32.1 C
Sidlaghatta
Monday, March 27, 2023

ಕೆಎಸ್‌ ಆರ್‌ ಟಿಸಿ ಡಿಪೋ ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆ

- Advertisement -
- Advertisement -

ನೂತನ ಬಸ್ ಘಟಕ ನಿರ್ಮಾಣವಾಗುವುದರಿಂದ ನಗರ ಉನ್ನತೀಕರಣಗೊಳ್ಳುತ್ತದೆ. ಕ್ಷೇತ್ರದ ಗ್ರಾಮೀಣ ಪ್ರದೇಶದ ಜನತೆ ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ನಗರದ ಹೊರವಲಯದ ಹಿತ್ತಲಹಳ್ಳಿ ಬಳಿ ಬುಧವಾರ ಕೆಎಸ್‌ಆರ್‌ಟಿಸಿ ಡಿಪೋ ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಸುಮಾರು ೫ ಎಕರೆ ೧೫ ಗುಂಟೆ ಜಮೀನಿನಲ್ಲಿ ಬಸ್ ಘಟಕದ ಕಾಮಗಾರಿ ಆರಂಭವಾಗುತ್ತಿದ್ದು ಸರ್ಕಾರದಿಂದ ಈಗಾಗಲೇ ಅನುಮೋದನೆ ಸಹ ಸಿಕ್ಕಿದೆ. ನೂತನ ಬಸ್ ಘಟಕ ನಿರ್ಮಾಣವಾಗುವುದರಿಂದ ತಾಲ್ಲೂಕಿನ ಸುಮಾರು ೧೬೨ ಗ್ರಾಮಗಳಿಗೆ ಸಾರಿಗೆ ಸೌಲಭ್ಯ ಸಿಗಲಿದೆ. ಪ್ರತಿನಿತ್ಯ ಸುಮಾರು ೭,೦೦೦ ವಿದ್ಯಾರ್ಥಿಗಳು ಪ್ರತಿನಿತ್ಯ ಶಾಲಾ ಕಾಲೇಜು ಗಳಿಗೆ ಹೋಗಲು ಸಹಕಾರಿಯಾಗಲಿದೆ ಎಂದರು.
ಶಿಡ್ಲಘಟ್ಟ ನಗರ ಇತ್ತೀಚೆಗಷ್ಟೇ ನಗರಸಭೆಯಾಗಿ ಉನ್ನತೀಕರಣಗೊಂಡಿದ್ದು ನಗರದ ಜನತೆಗೆ ಆಧುನಿಕ ಮೂಲಭೂತ ಸವಲತ್ತುಗಳ ಅಗತ್ಯವಿದೆ. ಪ್ರತಿನಿತ್ಯ ಗ್ರಾಮೀಣ ಪ್ರದೇಶಗಳಿಂದ ನಗರಕ್ಕೆ ವಲಸೆ ಬರುವವರ ಸಂಖ್ಯೆಯೂ ಜಾಸ್ತಿಯಾಗುತ್ತಿದೆ. ಸಾಲದೆಂಬಂತೆ ಗ್ರಾಮೀಣ ಪ್ರದೇಶದ ಮಕ್ಕಳು ಅದರಲ್ಲಿಯೂ ಮುಖ್ಯವಾಗಿ ಹೆಣ್ಣು ಮಕ್ಕಳು ವಿದ್ಯಾಭ್ಯಾಸಕ್ಕಾಗಿ ನಗರಗಳಿಗೆ ಬರಬೇಕಾಗಿರುವುದರಿಂದ ಕ್ಷೇತ್ರದಾದ್ಯಂತ ಇರುವ ಎಲ್ಲಾ ಗ್ರಾಮಗಳಿಗೂ ಬಸ್ ವ್ಯವಸ್ಥೆ ಕಲ್ಪಿಸಬೇಕು. ಉತ್ತಮ ಸಾರಿಗೆ ವ್ಯವಸ್ಥೆಯಿದ್ದಾಗ ಮಾತ್ರ ಗ್ರಾಮೀಣ ಪ್ರದೇಶದ ಜನತೆ ಸೇರಿದಂತೆ ವಿದ್ಯಾರ್ಥಿಗಳು ಸಕಾಲದಲ್ಲಿ ಶಾಲಾ ಕಾಲೇಜುಗಳಿಗೆ ಹೋಗಲು ಸಹಕಾರಿಯಾಗುತ್ತದೆ ಎಂದರು.
