ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ವರದನಾಯಕನಹಳ್ಳಿ ಗೇಟ್ ಶ್ರೀ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ನಡೆದ ಭಾರತರತ್ನ ಡಾ.ಎಸ್.ರಾಧಾಕೃಷ್ಣನ್ ರವರ ಜನ್ಮದಿನೋತ್ಸವ ಹಾಗೂ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಶಾಸಕ ವಿ.ಮುನಿಯಪ್ಪ ಮಾತನಾಡಿದರು.
ದೇಶವು ಮುಂದುವರೆಯಲು ಮತ್ತು ಪ್ರಗತಿಯತ್ತ ಸಾಗಲು ಶಿಕ್ಷಕರೇ ಕಾರಣರು. ಭವಿಷ್ಯವನ್ನು ರೂಪಿಸುವ ಗುರುತರ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಅವರು ತಿಳಿಸಿದರು.
ರಾಜ್ಯದಲ್ಲಿ ಒಂದು ಕಡೆ ನೆರೆ ಮತ್ತೊಂದು ಕಡೆ ಬರ. ನಮ್ಮ ಭಾಗದಲ್ಲಂತೂ ಅಂತರ್ಜಲ ಕುಸಿದಿದ್ದು, ನೀರಿಗೆ ಸಾಕಷ್ಟು ತೊಂದರೆಯಾಗಿದೆ. ಮಳೆಬರಲಿ ಎಂದು ಎಲ್ಲರೂ ಪ್ರಾರ್ಥನೆ ಮಾಡೋಣ. ಬಂದ ಮಳೆ ನೀರನ್ನು ಸಂಗ್ರಹಿಸೋಣ ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಶ್ರೀನಿವಾಸ್ ಮಾತನಾಡಿ, ಎಲ್ಲರ ಬದುಕಿಗೆ ದಾರಿದೀಪವಾಗಬಲ್ಲ, ಬೆಳಕಿನ ದೊಂದಿಯನ್ನು ಹಿಡಿದು ಮುನ್ನಡೆಸುವ ಪವಿತ್ರವಾದ ಸೇವೆ ಶಿಕ್ಷಕ ವೃತ್ತಿ. ಮಕ್ಕಳ ವ್ಯಕ್ತಿತ್ವವನ್ನು ರೂಪಿಸುತ್ತಾ ಮುಂದಿನ ಪೀಳಿಗೆಯನ್ನು ತಿದ್ದಿ ತೀಡಿ ಸಮಾಜದ ಪ್ರಗತಿಗೆ ಕಾರಣರಾಗುವ ಶಿಕ್ಷಕರಿಗೆ ಹೃದಯ ವೈಶಾಲ್ಯತೆ ಇರಬೇಕು ಎಂದರು.
ಮುಖ್ಯ ಭಾಷಣಕಾರರಾದ ಬಿ.ಆರ್.ನರಸಿಂಹಮೂರ್ತಿ ಅವರು ಮಾತನಾಡಿ, ಶಿಕ್ಷಣ, ಮಕ್ಕಳ ಮನೋವಿಕಾಸ, ಶಿಕ್ಷಕ ವೃತ್ತಿಯ ಸವಾಲುಗಳು, ಸಾಮಾಜಿಕ ಪಲ್ಲಟಗಳು, ಜ್ಞಾನ, ವಿಜ್ಞಾನ ಮುಂತಾದ ಸಂಗತಿಗಳ ಕುರಿತಂತೆ ವಿವರವಾಗಿ ಮಾತನಾಡಿದರು.
ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಎಸ್.ವಿ.ಪ್ರಭಾಕರ್, ಎಲ್.ನಾಗಭೂಷಣ್ ಮತ್ತು ರುದ್ರೇಶಮೂರ್ತಿ ಅವರನ್ನು ಹಾಗೂ ಕಳೆದ ಸಾಲಿನಲ್ಲಿ ನಿವೃತ್ತರಾಗಿರುವ ಇಪ್ಪತ್ತಮೂರು ಮಂದಿ ಶಿಕ್ಷಕರಿಗೆ ಮತ್ತು ನಲಿಕಲಿಯಲ್ಲಿ ರಾಜ್ಯಮಟ್ಟದ ಉತ್ತಮ ಶಾಲೆಗಳೆಂದು ಐದು ಸಾವಿರ ನಗದು ಬಹುಮಾನ ಪಡೆದ ತಾಲ್ಲೂಕಿನ ಕಾಕಚೊಕ್ಕಂಡಹಳ್ಳಿ, ಪಿಳ್ಳಗುಂಡ್ಲಹಳ್ಳಿ ಮತ್ತು ಗಡಿಮಿಂಚೇನಹಳ್ಳಿ ಸರ್ಕಾರಿ ಶಾಲೆಗಳ ಶಿಕ್ಷಕರಿಗೆ ಸನ್ಮಾನಿಸಲಾಯಿತು. ರಕ್ತದಾನ ಶಿಬಿರವನ್ನು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಲಾಗಿತ್ತು.
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ನಿರ್ಮಲಾ ಮುನಿರಾಜು, ತಾಲ್ಲೂಕು ಪಂಚಾಯಿತಿ ಇಒ ಶಿವಕುಮಾರ್, ಕೋಚಿಮುಲ್ ನಿರ್ದೇಶಕ ಆರ್.ಶ್ರೀನಿವಾಸ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ನಾಗರಾಜ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸುಬ್ಬಾರೆಡ್ಡಿ, ಅಕ್ಕಲರೆಡ್ಡಿ, ಇಸಿಒ ಭಾಸ್ಕರ ಗೌಡ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಶಿವಕುಮಾರ್, ರಾಜ್ಯಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಎಂ.ದೇವರಾಜ್, ಮುನಿವೆಂಕಟಸ್ವಾಮಿ, ಶಿಕ್ಷಕ ಸಂಘದ ಮುನಿರಾಜು, ಬಿ.ಆರ್.ನಾರಾಯಣಸ್ವಾಮಿ, ಬೈರಾರೆಡ್ಡಿ, ಗೋಪಿನಾಥ್, ಎಲ್.ವಿ.ವೆಂಕಟರೆಡ್ಡಿ, ಗಜೇಂದ್ರ, ಪ್ರಕಾಶ್, ತ್ಯಾಗರಾಜ್, ಪುಟ್ಟಪ್ಪ, ಸುರೇಶ್, ರಂಗನಾಥ್ ಹಾಜರಿದ್ದರು.
- Advertisement -
- Advertisement -
- Advertisement -







