ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ಸೇರಿದಂತೆ ಜಿಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿಗಳು ಮಂಗಳವಾರ ಶಿಡ್ಲಘಟ್ಟದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿ ನಂತರ ಸಾರ್ವಜನಿಕ ವೈದ್ಯಾಧಿಕಾರಿಗಳ ನಾಲ್ಕು ತಿಂಗಳ ಪ್ರಗತಿ ಪರಿಶೀಲನೆ ನಡೆಸಿದರು.
“ಸೂಕ್ತ ಚಿಕಿತ್ಸೆ ಸಿಗುತ್ತಿದೆಯಾ, ವೈದ್ಯರು ಅಥವಾ ಸಿಬ್ಬಂದಿ ಹಣ ಕೇಳುತ್ತಾರಾ, ವೈದ್ಯರು ಚೀಟಿಯನ್ನು ಹೊರಗಡೆಗೆ ಬರೆದುಕೊಡುವರಾ, ಸ್ವಚ್ಛತೆ ಹೇಗಿದೆ, ಡಯಾಲಿಸಿಸ್ ಮತ್ತು ಹೆರಿಗೆ ಕೋಣೆಗಳು ಹೇಗಿವೆ, ಜನೌಷಧಿ ಕೇಂದ್ರ ಉಪಯೋಗವಾಗಿದೆಯೇ” ಎಂಬುದಾಗಿ ರೋಗಿಗಳೊಂದಿಗೆ, ರೋಗಿಗಳ ಸಂಬಂಧಿಕರೊಂದಿಗೆ ಮಾತನಾಡಿದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಬಿ.ಫೌಜಿಯಾ ತರನ್ನುಮ್, ನಂತರ ವೈದ್ಯರೊಂದಿಗೆ ವಿವರಣೆ ಸಹ ಕೇಳಿದರು.
ರೈತ ಮುಖಂಡರು ಆಸ್ಪತ್ರೆಯಲ್ಲಿ ನೀರಿನ ಸಮಸ್ಯೆಯಿದ್ದು, ಅದರಿಂದ ಸ್ವಚ್ಛತೆ ಕಡಿಮೆಯಾಗಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ಕೆಲವು ಆರೋಗ್ಯ ಕೇಂದ್ರಗಳಲ್ಲಿ ಸಿಬ್ಬಂದಿ ಕೊರತೆಯಿದೆ. ವೈದ್ಯರು ಉತ್ತಮ ಸೇವೆ ನೀಡುತ್ತಿದ್ದಾರೆ, ಆದರೆ ಸಿಬ್ಬಂದಿ ಸೌಜನ್ಯದಿಂದ ಮಾತನಾಡುವುದಿಲ್ಲ ಎಂದು ದೂರಿದರು.
ಜಿಲ್ಲಾಧಿಕಾರಿಗಳ ಅನುದಾನದಿಂದ ಕೊಳವೆ ಬಾವಿ ಕೊರೆಸಲು ಹಣ ಬಿಡುಗಡೆಯಾಗಿದೆ. ಶೀಘ್ರವೇ ಕೊಳವೆ ಬಾವಿ ಕೊರೆಸಲಾಗುವುದು. ರೋಗಿಗಳೊಂದಿಗೆ ಆರೋಗ್ಯ ಸಿಬ್ಬಂದಿ ಸೌಜನ್ಯದಿಂದ ವರ್ತಿಸುವಂತೆ ತಿಳಿಹೇಳಲಾಗುವುದು. ಉಪ ಆರೋಗ್ಯ ಕೇಂದ್ರಗಳಲ್ಲಿ ಕೊರತೆಯಿರುವ ಸಿಬ್ಬಂದಿಯನ್ನು ತುಂಬಿಸಲು ತಿಳಿಸಲಾಗುವುದು ಎಂದು ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ಹೇಳಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಅವರು ಮಾತನಾಡಿ, ಬಶೆಟ್ಟಹಳ್ಳಿಯಲ್ಲಿ ವೈದ್ಯರಿಲ್ಲ. ಸ್ಕ್ಯಾನಿಂಗ್ ಮಾಡುವ ವೈದ್ಯರು ಹಾಗೂ ಡಾ.ತಿಮ್ಮೇಗೌಡ ಅವರ ವರ್ಗಾವಣೆಯಿಂದ ಕಷ್ಟವಾಗಿದೆ. ಹೊಸಕೋಟೆಯ ಎಂ.ವಿ.ಜೆ ಆಸ್ಪತ್ರೆಯಿಂದ ವೈದ್ಯರು ವಾರಕ್ಕೆರಡು ಬಾರಿ ಬಂದು ಉಚಿತವಾಗಿ ಚಿಕಿತ್ಸೆ ನೀಡಲು ಸಿದ್ದವಿದ್ದಾರೆ ಎಂದು ತಿಳಿಸಿದರು.
ರೋಗಿಗಳಿಗೆ ಅನುಕೂಲವಾಗುವುದರಿಂದ ಉಚಿತ ವೈದ್ಯರು ಸೇವೆ ಸಲ್ಲಿಸಲು ಅನುಮತಿ ನೀಡಿ. ಬಶೆಟ್ಟಹಳ್ಳಿಗೆ ವೈದ್ಯರೊಬ್ಬರನ್ನು ನಿಯೋಜಿಸುವಂತೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು ತಿಳಿಸಿದರು.
ನಾಲ್ಕು ತಿಂಗಳ ಪ್ರಗತಿ ಪರಿಶಿಲನೆಯನ್ನು ನಡೆಸಲಾಯಿತು.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ಯೋಗೇಶ್ ಗೌಡ, ಜಿಲ್ಲಾ ಕ್ಷಯ ರೋಗ ನಿರ್ಮೂಲನಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ಚಂದ್ರಮೋಹನ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಬಾಬುರೆಡ್ಡಿ, ಆರ್.ಸಿ.ಎಚ್ ಅಧಿಕಾರಿ ಡಾ.ಚನ್ನಕೇಶವರೆಡ್ಡಿ, ಜಿಲ್ಲಾ ಮಲೇರಿಯಾ ಅಧಿಕಾರಿ ಡಾ.ಪ್ರಕಾಶ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ, ಡಾ.ವಾಣಿ, ಡಾ.ಇಂದುಮತಿ ಹಾಜರಿದ್ದರು.
- Advertisement -
- Advertisement -
- Advertisement -