ಜನಪದ ಕಲೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಕೇವಲ ಕಲಾವಿದರ ಮೇಲಷ್ಟೇ ಅಲ್ಲದೇ ಪ್ರತಿಯೊಬ್ಬ ನಾಗರಿಕರ ಮೇಲೂ ಇದೆ ಎಂದು ಜನಪದ ಹುಂಜ ಎಂಬ ಖ್ಯಾತಿಯ ಗಾಯಕ ಚಿಂತಾಮಣಿ ಮುನಿರೆಡ್ಡಿ ತಿಳಿಸಿದರು.
ತಾಲ್ಲೂಕಿನ ವರದನಾಯಕನಹಳ್ಳಿಯ ಈಧರೆ ಕಲೆ ಮತ್ತು ಸಾಂಸ್ಕೃತಿಕ ಕೇಂದ್ರದ ವತಿಯಿಂದ ನಗರದ ಉಲ್ಲೂರುಪೇಟೆಯಲ್ಲಿ ಭಾನುವಾರ ಆಯೋಜಿಸಲಾಗಿದ್ದ ಜನಪದ ಗಾಯನ ನೃತ್ಯ ಕಲೆ ತರಬೇತಿ ಕೇಂದ್ರದ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು.
ದೇಶೀಯ ಕಲೆ, ಸಂಸ್ಕೃತಿಗಳನ್ನು ಮರೆತರೆ ಬದುಕಿನ ಸತ್ವವನ್ನು ಕಳೆದುಕೊಂಡಂತೆ. ಜನಪದ ನಮ್ಮ ಸಂಸ್ಕೃತಿಯ ತಾಯಿಬೇರು. ಜಾಗತೀಕರಣ, ಪಾಶ್ಚಿಮಾತ್ಯ ಸಂಸ್ಕೃತಿಯ ಅನುಕರಣೆ ಮತ್ತಿತರ ಕಾರಣಗಳಿಂದ ಜನಪದ ಕಲೆಗಳು ಮರೆಯಾಗುತ್ತಿವೆ. ನಮ್ಮ ಜನಪದಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಅದರ ಮೂಲಕವೇ ನಮ್ಮ ಹಿರಿಯರು ಬದುಕು ಕಟ್ಟಿಕೊಂಡು ಬೆಳೆದವರು. ಬದಲಾದ ಜೀವನ ಶೈಲಿ, ಮಾಧ್ಯಮಗಳ ಪ್ರಭಾವದಿಂದ ನಮ್ಮ ಕಲೆ ಸಂಸ್ಕೃತಿ ಉಳಿಸುವಲ್ಲಿ ನಾವು ಹಿಂದೆ ಬಿದ್ದಿದ್ದೇವೆ.
ದೇಶದ ಸಂಸ್ಕೃತಿಯ ಪ್ರತೀಕವಾಗಿರುವ ಜನಪದ ಕಲೆಗಳನ್ನು ಉಳಿಸಿ ಬೆಳೆಸುವುದು ಇಂದಿನ ಪೀಳಿಗೆಯ ಪ್ರತಿಯೊಬ್ಬರ ಜವಾಬ್ದಾರಿಯಾಗಬೇಕು. ನಮ್ಮ ಹಿರಿಯರು ಅನಕ್ಷರಸ್ಥರಾದರೂ ಅವರು ಉಳಿಸಿಹೋಗಿರುವ ಗ್ರಾಮೀಣ ಸೊಗಡಿನ ಜನಪದ ಕಲೆಯನ್ನು ಮುಂದಿನ ತಲೆಮಾರಿಗೂ ತಲುಪಿಸುವ ಕೆಲಸಕ್ಕೆ ಪ್ರತಿಯೊಬ್ಬರೂ ಸಹಕಾರ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಈಧರೆ ಕಲಾ ತಂಡದ ಪ್ರಕಾಶ್, ಸಂಗೀತ ಶಿಕ್ಷಕಿ ಮಂಜುಳಾ ಜಗದೀಶ್, ಕಲಾವಿದರಾದ ದೇವರಮಳ್ಳೂರು ದೇವಪ್ಪ, ನಂಜುಂಡಿ, ನಾಯಕ ಅಮಾಸ, ಶಿಕ್ಷಕರಾದ ಶ್ರೀನಿವಾಸರೆಡ್ಡಿ, ರಾಮಕೃಷ್ಣ ಹಾಜರಿದ್ದರು.
- Advertisement -
- Advertisement -
- Advertisement -