ಹಳ್ಳಿಗರು ದುಡಿಯುವಾಗ ಹಲವು ಹಾಡುಗಳನ್ನು ಹಾಡುತ್ತಾರೆ. ತಮ್ಮ ಕ್ರಿಯಾಶೀಲತೆಯೊಂದಿಗೆ ಹಾಡುಕಟ್ಟಿ ಹಾಡುವ ಅವರ ದುಡಿಮೆ ಪದಗಳೇ ಬಹುಷಃ ಚುಟುಕು ಸಾಹಿತ್ಯಕ್ಕೆ ಮೂಲವಿರಬಹುದು ಎಂದು ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತ ಎಚ್.ಜಿ.ಗೋಪಾಲಗೌಡ ಅಭಿಪ್ರಾಯಪಟ್ಟರು.
ನಗರದ ಕಾಳಿಕಾಂಬ ಕಮಠೇಶ್ವರ ದೇವಾಲಯದ ಸಭಾಂಗಣದಲ್ಲಿ ಶನಿವಾರ ಚುಟುಕು ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕದ ವತಿಯಿಂದ ಆಯೋಜಿಸಿದ್ದ ಕವಿಗದ್ದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದಿನಿಂದಲೂ ಹಳ್ಳಿಗಳಲ್ಲಿ ವಿದ್ಯಾಭ್ಯಾಸ ಇರದಿದ್ದರೂ ಬಾಯಿಂದ ಬಾಯಿಗೆ ಹರಡುತ್ತಿದ್ದ ಜಾನಪದ ಹಾಡುಗಳಿದ್ದವು. ಕಾಲಕ್ಕೊದ್ದಿ ಅವುಗಳು ಕಡಿಮೆಯಾಗಿವೆ. ತಮ್ಮ ಬುದ್ಧಿ, ಅನುಭವ, ಪರಿಶ್ರಮದ ಸಾರದಿಂದ ಹಲವಾರು ನುಡಿಗಳು ಜನಿಸುತ್ತಿದ್ದವು. ಈಗಲೂ ರೈತ ಪ್ರವಾಸಗಳಲ್ಲಿ ಎಲ್ಲರನ್ನು ಒಗ್ಗೂಡಿಸಿ ಲವಲವಿಕೆಯಿಂದಿರಲು ಚುಟುಕು ಸಾಹಿತ್ಯ ನೆರವಾಗುತ್ತವೆ ಎಂದು ಹೇಳಿದರು.
ಸಂಕ್ರಾಂತಿ ಹಬ್ಬವು ರೈತರ ಹಬ್ಬವಾಗಿದೆ. ರೈತರನ್ನು ಜತೆಗೂಡಿಸಿಕೊಂಡು ಕವಿಗದ್ದಿಗೆ ಕಾರ್ಯಕ್ರಮ ಹಮ್ಮಿಕೊಂಡಿರುವುದು ಅಭಿನಂದನೀಯ. ರೈತರನ್ನು ಬಿಟ್ಟ ಸಾಹಿತ್ಯ ಸಾಹಿತ್ಯವಲ್ಲ ಎಂದು ನುಡಿದರು.
ಚುಟುಕು ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಚಲಪತಿಗೌಡ ಮಾತನಾಡಿ, ಯಾವುದೇ ಒಂದು ಭಾಷೆ ಉಳಿಯಬೇಕು ಹಾಗು ಬೆಳೆಯಬೇಕು ಎಂದರೆ ಆ ಭಾಷೆಯನ್ನು ಸದಾ ಕಾಲ ಬಳಸಬೇಕು. ಮನದಾಳದಿಂದ ಪ್ರೀತಿಸಬೇಕು. ನಮ್ಮ ಜನಪದರಲ್ಲಿದ್ದ ಭಾಷೆ, ಕೋಲಾರ ಚಿಕ್ಕಬಳ್ಳಾಪುರದ ಭಾಷಾ ಸೊಗಡನ್ನು ಕವನದಲ್ಲಿಯೂ ಬಳಸಬೇಕು ಎಂದು ಹೇಳಿದರು.
ಜನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತೆ ಮಳ್ಳೂರು ಶಾಂತಮ್ಮ ಜಾನಪದ ಗೀತೆಗಳನ್ನು ಹಾಡಿದರು.
ವಿವಿಧ ಕವಿಗಳು ಚುಟುಕು ಕವನವನ್ನು ವಾಚಿಸಿದರು.
ರೈತರಾದ ಶಿವಮೂರ್ತಿ, ರವಿ, ಚುಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಈಧರೆ ಪ್ರಕಾಶ್, ಕಾಳಿಕಾಂಬ ಕಮಠೇಶ್ವರ ದೇವಾಲಯ ಸಮಿತಿ ಅಧರ್ಯಕ್ಷ ಮುನಿರತ್ನಮಾಚಾರ್ ಹಾಜರಿದ್ದರು.
- Advertisement -
- Advertisement -
- Advertisement -
- Advertisement -