ನಗರದಿಂದ ದೂರವಿರುವ ಗ್ರಾಮೀಣರಲ್ಲಿ ಹಲವಾರು ಆರೋಗ್ಯ ಸಮಸ್ಯೆಗಳಿದ್ದು ತಜ್ಞ ವೈದ್ಯರಿಂದ ಅವರು ಚಿಕಿತ್ಸೆ ಪಡೆಯಲು ಕಷ್ಟವಾಗುವುದರಿಂದ ಉಚಿತ ಆರೋಗ್ಯ ಶಿಬಿರವನ್ನು ಆಯೋಜಿಸಿರುವುದಾಗಿ ಎಸ್.ಎನ್.ಕ್ರಿಯಾ ಟ್ರಸ್ಟ್ ಅಧ್ಯಕ್ಷ ಆಂಜಿನಪ್ಪ ತಿಳಿಸಿದರು.
ತಾಲ್ಲೂಕಿನ ದಿಬ್ಬೂರಹಳ್ಳಿಯ ವೆಂಕಟೇಶ್ವರ ಪ್ರೌಢಶಾಲೆ ಆವರಣದಲ್ಲಿ ಶನಿವಾರ ಹೊಸಕೋಟೆಯ ಎಂ.ವಿ.ಜೆ ಆಸ್ಪತ್ರೆಯ ಸಹಯೋಗದೊಂದಿಗೆ ಎಸ್.ಎನ್.ಕ್ರಿಯಾ ಟ್ರಸ್ಟ್ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಹಳಷ್ಟು ವಯೋವೃದ್ಧರಿಗೆ ದೂರದ ಆಸ್ಪತ್ರೆಗೆ ಹೋಗಲು ಬಹಳ ಕಷ್ಟಪಡುತ್ತಿದ್ದಾರೆ. ಆಸ್ಪತ್ರೆಯ ಚಿಕಿತ್ಸೆ ವೆಚ್ಚ ಅಧಿಕವಾಗಿರುವುದರಿಂದ ಬಹುತೇಕ ಗ್ರಾಮಸ್ಥರು ಉತ್ತಮ ಚಿಕಿತ್ಸೆ ಪಡೆಯಲಾಗುವುದಿಲ್ಲ. ಈ ಲೋಪವನ್ನು ಸರಿಪಡಿಸಲು ಎಂ.ವಿ.ಜೆ ಆಸ್ಪತ್ರೆಯ ತಜ್ಞ ವೈದ್ಯರು ಗ್ರಾಮಕ್ಕೇ ಬಂದಿದ್ದಾರೆ. ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞರು, ಮೂಳೆ ಸಾಂದ್ರತೆ ಮತ್ತು ಕೀಲು ರೋಗ ತಪಾಸಣೆ, ಮಕ್ಕಳ ತಪಾಸಣೆ, ಕಣ್ಣಿನ ತಪಾಸಣೆ, ಕಿವಿ ಮೂಗು ಮತ್ತು ಗಂಟಲು ತಜ್ಞರು, ರಕ್ತದೊತ್ತಡ ಮತ್ತು ಮಧುಮೇಹ ಪರೀಕ್ಷೆ ನಡೆಸುವರು. ಉಚಿತ ಔಷಧಿಗಳು ಹಾಗೂ ಕನ್ನಡಕಗಳನ್ನು ವಿತರಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸುತ್ತಮುತ್ತಲಿನ ಗ್ರಾಮಗಳಿಂದ ಚಿಕಿತ್ಸೆ ಪಡೆಯಲು ಆಗಮಿಸಿದ್ದ ರೋಗಿಗಳಿಗೆ ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು. ಚಿಕಿತ್ಸೆ ಪಡೆದ ಪ್ರತಿಯೊಬ್ಬರಿಗೂ ಸಾಂಬಾರ್ ಗಿಡ ಸಿನಮೊನ್(ಚಕ್ಕೆ ಗಿಡ) ಸಸಿಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಟ್ರಸ್ಟ್ ವತಿಯಿಂದ ಇಬ್ಬರು ಅಂಗವಿಕಲರಿಗೆ ವೀಲ್ ಚೇರ್ ನೀಡಲಾಯಿತು. ಹತ್ತು ಮಂದಿ ವೃದ್ಧರು ಮತ್ತು ಅಂಗವಿಕಲರಿಗೆ ಬಸ್ ಪಾಸ್ ವಿತರಿಸಲಾಯಿತು.
ಒಂದು ಸಾವಿರದ ಎಂಟು ನೂರು ಮಂದಿ ಚಿಕಿತ್ಸೆ ಪಡೆದು ಔಷಧಿಗಳನ್ನು ಪಡೆದರು. ಎಂ.ವಿ.ಜೆ ಆಸ್ಪತ್ರೆಯ ಡಾ.ಪ್ರಮೋದ್, ಬೆಳ್ಳೂಟಿ ಸಂತೋಷ್, ತಲಕಾಯಲಬೆಟ್ಟ ಅಶ್ವತ್ಥನಾರಾಯಣರೆಡ್ಡಿ, ಚಿಕ್ಕಪ್ಪಯ್ಯ, ಶ್ರೀರಂಗಪ್ಪ, ರಾಯಪಲ್ಲಿ ಅಶ್ವತ್ಥನಾರಾಯಣರೆಡ್ಡಿ, ದಿಬ್ಬೂರಹಳ್ಳಿ ಶ್ರೀನಿವಾಸ್, ದಡಂಘಟ್ಟ ಕೃಷ್ಣಪ್ಪ, ವಿಶ್ವನಾಥ್, ಮಂಜುನಾಥ್, ಮುರಳಿ, ನಟರಾಜ್, ಶ್ರೀನಿವಾಸ್, ನವೀನ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -







