‘ಮಂಚಿಮಾಟಿಕಿ ಮಾಮಿಡಿಕಾಯಿ ಉದಿರೇಲೇದು’(ಒಳ್ಳೆ ಮಾತಿಗೆ ಮಾವಿನಕಾಯಿ ಉದುರುವುದಿಲ್ಲ), ‘ಏಡಿಸೇದಾನಿ ಮಗುಡೊಸ್ತೆ ನಾ ಮಗುಡೂ ವಸ್ತಾಡನಿ’ (ಅಳುವ ಹೆಗಂಸಿನ ಗಂಡನೊಂದಿಗೆ ನನ್ನ ಗಂಡನೂ ಬರುತ್ತಾನೆ) ಎಂದು ಸುಮ್ಮನಿರದಿರಿ. ಒಗ್ಗಟ್ಟಾಗಿ ಸರ್ಕಾರದ ಮೇಲೆ ಒತ್ತಡ ಹೇರುವ ಪರಿಸ್ಥಿತಿ ಮೂಡಿದೆ ಎಂದು ರಾಜ್ಯ ರೇಷ್ಮೆ ಹಿತರಕ್ಷಣಾ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಮಳ್ಳೂರು ಶಿವಣ್ಣ ತಿಳಿಸಿದರು.
ನಗರದ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಸೋಮವಾರ ರೇಷ್ಮೆ ಬೆಳೆಗಾರರು ಹಾಗೂ ನೂಲು ಬಿಚ್ಚಾಣಿಕೆದಾರರನ್ನು ಉದ್ದೇಶಿಸಿ ಅವರು ಮಾತನಾಡಿದರು. ರೇಷ್ಮೆ ಬೆಳೆಗಾರರ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಡಿಸೆಂಬರ್ 15 ರಂದು ಬೃಹತ್ ವಿಧಾನಸೌಧ ಚಲೋ ಹಮ್ಮಿಕೊಂಡಿದ್ದು ತಾಲ್ಲೂಕಿನ ಎಲ್ಲಾ ರೇಷ್ಮೆ ಬೆಳೆಗಾರರು ಮತ್ತು ರೀಲರುಗಳು ತಮ್ಮ ಅಸ್ಥಿತ್ವವನ್ನು ಕಾಪಾಡಿಕೊಳ್ಳಲು ಭಾಗವಹಿಸಬೇಕೆಂದು ಕೋರಿದರು.
ವಾಸ್ತವ ಉತ್ಪಾದನಾ ವೆಚ್ಚದ ಆಧಾರದಲ್ಲಿ ರೇಷ್ಮೆ ಗೂಡಿಗೆ ಕನಿಷ್ಟ ಬೆಂಬಲ ಬೆಲೆ ನಿಗದಿ ಮಾಡಬೇಕು. ಕಳೆದ 7 ತಿಂಗಳಿಂದ ರೈತರಿಗೆ ಆಗಿರುವ ಸುಮಾರು 450 ಕೋಟಿ ರೂಗಳ ನಷ್ಟವನ್ನು ನೀಡಬೇಕು. ರೇಷ್ಮೆ ಮೇಲಿನ ಆಮದು ಸುಂಕವನ್ನು ಮತ್ತೆ ಶೇ.31ಕ್ಕೆ ಏರಿಸಬೇಕು ಇತ್ಯಾದಿ ಬೇಡಿಕೆಗಳನ್ನು ರೇಷ್ಮೆ ಬೆಳೆಗಾರರ ಹಿತದೃಷ್ಟಿಯಿಂದ ಸರ್ಕಾರದ ಮುಂದಿಟ್ಟು ಆಗ್ರಹಿಸಲಾಗುತ್ತಿದೆ.
