ಕೆ.ಎಸ್.ಪುಟ್ಟಣ್ಣಯ್ಯನವರ ಸ್ಮರಣಾರ್ಥವಾಗಿ ‘ತಿಥಿ ಬಿಡಿ, ಸಸಿ ನಡಿ’ ಕಾರ್ಯಕ್ರಮ ಹಾಗೂ ರೈತರ ಜ್ವಲಂತ ಸಮಸ್ಯೆಗಳ ಪರಿಹಾರಕ್ಕಾಗಿ ತಾಲ್ಲೂಕು ಕಚೇರಿ ಮುಂದೆ ‘ಪ್ರತಿಭಟನಾ ಕಾರ್ಯಕ್ರಮ’ ವನ್ನು ಮಾರ್ಚ್ 12 ರ ಸೋಮವಾರ ಬೆಳಿಗ್ಗೆ 11 ಗಂಟೆಗೆ ಹಮ್ಮಿಕೊಂಡಿರುವುದಾಗಿ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಎಸ್.ಎಂ. ರವಿಪ್ರಕಾಶ್ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ನಡೆದ ರೈತ ಸಂಘದ ಸಭೆಯಲ್ಲಿ ಅವರು ಮಾತನಾಡಿದರು. ನಮ್ಮ ಹಲವು ಹಕ್ಕೊತ್ತಾಯಗಳಿವೆ. ತಾಲ್ಲೂಕಿನಾದ್ಯಂತ ಕೆರೆಗಳಲ್ಲಿನ ಜಾಲಿ ಮರಗಳನ್ನು ತೆಗೆಸಬೇಕು. ರಾಜಕಾಲುವೆಗಳನ್ನು ತೆರವುಗೊಳಿಸಬೇಕು. ಕೆರೆಗಳ ಹೂಳು ತೆಗೆಸಿ ಒತ್ತುವರಿಯನ್ನು ತೆರವುಗೊಳಿಸಬೇಕು. ರೈತರ ವಿಮೆಯ ಬಾಕಿ ಹಣವನ್ನು ತಕ್ಷಣ ನೀಡಬೇಕು. ಸಾಗುವಳಿ ಚೀಟಿಗಳನ್ನು ವಿತರಣೆ ಮಾಡಬೇಕು. ಶಿಡ್ಲಘಟ್ಟದಲ್ಲಿ ಎ.ಪಿ.ಎಂ.ಸಿ.ಮಾರುಕಟ್ಟೆಯನ್ನು ಸ್ಥಾಪಿಸಬೇಕು. ರೈತ ಭವನ ಮಂಜೂರು ಮಾಡಬೇಕು. ಸಮರ್ಪಕವಾಗಿ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಆಗಬೇಕು. ಜನ ಜಾನುವಾರುಗಳಿಗೆ ಬೇಸಿಗೆಯಲ್ಲಿ ಕುಡಿಯುವ ನೀರನ್ನು ಒದಗಿಸಲು ಕ್ರಮವಹಿಸಬೇಕು. ರೇಷ್ಮೆ ಇಲಾಖೆಯಲ್ಲಿ ಹನಿನೀರಾವರಿ ಸಹಾಯಧನ ನೀಡಬೇಕು. ಪ್ಯೂಪದ ದುರ್ವಾಸನೆಯಿಂದ ಸಾಂಕ್ರಾಮಿಕ ರೋಗ ಹರಡುತ್ತಿದ್ದು ಕ್ರಮ ಕೈಗೊಳ್ಳಬೇಕು ಮುಂತಾದ ಹಲವು ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಲಾಗುತ್ತದೆ ಎಂದು ವಿವರಿಸಿದರು.
ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೆ.ಎಸ್.ವೆಂಕಟಸ್ವಾಮಿ, ಜಿಲ್ಲಾ ಉಪಾಧ್ಯಕ್ಷ ಮುನಿಕೆಂಪಣ್ಣ, ಶಂಕರಪ್ಪ, ಮಾರುತಿ, ಅರುಣ್ಕುಮಾರ್, ಭಕ್ತರಹಳ್ಳಿ ಪ್ರತೀಶ್, ಕೋಟೆ ಚನ್ನೇಗೌಡ, ಡಿ.ವಿ.ನಾರಾಯಣಸ್ವಾಮಿ, ಗೋವಿಂದಪ್ಪ, ರಮೇಶ್, ನಟರಾಜ್, ಶ್ರೀಧರ್, ಮುನಿರಾಜು ಹಾಜರಿದ್ದರು.
- Advertisement -
- Advertisement -
- Advertisement -
- Advertisement -