ಶಿಡ್ಲಘಟ್ಟ ತಾಲ್ಲೂಕಿನ ವಿವಿದೆಡೆ ಇರುವ ಕೂಲಿಕಾರ್ಮಿಕರಿಗೆ ಅಗತ್ಯವಿರುವ ದಿನಸಿ ಹಾಗೂ ಆಹಾರ ಪದಾರ್ಥಗಳನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಶನಿವಾರ ವಿತರಿಸಲಾಯಿತು.
ಪ್ರಧಾನ ಜಿಲ್ಲಾ ನ್ಯಾಯಾಧೀಶರಾದ ಕೆ.ಅಮರನಾರಾಯಣ ಮಾತನಾಡಿ, “ಉಚ್ಛ ನ್ಯಾಯಾಲಯದ ಆಡಳಿತಾತ್ಮಕ ನ್ಯಾಯಾಧೀಶರಾದ ಎಸ್.ಸುರೇಂದ್ರ ಯಾದವ್ ಅವರ ನಿರ್ದೇಶನದ ಮೇರೆಗೆ ಶಿಡ್ಲಘಟ್ಟ ತಾಲ್ಲೂಕಿನ ಕಟ್ಟಡ ಕೂಲಿ ಕಾರ್ಮಿಕರಿರುವ ಸ್ಥಳಗಳಿಗೆ ಶುಕ್ರವಾರ ಭೇಟಿ ಕೊಟ್ಟೆವು. ಅವರಿಗೆ ತಾಲ್ಲೂಕು ಆಡಳಿತ ನೀಡುತ್ತಿರುವ ನೆರವಿನ ಬಗ್ಗೆ ವಿಚಾರಿಸಿ ಇನ್ನು ಏನು ಬೇಕೆಂಬುದನ್ನು ವಿಚಾರಿಸಿದೆವು. ಈ ಕೂಲಿ ಕಾರ್ಮಿಕರು ಆಂಧ್ರಪ್ರದೇಶ, ಉತ್ತರಪ್ರದೇಶ, ಒರಿಸ್ಸಾ, ಜಾರ್ಖಂಡ್, ಬಿಹಾರ ರಾಜ್ಯಗಳಿಂದ ಬಂದಿದ್ದು, ಅವರ ಆಹಾರ ಪದ್ಧತಿಗೆ ಅನುಗುಣವಾಗಿ ದಿನಸಿ ಹಾಗೂ ಆಹಾರ ಪದಾರ್ಥಗಳನ್ನು ನೀಡುತ್ತಿದ್ದೇವೆ” ಎಂದು ಹೇಳಿದರು.
ತಾಲ್ಲೂಕಿನ ಅಪ್ಪೇಗೌಡನಹಳ್ಳಿಯಲ್ಲಿ ವಿವಿಧ ರಾಜ್ಯಗಳಿಂದ ಬಂದಿರುವ 75 ಮಂದಿ ಇಂದಿರಾ ವಸತಿ ಶಾಲೆ ಕಟ್ಟಡ ಕಾಮಗಾರಿಯ ಕೂಲಿ ಕಾರ್ಮಿಕರು, ನಗರದ ಪ್ರವಾಸಿ ಮಂದಿರದ ಬಳಿ ಇರುವ ಒಂದು ಕುಟುಂಬ, ಪ್ರಥಮ ದರ್ಜೆ ಕಾಲೇಜಿನಲ್ಲಿರುವ ಆರು ಮಂದಿ ಕಾರ್ಮಿಕರು ಹಾಗೂ ಬೈಪಾಸ್ ರಸ್ತೆಯಲ್ಲಿ ಕೋಚಿಮುಲ್ ಕಚೇರಿಯ ಬಳಿ ಇದ್ದ ಹತ್ತು ಮಂದಿ ಕೂಲಿ ಕಾರ್ಮಿಕರಿಗೆ ಅಗತ್ಯ ದಿನಸಿ ಮತ್ತು ಆಹಾರ ಪದಾರ್ಥಗಳನ್ನು ನೀಡಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಚ್.ದೇವರಾಜ್, ಹಿರಿಯ ಸಿವಿಲ್ ನ್ಯಾಯಾಧೀಶರಾದ ಕೆ.ಎನ್.ರೂಪಾ, ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಡಿ.ಆರ್.ಮಂಜುನಾಥ್, ನ್ಯಾಯಾಧೀಶರಾದ ಸಂಜುಕುಮಾರ್ ಎ ಪಚ್ಚಾಪುರೆ, ಡಿ.ರೋಹಿಣಿ, ತಹಶಿಲ್ದಾರ್ ಕೆ.ಅರುಂಧತಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ, ಕಾರ್ಮಿಕ ನಿರೀಕ್ಷಕರಾದ ರಾಮಾಂಜಿನಪ್ಪ, ಕಲಾವತಿ, ಗ್ರಾಮ ಪಂಚಾಯಿತಿ ಸದಸ್ಯ ಎ.ಎಂ.ತ್ಯಾಗರಾಜ್ ಹಾಜರಿದ್ದರು.