ವಿಪರ್ಯಾಸವೆಂದರೆ, ಯುಪಿಎ ಸರ್ಕಾರ ಕೇಂದ್ರದಲ್ಲಿದ್ದಾಗ ರೇಷ್ಮೆ ಬೆಳೆಗಾರರ ವಿರುದ್ಧವಾಗಿತ್ತು,ಆಗಿದ್ದ ಬಿಜೆಪಿ ರಾಜ್ಯ ಸರ್ಕಾರ ರೇಷ್ಮೆ ಬೆಳೆಗಾರರ ಪರವಾಗಿತ್ತು. ಅದೇ ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಬಂದಾಗ ರೇಷ್ಮೆ ಬೆಳೆಗಾರರ ವಿರುದ್ಧವಾಯಿತು, ರಾಜ್ಯದ ಕಾಂಗ್ರೆಸ್ ಸರ್ಕಾರ ರೇಷ್ಮೆ ಬೆಳೆಗಾರರ ಪರವಾಗಿದೆ. ಒಟ್ಟಾರೆ ರೇಷ್ಮೆ ಬೆಳೆಯುವವರ ಬಾಳು ಹಸನಾಗಲಿಲ್ಲ. ಸಂಕಷ್ಟ ಮುಂದುವರೆದಿದೆ. ಹೋರಾಟ ಮಾಡದಿದ್ದರೆ ಉಳಿಗಾಲವಿಲ್ಲ ಎಂದು ಅವರು ಹೇಳಿದರು.
ಸಾವಿರದ ಆರುನೂರು ಅಡಿಗಳ ಆಳದಿಂದ ಹೊರತೆಗೆಯುವ ನೀರಿನಿಂದ ರೇಷ್ಮೆ ಬೆಳೆಯುತ್ತಿದ್ದೇವೆ. ಒಂದು ಲಕ್ಷ ಕೋಟಿಗೂ ಅಧಿಕ ರೈತರ ಬಂಡವಾಳದಿಂದ ಐದು ಲಕ್ಷ ಜನರಿಗೆ ಆಸರೆಯಾದ ಉದ್ದಿಮೆಯಿದು. ಬಂಡವಾಳಶಾಹಿಗಳ ಪರವಾಗಿ ಕೇಂದ್ರ ಸರ್ಕಾರ ಮಾಡಿರುವ ತಪ್ಪು ನೀತಿಯಾದ ರೇಷ್ಮೆ ಮೇಲಿನ ಆಮದು ಸುಂಕ ಕಡಿಮೆ ಮಾಡಿದ್ದರಿಂದಾಗಿ ರೇಷ್ಮೆ ಗೂಡಿನ ಬೆಲೆ ಕುಸಿದಿದೆ. ಪ್ರತಿದಿನ 2 ಕೋಟಿ ರೂಗಳ ನಷ್ಟವಾಗುತ್ತಿದೆ. ರಾಜ್ಯ ಸರ್ಕಾರ ಕೂಡ ರೇಷ್ಮೆ ಬೆಳೆಗಾರರ ನೆರವಿಗೆ ಬಂದಿಲ್ಲ ಎಂದು ದೂರಿದರು.
‘ಒಂದು ಕೆಜಿ ರೇಷ್ಮೆಗೆ ಬೇಕು 350 ರೂಪಾಯಿ’, ‘ಒಂದು ಕೆಜಿ ರೇಷ್ಮೆ ನೂಲಿಗೆ ಬೇಕು 3000 ರೂಪಾಯಿ’, ‘ಕೇಂದ್ರ ಸರ್ಕಾರ ರೇಷ್ಮೆ ಮೇಲಿನ ಆಮದು ಸುಂಕವನ್ನು ಶೇ.50 ಕ್ಕೆ ಏರಿಸಬೇಕು’ ಎಂದು ಈ ಸಂದರ್ಭದಲ್ಲಿ ರೈತರು ಮತ್ತು ರೀಲರುಗಳು ಘೋಷಣೆಗಳನ್ನು ಕೂಗಿದರು.
ಪ್ರಗತಿಪರ ರೈತ ಎಚ್.ಜಿ.ಗೋಪಾಲಗೌಡ, ಕೆಂಪರೆಡ್ಡಿ, ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಹುಸೇನ್ಸಾಬ್, ತಾಲ್ಲೂಕು ಅಧ್ಯಕ್ಷ ರವಿಕುಮಾರ್, ಪ್ರತೀಶ್, ಅಫ್ಸಲ್ ಪಾಷ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -