರು ಮಕ್ಕಳಿಗೆ ೫-–೭ನೇ ತರಗತಿಯವರೆಗೂ ವಾರ್ಷಿಕ ತಲಾ ೨ ಸಾವಿರ, ೮-–೧೦ನೇ ತರಗತಿಯವರೆಗೂ ವಾರ್ಷಿಕ ತಲಾ ೫ ಸಾವಿರ ರೂ, ಪಿಯುಸಿ, ಜೆಒಸಿ, ಎಂಜಿನಿಯರಿಂಗ್ ಇನ್ನಿತರೆ ತಾಂತ್ರಿಕ ತರಗತಿಗಳಿಗೆ ತಲಾ ೫ ಸಾವಿರ ಹಾಗೂ ಉನ್ನತ ಪದವಿಗೆ ತಲಾ ೧೫ ಸಾವಿರ ವಾರ್ಷಿಕ ಪ್ರೋತ್ಸಾಹ ಧನ ನೀಡಲಾಗುವುದು ಎಂದರು.
ಜತೆಗೆ ಇಬ್ಬರು ಮಕ್ಕಳ ಮದುವೆಗೆ ತಲಾ ೫೦ ಸಾವಿರ, ಹೆಣ್ಣು ಮಗುವಿನ ಹೆರಿಗೆಯ ಸಮಯ ೧೫ ಸಾವಿರ ರೂಪಾಯಿಯನ್ನು ನೀಡಲಾಗುವುದು. ಕಾರ್ಮಿಕರು ಅಪಘಾತದಲ್ಲಿ ಗಾಯಗೊಂಡರೆ ಅಂಗವಿಕಲತೆಯ ಪ್ರಮಾಣದ ಮೇಲೆ ಪಿಂಚಣಿ, ಚಿಕಿತ್ಸೆಗೆ ಹಣದ ಸಹಾಯವನ್ನು ನೀಡಲಾಗುವುದು. ಸದಸ್ಯತ್ವ ಪಡೆದ ಕಾರ್ಮಿಕರು ಮೃತಪಟ್ಟರೆ ಅವರ ಅಂತಿಮ ಸಂಸ್ಕಾರಕ್ಕೆ ೪ ಸಾವಿರ ರೂ ಹಾಗೂ ನಂತರ ಅವರ ಕುಟುಂಬಕ್ಕೆ ೧೫ ಸಾವಿರ ರೂಪಾಯಿಗಳನ್ನು ನೀಡುವುದರ ಜತೆಗೆ ೨ ಲಕ್ಷ ರೂಗಳ ಪರಿಹಾರವನ್ನು ಸಹ ನೀಡಲಾಗುವುದು.
ಹೀಗೆ ಹತ್ತು ಹಲವು ಯೋಜನೆಗಳು ಇದ್ದು ಎಲ್ಲ ಕೂಲಿ ಕಾರ್ಮಿಕರೂ ಸಹ ಈ ಯೋಜನೆಯ ಸದುಪಯೋಗಪಡೆದುಕೊಳ್ಳುವಂತೆ ಕೂಲಿ ಕಾರ್ಮಿಕರಲ್ಲಿ ಮನವಿ ಮಾಡಿದರಲ್ಲದೆ ಈ ಕುರಿತು ಕೂಲಿ ಕಾರ್ಮಿಕರಿಗೆ ಅರಿವು ಮೂಡಿಸಲು ನಮ್ಮೊಂದಿಗೆ ಕೈ ಜೋಡಿಸುವಂತೆ ಗುತ್ತಿಗೆದಾರರು, ಸಂಘ ಸಂಸ್ಥೆಗಳಲ್ಲಿ ಮನವಿ ಮಾಡಿದರು.
ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಶ್ರೀಕಂಠ, ಸರ್ಕಾರಿ ವಕೀಲೆ ಎಸ್.ಕುಮುದಿನಿ, ವಕೀಲರ ಸಂಘದ ಅಧ್ಯಕ್ಷ ಎಂ.ಪಾಪಿರೆಡ್ಡಿ, ಕಾರ್ಯದರ್ಶಿ ಬೈರಾರೆಡ್ಡಿ ಮತ್ತಿತರರು ಹಾಜರಿದ್ದರು.

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!