ನಗರದ ಕ್ರೆಸೆಂಟ್ ಶಾಲೆಯಲ್ಲಿ ಕನ್ನಡ ಸಾರಸ್ವತ ಪರಿಚಾರಿಕೆ ವತಿಯಿಂದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ “ಪಬ್ಲಿಕ್ ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸುವುದು ಹೇಗೆ?” ಎಂಬ ವಿಷಯವಾಗಿ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿ, ಅವರ ಪರೀಕ್ಷೆಯ ಕುರಿತಾದ ಆತಂಕವನ್ನು ದೂರ ಮಾಡಲು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಡಾ.ಎಂ.ಶಿವಕುಮಾರ್ ಮಾತನಾಡಿದರು.
ಭವಿಷ್ಯವನ್ನು ರೂಪಿಸಿಕೊಳ್ಳುವ ಅಧಮ್ಯ ಇಚ್ಛೆ ವಿದ್ಯಾರ್ಥಿಯ ಒಳಗೆ ಕಿಚ್ಚಿನಂತೆ ಉರಿಯುತ್ತಿರಬೇಕು. ಕೋಶದಿಂದ ರೂಪಾಂತರಗೊಂಡ ಸುಂದರ ಚಿಟ್ಟೆ ಹೊರಹೊಮ್ಮುವಂತೆ ವಿದ್ಯಾರ್ಥಿಗಳು ಜೀವನವನ್ನು ರೂಪಾಂತರಗೊಳಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.
ತಾನು ಏನಾಗಬೇಕು ಎಂಬುದರ ಕುರಿತು ಸದಾ ಜಪ ಮಾಡಬೇಕು, ಕನಸು ಕಾಣಬೇಕು. ಕನಸನ್ನು ಗುರಿಯಾಗಿ ಪರಿವರ್ತಿಸಿಕೊಳ್ಳಬೇಕು. ಮಾನಸಿಕವಾಗಿ ನಮ್ಮ ಗುರಿಯೆಡೆಗೆ ಸಾಗುವ ಹಾದಿಯಲ್ಲಿರಬೇಕು. ಅಚಲವಾದ ಆತ್ಮವಿಶ್ವಾಸ ಬೆಳೆಸಿಕೊಳ್ಳಿ. ನಮ್ಮ ಮೇಲೆ ನಮಗೆ ನಂಬಿಕೆ ಇದ್ದರೆ ಏನನ್ನಾದರೂ ಸಾಧಿಸಲಿಕ್ಕೆ ಸಾದ್ಯವಿದೆ. ಸದಾ ಜಾಗೃತರಾಗಿರಿ. ನಿಮ್ಮನ್ನು ನೀವು ಅರಿಯಿರಿ. ಪರೀಕ್ಷೆ ಎಂಬುದು ಯುದ್ದವಲ್ಲ ಇದು ಒಂದು ಆಟ. ಕ್ರೀಡಾಸ್ಫೂರ್ತಿಯಿಂದ ಈ ಆಟವನ್ನು ನಿಯಮಗಳನ್ನು ಅರಿತು ಆಡಿ. ಏಕಾಗ್ರತೆಯಿಂದ ಅದ್ಬುತವಾದ ಜ್ಞಾಪಕ ಶಕ್ತಿ ನಿಮ್ಮದಾಗುತ್ತದೆ. ಪರಿಣಾಮಕಾರಿ ಅಭ್ಯಾಸ ಮಾಡಬೇಕು ಎಂದು ವಿವಿಧ ವ್ಯಕ್ತಿ, ವಸ್ತುಗಳ ಉದಾಹರಣೆಗಳ ಮೂಲಕ ವಿವರಿಸಿದರು.
ಗಣಿತ ಲೆಕ್ಕದ ಪಕ್ಕದಲ್ಲಿ ಪ್ರತಿಯೊಂದು ಹಂತವನ್ನು ಗುರುತಿಸಿ. ಎರಡು ಇಷ್ಟವಾದ ವಿಷಯಗಳ ಮಧ್ಯೆ ಕಷ್ಟವಾದ ವಿಷಯ ಓದಿ. ಅದನ್ನು ಸ್ಯಾಂಡ್ ವಿಚ್ ಟೆಕ್ನಿಕ್ ಎನ್ನುತ್ತಾರೆ. ರೀಡಿಂಗ್, ರೀಕಾಲ್, ರಿಜಿಸ್ಟರ್ ತಂತ್ರವನ್ನು ನಿಮ್ಮದಾಗಿಸಿಕೊಳ್ಳಿ ಎಂದು ಸ್ಲೈಡ್ ಶೋ ಮೂಲಕ ವಿದ್ಯಾರ್ಥಿಗಳಿಗೆ ಅಗತ್ಯ ಅಂಶಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಯಿತು. ಸಮಯದ ಸದುಪಯೋಗ, ಪ್ರಶ್ನೋತ್ತರ ವಿಧಾನ, ಗಣಿತದ ವಿಷಯದ ಅನುಮಾನಗಳು, ಚಿತ್ರಸಹಿತ ಬರೆಯಬೇಕಾದ ಅಗತ್ಯ ಮುಂತಾದ ವಿಷಯಗಳ ಬಗ್ಗೆ ವಿದ್ಯಾರ್ಥಿಗಳು ಪ್ರಶ್ನೆ ಕೇಳಿ ಉತ್ತರ ಪಡೆದರು.
ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಮಾತನಾಡಿ, ಸಮರ್ಥ ಸಂಪನ್ಮೂಲ ವ್ಯಕ್ತಿಯ ಮೂಲಕ ವಿದ್ಯಾರ್ಥಿಗಳಲ್ಲಿ ಸಾಮಾನ್ಯವಾಗಿ ಮನೆಮಾಡಿರುವ ಪರೀಕ್ಷೆಯ ಭಯ ಹೋಗಲಾಡಿಸುವುದು ಹಾಗೂ ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸಿ ಹೆಚ್ಚು ಅಂಕಗಳನ್ನು ಗಳಿಸುವಂತೆ ಮಾಡುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಕ್ರೆಸೆಂಟ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ತಮೀಮ್ ಅನ್ಸಾರಿ, ಶಿಕ್ಷಕರಾದ ಭಾಸ್ಕರ್, ಪ್ರಕಾಶ್, ಮೂರ್ತಿ, ಮುನಿನರಸಿಂಹಯ್ಯ, ಕಸಾಪ ನಗರ ಘಟಕದ ಅಧ್ಯಕ್ಷ ಸಿ.ಎನ್.ಮುನಿರಾಜು ಹಾಜರಿದ್ದರು.
- Advertisement -
- Advertisement -
For Daily Updates
WhatsApp 'HI' to 7406303366
- Advertisement -
- Advertisement -







