ಗ್ರಾಮೀಣ ಮಹಿಳೆಯರು ಸ್ವಾವಲಂಬಿ ಜೀವನ ನಡೆಸಲು ವೃತ್ತಿ ಕೌಶಲ್ಯ ತರಬೇತಿಯನ್ನು ಪಡೆದಿರಬೇಕು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೂಪ ಶಿವಕುಮಾರ್ ತಿಳಿಸಿದರು.
ತಾಲ್ಲೂಕಿನ ನಾಗಮಂಗಲ ಗ್ರಾಮದಲ್ಲಿ ಬಾಬು ಜಗಜೀವನ್ ರಾಮ್ ನೇಕಾರ ಸಹಕಾರ ಸಂಘದ ವತಿಯಿಂದ ಶುಕ್ರವಾರ ಟೈಲರಿಂಗ್ ತರಬೇತಿ ಪಡೆದ ಮಹಿಳೆಯರಿಗೆ ಪ್ರೋತ್ಸಾಹಧನ ಹಾಗೂ ಪ್ರಮಾಣ ಪತ್ರ ವಿತರಿಸಿ ಅವರು ಮಾತನಾಡಿದರು.
ಸ್ವಉದ್ಯೋಗದಿಂದ ಮಹಿಳೆಯರು ಸ್ವಾವಲಂಬಿಗಳಾಗಿ ಜೀವನ ನಡೆಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಬಾಬು ಜಗಜೀವನ್ ರಾಮ್ ನೇಕಾರ ಸಹಕಾರ ಸಂಘದ ವತಿಯಿಂದ ಉಚಿತವಾದ ಮೂರು ತಿಂಗಳ ಟೈಲರಿಂಗ್ ತರಬೇತಿ ನೀಡಿದ್ದು, ಅದರಲ್ಲಿ ಕಲಿತ ಮಹಿಳೆಯರು ಇತರರಿಗೂ ಮಾರ್ಗದರ್ಶಕರಾಗಬೇಕು ಎಂದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎನ್.ಡಿ.ನಾರಾಯಣಪ್ಪ ಮಾತನಾಡಿ, ಕಳೆದ ನಾಲ್ಕೈದು ವರ್ಷಗಳಿಂದ ನಮ್ಮ ಗ್ರಾಮದ ಸುತ್ತಮುತ್ತಲಿನ ಮಹಿಳೆಯರಿಗೆ ಟೈಲರಿಂಗ್ ತರಬೇತಿ ನೀಡಲಾಗುತ್ತಿದೆ. ಬಹಳಷ್ಟು ಮಹಿಳೆಯರು ಈ ತರಬೇತಿಯ ಸಹಾಯದಿಂದ ಉದ್ಯೋಗ ಪಡೆದುಕೊಂಡು ಸ್ವಾವಲಂಬಿ ಬದುಕನ್ನು ಸಾಗಿಸುತ್ತಿದ್ದಾರೆ. ಇದರಿಂದ ಅವರ ಕೌಟುಂಬಿಕ ಆರ್ಥಿಕ ಪರಿಸ್ಥಿತಿಯೂ ಉತ್ತಮಗೊಂಡಿದೆ. ಮಹಿಳೆಯು ಸಶಕ್ತಳಾದರೆ ಕುಟುಂಬ ಚೆನ್ನಾಗಿರುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಟೈಲರಿಂಗ್ ತರಬೇತಿ ಪಡೆದ ಮಹಿಳೆಯರಿಗೆ ಒಂದು ಸಾವಿರದ ಐನೂರು ರೂಗಳ ಪ್ರೋತ್ಸಾಹ ಧನ ಹಾಗೂ ಪ್ರಮಾಣ ಪತ್ರವನ್ನು ನೀಡಲಾಯಿತು.
ಬಾಬು ಜಗಜೀವನ್ ರಾಮ್ ನೇಕಾರ ಸಹಕಾರ ಸಂಘದ ಅಧ್ಯಕ್ಷ ಎನ್.ಆರ್.ವೆಂಕಟೇಶ್, ತರಬೇತಿದಾರರಾದ ಭಾರತಮ್ಮ, ಶ್ವೇತ, ಮುಖಂಡರಾದ ಶಿವಕುಮಾರ್, ರಮೇಶ್, ರಾಜ್, ಸುಭ್ರಮಣಿ ಹಾಜರಿದ್ದರು.
- Advertisement -
- Advertisement -
- Advertisement -