ತಾಲ್ಲೂಕಿನ ಚಿಕ್ಕದಾಸರಹಳ್ಳಿ ದೇವಾಲಯದ ಬಳಿ ಸುಮಾರು ಐವತ್ತು ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಲಾದ ಏಳು ಕೊಠಡಿ ಮತ್ತು ಒಂದು ಹಾಲ್ ಒಳಗೊಂಡ ಯಾತ್ರಿ ನಿವಾಸ ಕಟ್ಟಡದ ಉದ್ಘಾಟನೆಯನ್ನು ನೆರವೇರಿಸಿ ಸಂಸದ ಕೆ.ಎಚ್.ಮುನಿಯಪ್ಪ ಮಾತನಾಡಿದರು.
ತಾಲ್ಲೂಕಿನ ಪ್ರಮುಖ ಪ್ರವಾಸಿ ಹಾಗೂ ಶ್ರದ್ಧಾ ಕೇಂದ್ರವಾದ ಬೇಟರಾಯಸ್ವಾಮಿ ದೇವಾಲಯಕ್ಕೆ ದೂರದೂರುಗಳಿಂದ ಭಕ್ತರು ಆಗಮಿಸುತ್ತಾರೆ. ಅವರಿಗೆ ಇನ್ನು ಮುಂದೆ ತಂಗಲು ತೊಂದರೆಯಾಗದಂತೆ ಯಾತ್ರಿ ನಿವಾಸ ಕಟ್ಟಡವನ್ನು ಪ್ರವಾಸೋದ್ಯಮ ಹಾಗೂ ವಿವಿಧ ಅನುದಾನಗಳಿಂದ ನಿರ್ಮಿಸಲಾಗಿದೆ. ಸಮರ್ಥವಾಗಿ ನಿರ್ವಹಣೆ ಮಾಡಿ ಎಂದು ಅವರು ತಿಳಿಸಿದರು.
ದೇವಸ್ಥಾನದ ಬಳಿಯ ಕ್ಲ್ಯಾಣಿಯನ್ನು ನರೇಗಾ ಯೋಜನೆಯಡಿ ಅಭಿವೃದ್ಧಿ ಮಾಡಿ. ಕಲ್ಯಾಣ ಮಂಟಪದ ಬೇಡಿಕೆಯನ್ನು ಇಟ್ಟಿದ್ದೀರಿ. ಸಂಬಂಧಪಟ್ಟ ಇಲಾಖೆಗೆ ಶಿಫಾರಸ್ಸು ಪತ್ರವನ್ನು ನೀಡುತ್ತೇನೆ. ದೇವಸ್ಥಾನದ ಸಮಿತಿಯವರು ಒಗ್ಗೂಡಿ ಪವಿತ್ರವಾದ ಅಭಿವೃದ್ಧಿ ಕೆಲಸಗಳನ್ನು ಮಾಡಿ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಚ್.ವಿ.ಮಂಜುನಾಥ್ ಮಾತನಾಡಿ, ಇದು ಅತ್ಯಂತ ಪವಿತ್ರವಾದ ಕ್ಷೇತ್ರ. ಇಲ್ಲಿ ಬಡವರಿಗೆ ಮದುವೆ ಮುಂತಾದ ಶುಭಕಾರ್ಯಕ್ಕೆ ಛತ್ರದ ಅವಶ್ಯಕತೆಯಿದೆ. ಶಾಸಕ ವಿ.ಮುನಿಯಪ್ಪ ಹಾಗೂ ಸಂಸದ ಕೆ.ಎಚ್.ಮುನಿಯಪ್ಪ ಅವರಿಬ್ಬರೂ ಮನಸ್ಸು ಮಾಡಿದಲ್ಲಿ ಸಮುದಾಯ ಭವನ ಮತ್ತು ಛತ್ರವನ್ನು ನಿರ್ಮಿಸಲು ಸಾಧ್ಯವಿದೆ. ಜಿಲ್ಲಾ ಪಂಚಾಯಿತಿ ಕಡೆಯಿಂದಲೂ ಏನೇನು ಸಾಧ್ಯವೋ ಅದನ್ನೆಲ್ಲಾ ಮಾಡಲು ನಾವು ಸಿದ್ಧರಿದ್ದೇವೆ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಸದಸ್ಯ ಬೇಟರಾಯಶೆಟ್ಟಿ ಮಾತನಾಡಿ, ಈ ಪವಿತ್ರ ಕ್ಷೇತ್ರದ ಅಭಿವೃದ್ಧಿಗೆ ಸಂಸದರು ಹಾಗೂ ಶಾಸಕರು ಸಂಪೂರ್ಣವಾಗಿ ಬೆಂಬಲಿಸುತ್ತಿದ್ದಾರೆ. ನಮಗೆ ಇಲ್ಲಿ ಕಲ್ಯಾಣಮಂಟಪ ಮತ್ತು ಗೋಪುರದ ಜೀರ್ಣೋದ್ಧಾರ ಕೆಲಸ ಆಗಬೇಕಿದೆ. ಧಾರ್ಮಿಕ ದತ್ತಿ ಇಲಾಖೆಗೆ ಸಂಸದರು ಶಿಫಾರಸ್ಸು ಮಾಡಬೇಕೆಂದು ಕೋರಿದರು.
ಈ ಸಂದರ್ಭದಲ್ಲಿ ವಾಲ್ಮೀಕಿ ಭವನವನ್ನು ನಿರ್ಮಾಣ ಮಾಡಿಕೊಡಿ ಎಂದು ಸಂಸದ ಕೆ.ಎಚ್.ಮುನಿಯಪ್ಪ ಅವರಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಸತೀಶ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಎನ್.ಬೈರೇಗೌಡ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಡಾ.ಎನ್.ಭಾಸ್ಕರ್, ಜಿಲ್ಲಾ ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ಜಿ.ಕೃಷ್ಣೇಗೌಡ, ಮುಖಂಡರಾದ ಕೃಷ್ಣಪ್ಪ, ಕೆ.ಗುಡಿಯಪ್ಪ, ಎಸ್.ಎಂ.ನಾರಾಯಣಸ್ವಾಮಿ, ಯರ್ರಪ್ಪ, ದಾಸಪ್ಪ, ಮುನೇಗೌಡ, ಪ್ರಕಾಶ್, ನಾಗೇಂದ್ರ, ನಾರಾಯಣಸ್ವಾಮಿ ಹಾಜರಿದ್ದರು.
- Advertisement -
- Advertisement -
- Advertisement -