ಸಿಗರೇಟ್ ಸೇವನೆ ಎಷ್ಟು ಅಪಾಯಕಾರಿಯೋ, ಅದರಿಂದ ಹೊರಹೊಮ್ಮುವ ರಾಸಾಯನಿಕಗಳ ಸಂಪರ್ಕಕ್ಕೆ ಬರುವವರೂ ಅಷ್ಟೇ ಅಪಾಯ ಎದುರಿಸುತ್ತಾರೆ. ತಂಬಾಕು ಹಾಗೂ ಧೂಮಪಾನ ಸೇವನೆಯಿಂದ ಸಿಗುವ ಕ್ಷಣಿಕ ಸುಖವನ್ನು ತ್ಯಜಿಸಿ ಎಲ್ಲರೂ ಆರೋಗ್ಯವಂತರಾಗಿ ಜೀವನ ನಡೆಸುವಂತಾಗಬೇಕು ಎಂದು ತಹಶೀಲ್ದಾರ್ ಎಂ.ದಯಾನಂದ್ ತಿಳಿಸಿದರು.
ತಾಲ್ಲೂಕು ಪಂಚಾಯಿತಿ ಇಓ ಶಿವಕುಮಾರ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶ್‌ಮೂರ್ತಿ ಹಾಗೂ ನಗರಸಭೆ ಸಿಬ್ಬಂದಿಯೊಂದಿಗೆ ಗುರುವಾರ ನಗರದ ಸರ್ಕಾರಿ ಪ್ರೌಢಶಾಲೆ, ಪದವಿಪೂರ್ವ ಕಾಲೇಜು ಹಾಗೂ ವಿವಿಧ ಶಾಲೆಗಳ ಮುಂಭಾಗದ ಅಂಗಡಿ, ತಳ್ಳುವ ಗಾಡಿಗಳು, ಕಾಫಿ ಟೀ ಶಾಪ್‌ಗಳಿಗೆ ಭೇಟಿ ನೀಡಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡದಂತೆ ಗುಲಾಬಿ ಹೂವು ನೀಡುವ ಮೂಲಕ ಮನವಿ ಮಾಡಿದರು.
ತಂಬಾಕು ಹಾಗೂ ಧೂಮಪಾನ ಸೇವನೆಯಿಂದ ತಮಗಷ್ಟೇ ತೊಂದರೆಯಾಗುವುದಿಲ್ಲ ಬದಲಿಗೆ ಸುತ್ತಲಿನ ಅಮಾಯಕ ಜನತೆಯ ಮೇಲೂ ಇದರ ದುಷ್ಪರಿಣಾಮ ಬೀರುತ್ತದೆ. ಹಾಗಾಗಿ ಸಾರ್ವಜನಿಕ ಪ್ರದೇಶಗಳಲ್ಲಿ ಧೂಮಪಾನ ಮಾಡುವುದಕ್ಕೆ ಯಾರೂ ಅವಕಾಶ ಕೊಡಬೇಡಿ ಎಂದರು.
ತಂಬಾಕು ನಿಯಂತ್ರಣ ಕಾನೂನು ಕೋಟ್ಪಾ ಕಾಯ್ದೆಯ ಬಗ್ಗೆ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶ್‌ಮೂರ್ತಿ ಮಾತನಾಡಿ, ೧೮ ವರ್ಷದೊಳಗಿನ ಮಕ್ಕಳಿಗೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವುದು ಹಾಗೂ ಶಾಲಾ ಕಾಲೇಜುಗಳ ೧೦೦ ಯಾರ್ಡ್ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳನ್ನು ಮಾರುವುದನ್ನು ನಿಷೇಧಿಸಲಾಗಿದೆ. ಈ ಬಗ್ಗೆ ನಾಮಫಲಕವನ್ನೂ ಕಡ್ಡಾಯವಾಗಿ ಶಾಲಾ ಕಾಲೇಜಿನ ಆವರಣ ಗೋಡೆಯ ಮುಂಭಾಗದಲ್ಲಿ ಪ್ರದರ್ಶಿಸಬೇಕಾಗುತ್ತದೆ ಎಂದು ತಿಳಿಸಿದರು.
ಸಾಂಕೇತಿಕವಾಗಿ ಇಂದು ಹಲವು ಅಂಗಡಿಗಳಿಗೆ ೧೦೦ ರೂ ನಂತೆ ದಂಡ ವಿಧಿಸಿದ ಅಧಿಕಾರಿಗಳು ಮುಂದಿನ ದಾಳಿಯ ವೇಳೆ ತಂಬಾಕು ಉತ್ಪನ್ನಗಳ ಮಾರಾಟ ಮಾಡುವ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವವರಿಗೆ ಹೆಚ್ಚಿನ ದಂಡ ವಿಧಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಹಿರಿಯ ಅಭಿಯಂತರ ಜಯರಾಂ, ತಂಬಾಕು ನಿಯಂತ್ರಣ ಜಿಲ್ಲಾ ಸಂಯೋಜಕ ರಾಘವೇಂದ್ರರೆಡ್ಡಿ, ಸಮಾಜ ಕಾರ್ಯಕರ್ತ ಮಂಜುನಾಥ್ ಹಾಜರಿದ್ದರು.