ಇನ್ನು ಇಡೀ ವಿಶ್ವದಲ್ಲಿಯೇ ಹೆಸರುವಾಸಿಯಾಗಿರುವ ಇಲ್ಲಿನ ರೇಷ್ಮೆ ಗೂಡು ಮಾರುಕಟ್ಟೆಗೆ ಬರುವ ರೈತರು, ಕೂಲಿ ಕಾರ್ಮಿಕರೂ ಗ್ರಾಮೀಣ ಪ್ರದೇಶಗಳಿಂದ ಬರುವವರಾಗಿದ್ದು ಅವರಿಗೆ ಸೂಕ್ತ ಸಾರಿಗೆ ವ್ಯವಸ್ಥೆ ಕಲ್ಪಿಸಲು ಅಧಿಕಾರಿಗಳು ಮತ್ತು ಕಾಮಗಾರಿ ನಿರ್ವಹಿಸುವ ಗುತ್ತಿಗೆದಾರರು ಉತ್ತಮ ಗುಣಮಟ್ಟದ ಕಾಮಗಾರಿ ನಡೆಸಬೇಕು. ನಿಗಧಿತ ಸಮಯದಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ ೧೫ ಜನ ವಾಹನ ಚಾಲಕರಿಗೆ ಬೆಳ್ಳಿ ಪದಕ ಹಾಗೂ ೨,೦೦೦ ರೂ ನಗದು ವಿತರಿಸಲಾಯಿತು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನಿರ್ದೇಶಕ ಶ್ರೀನಿವಾಸ್, ಮುಖ್ಯ ಕಾರ್ಯಪಾಲಕ ಜಗದೀಶ್ ಚಂದ್ರ, ಆನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರತ್ನಮ್ಮ, ನಗರಸಭೆ ಸದಸ್ಯ ಅಫ್ಸರ್‌ಪಾಷ, ಪಂಚಾಕ್ಷರಿರೆಡ್ಡಿ, ಲಕ್ಷೀನಾರಾಯಣ(ಲಚ್ಚಿ), ಕೆ.ಮಂಜುನಾಥ್, ಎಚ್ ಕ್ರಾಸ್ ರವಿ ಹಾಜರಿದ್ದರು.
ಸ್ಥಳೀಯರ ಪ್ರತಿಭಟನೆ: ನೂತನ ಬಸ್ ಘಟಕದ ಭೂಮಿಪೂಜೆ ಕಾರ್ಯಕ್ರಮಕ್ಕೆ ಶಾಸಕ ಎಂ.ರಾಜಣ್ಣ ಸ್ಥಳಕ್ಕೆ ಬರುತ್ತಿದ್ದಂತೆ ಸ್ಥಳೀಯರು ಪ್ರತಿಭಟನೆ ನಡೆಸಿ ಬಸ್ ಘಟಕಕ್ಕೆ ಈಗ ಗುರ್ತಿಸಿರುವ ಜಾಗದಲ್ಲಿ ಕಳೆದ ೪೦ ವರ್ಷಗಳಿಂದ ಬಡವರು ಉಳುಮೆ ಮಾಡಿ ಜೀವನ ನಡೆಸುತ್ತಿದ್ದಾರೆ. ಇದೀಗ ಶಾಸಕರು ಏಕಾ ಏಕಿ ಬಂದು ಅದೇ ಸ್ಥಳದಲ್ಲಿ ಬಸ್ ಘಟಕ ನಿರ್ಮಿಸಲು ಮುಂದಾಗಿದ್ದಾರೆ. ಇದರಿಂದ ಕಳೆದ ೪೦ ವರ್ಷಗಳಿಂದ ಉಳುಮೆ ಮಾಡಿ ಜೀವನ ನಡೆಸುತ್ತಿದ್ದ ಬಡವರು ಬೀದಿಗೆ ಬೀಳುವಂತಾಗಿದೆ. ಕೂಡಲೇ ಅವರಿಗೆ ಸೂಕ್ತ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು. ಪ್ರತಿಭಟನಾಕಾರರೊಂದಿಗೆ ಮಾತನಾಡಿದ ಶಾಸಕ ಎಂ.ರಾಜಣ್ಣ ತೊಂದರೆಯಾಗಿರುವ ರೈತರಿಗೆ ಬೇರೆಡೆ ಜಮೀನು ನೀಡುವ ಆಶ್ವಾಸನೆ ನೀಡಿದ ಮೇಲೆ ಪ್ರತಿಭಟನೆ ಕೈ ಬಿಡಲಾಯಿತು.

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.
Captcha verification failed!
CAPTCHA user score failed. Please contact us!
error: Content is protected !!