ತಾಲ್ಲೂಕಿನ ಜೆ.ವೆಂಕಟಾಪುರದ ಪ್ರಗತಿಪರ ರೈತ ಪಾಪರಾಜು (ರಾಜಣ್ಣ) ಅವರ ತೋಟದಲ್ಲಿ ಮಂಗಳವಾರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಆಯೋಜಿಸಿದ್ದ ‘ವನಸಿರಿ ನುಡಿಸಿರಿ’ ಕಾರ್ಯಕ್ರಮದಲ್ಲಿ ಕಸಾಪ ತಾಲ್ಲೂಕು ಅಧ್ಯಕ್ಷ ಎ.ಎಂ.ತ್ಯಾಗರಾಜ್ ಮಾತನಾಡಿದರು.
ಪ್ರಕೃತಿ ನಮಗೆ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಶುದ್ಧ ನೀರು, ಗಾಳಿ, ಆಹಾರ ಸೇರಿದಂತೆ ಇನ್ನು ಅನೇಕ ಅಗತ್ಯ ವಸ್ತುಗಳನ್ನು ನೀಡುತ್ತಿದೆ. ಪರಿಸರವನ್ನು ನಾವು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ.ಪ್ರಕೃತಿಯಲ್ಲಿನ ಏರುಪೇರುಗಳಿಂದ ಭೂಮಿಯ ತಾಪಮಾನ ಹೆಚ್ಚಾಗಿದ್ದು ಅದರಿಂದ ಪ್ರಾಕೃತಿಕ ಅಸಮತೋಲನ ಏರ್ಪಟ್ಟಿದೆ. ತಾಪಮಾನವನ್ನು ನಿಯಂತ್ರಿಸಿ ಪರಿಸರದ ಸಮತೋಲನವನ್ನು ಕಾಯ್ದುಕೊಳ್ಳಲು ಪ್ರತಿಯೊಬ್ಬರೂ ಮರಗಿಡಗಳನ್ನು ಬೆಳೆಸಬೇಕು ಎಂದರು.
ಕನ್ನಡ ನಾಡಿನ ಪರಿಸರ ಸಂರಕ್ಷಣೆಯ ಹೊಣೆಗಾರಿಕೆಯೂ ಇರುವುದರಿಂದ ಕಸಾಪ ಪರಿಸರ ಸಂರಕ್ಷಣೆಯ ಕುರಿತಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದು ಅವರು ತಿಳಿಸಿದರು.
ಪ್ರಗತಿಪರ ರೈತ ಪಾಪರಾಜು (ರಾಜಣ್ಣ) ಮಾತನಾಡಿ, ರಾಜ್ಯದ ರೈತರು ತಮ್ಮ ಜಮೀನಿನಲ್ಲಿ ಒಂದು ಎಕರೆಗೆ ಕನಿಷ್ಟ 20 ಮರಗಳನ್ನು ನೆಟ್ಟು ಬೆಳೆಸುವುದನ್ನು ಕಡ್ಡಾಯಗೊಳಿಸಲು ಹೊಸ ಕಾನೂನು ರಚಿಸುವ ಚಿಂತನೆ ನಡೆಸಲಾಗುತ್ತಿದೆ. ಇದು ಸ್ವಾಗತಾರ್ಹ. ಕಾಡು, ಗಿಡ- ಮರಗಳ ನಾಶದಿಂದಾಗಿ ನಾವಿಂದು ಮಳೆಯ ಅಭಾವ ಕಾಣುತ್ತಿದ್ದೇವೆ, ಮಳೆ ಇಲ್ಲದೆ ಭೀಕರ ಬರಗಾಲವನ್ನು ಕಾಣುವಂತಾಗಿದೆ. ನಾಡು ಸಮೃದ್ಧವಾಗಿರಬೇಕಾದರೆ ಮರ-ಗಿಡಗಳನ್ನು ಬೆಳೆಸುವುದು ಬಹಳ ಅವಶ್ಯಕವಾಗಿದೆ, ಪ್ರತಿಯೊಬ್ಬರೂ ನಮ್ಮ ಸುತ್ತಲೂ ಮರ ಗಿಡಗಳನ್ನು ಬೆಳೆಸುವದರತ್ತ ಗಮನಕೊಡಬೇಕು. ಗಿಡ ನೆಟ್ಟರಷ್ಟೇ ಸಾಲದು ಪೋಷಣೆಯ ಹೊಣೆಯನ್ನು ಸಹ ಹೊರಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಸಾಪ ವತಿಯಿಂದ ಪ್ರಗತಿಪರ ರೈತ ಪಾಪರಾಜು (ರಾಜಣ್ಣ) ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕಸಾಪ ಸದಸ್ಯರು ಗಿಡವನ್ನು ನೆಟ್ಟರು.
ಆರ್‌ಡಿಎಸ್ ನಾರಾಯಣಸ್ವಾಮಿ, ರಾಮಚಂದ್ರ, ಮಲ್ಲಿಕಾರ್ಜುನ, ನೀಲಚಂದ್ರ, ಲಕ್ಷ್ಮೀನಾರಾಯಣ, ಎಂ.ಆರ್.ನಾಗರಾಜ್, ಮಂಜುನಾಥಗುಪ್ತ, ವೆಂಕಟರಮಣಪ್ಪ, ಮುನಿರಾಜು ಕುಟ್ಟಿ ಹಾಜರಿದ್ದರು.
- Advertisement -
- Advertisement -
- Advertisement -