ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್.ಡಿ.ದೇವೇಗೌಡ ಅವರ ಎಂಭತ್ತಾರನೆ ಹುಟ್ಟು ಹಬ್ಬವನ್ನು ನಗರದ ಜೆಡಿಎಸ್ ಕಾರ್ಯಕರ್ತರೊಂದಿಗೆ ಆಶಾಕಿರಣ ಅಂಧಮಕ್ಕಳ ಶಾಲೆಯ ಮಕ್ಕಳಿಂದ ಕೇಕ್ ಕತ್ತರಿಸುವ ಮೂಲಕ ಆಚರಿಸಿ ಜೆಡಿಎಸ್ ಮುಖಂಡ ಮೇಲೂರು ಬಿ.ಎನ್.ರವಿಕುಮಾರ್ ಮಾತನಾಡಿದರು.
ದೇಶದ 11ನೇ ಪ್ರಧಾನಿಯಾಗಿ ಎಚ್.ಡಿ.ದೇವೇಗೌಡ ಅವರು ತಮ್ಮ ಅಧಿಕಾರ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ನಾವು ನೆನಪಿಡಬೇಕಾಗುತ್ತದೆ. ಮಹಿಳಾ ಮೀಸಲಾತಿ. ಕಾಶ್ಮೀರ ಸಮಸ್ಯೆ. ರೈತರಿಗೆ ರಸಗೋಬ್ಬರ ಸಬ್ಸಿಡಿ, ಹುಬ್ಬಳ್ಳಿ ಈದ್ಗ ಸಮಸ್ಯೆ. ಕಾವೇರಿ ನೀರಿನ ಸಮಸ್ಯೆ. ಮಹಾದಾಯಿ ಸಮಸ್ಯೆಯ ಹೋರಾಟ ಅವರ ರೈತರ ಮೇಲೆ ಇರುವ ಕಾಳಜಿ ಇಂದಿನ ರಾಜಕಾರಣಿಗಳಿಗೆ ಹಾಗೂ ಯುವಕರಿಗೆ ಮಾರ್ಗದರ್ಶನವಾಗಿದೆ. ಈ ನಿಟ್ಟಿನಲ್ಲಿ ಈ ದಿನ ಅಂಧ ಮಕ್ಕಳೊಂದಿಗೆ ಅವರ ಜನ್ಮದಿನಾಚರಣೆ ನಡೆಸುತ್ತಿರುವುದಾಗಿ ಅವರು ತಿಳಿಸಿದರು.
ಎಚ್.ಡಿ.ದೇವೇಗೌಡ ಅವರು ಮುತ್ಸದ್ಧಿ ರಾಜಕಾರಣಿ. ರಾಜಕಾರಣದಲ್ಲಿ ಅವರದ್ದು ಅಪರೂಪದ ವ್ಯಕ್ತಿತ್ವ. ಬಡವರ ಏಳಿಗೆಯೇ ಅವರ ಗುರಿ. ಅವರ ಮಾರ್ಗದರ್ಶನದಲ್ಲಿ ನಾವು ನಡೆಯುತ್ತೇವೆ. ಜನಪರ ಚಿಂತನೆ ಹಾಗೂ ರೈತರ ಬಗ್ಗೆ ಕಾಳಜಿಯೊಂದಿಗೆ ಸದಾ ತುಡಿಯುವ ಅವರ ಮಾನವೀಯ ಗುಣ ನಮಗೆಲ್ಲಾ ಪ್ರೇರಣೆ ಎಂದು ಹೇಳಿದರು.
ಕಾಂಗ್ರೇಸ್ ಅವರೊಂದಿಗೆ ಸೇರಿ ಎಂ.ರಾಜಣ್ಣ ಅವರು ತಂತ್ರ ರೂಪಿಸಿ ಚುನಾವಣೆಯಲ್ಲಿ ಜೆಡಿಎಸ್ ಸೋಲಿಗೆ ಕಾರಣರಾಗಿದ್ದಾರೆ, ಆದರೆ ಜನರು ತನಗೆ ಆಶೀರ್ವದಿಸಿದ್ದು, ತಾಲ್ಲೂಕಿನ ಮತದಾರರಿಗೆ ಯಾವುದೇ ಸಮಯದಲ್ಲಿ ಎನೇ ತೊಂದರೆ ಬಂದರೂ ಸಹ ಅವರ ಬೆನ್ನಿಗೆ ನಿಂತು ಸಹಾಯ ಮಾಡುತ್ತೇನೆ. ಎಂದಿನಂತೆ ಪಕ್ಷದ ಸಂಘಟನೆ ಹಾಗೂ ಮುಂದಿನ ಚುನಾವಣೆಗಳಲ್ಲಿ ಪಕ್ಷದ ಗೆಲುವಿಗೆ ಶ್ರಮಿಸುತ್ತೇನೆ. ಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಸದಾ ಸಿದ್ದರಾಗಿರುವುದಾಗಿ ಅವರು ಹೇಳಿದರು.
ಜಿಲ್ಲಾ ಪಂಚಾಯತ್ ಸದಸ್ಯ ಬಂಕ್ ಮುನಿಯಪ್ಪ ಮಾತನಾಡಿ, ಪಕ್ಷವು ತಾಯಿ ಇದ್ದಂತೆ, ಪಕ್ಷದಿಂದ ಸವಲತ್ತುಗಳನ್ನು ಪಡೆದು ಪಕ್ಷಕ್ಕೆ ಮೋಸ ಮಾಡಿದ ಕೀರ್ತಿ ಮಾಜಿ ಶಾಸಕರಿಗೆ ಸಲ್ಲುತ್ತದೆ. ಸಾರ್ವಜನಿಕರೊಂದಿಗೆ ಸದಾ ಸಂಪರ್ಕ ಹೊಂದಿದ್ದು, ಜನರ ಕಷ್ಟ ಸುಖಗಳಿಗೆ ಸ್ಪಂದಿಸುತ್ತಾ ಪಕ್ಷದ ಸಂಘಟನೆ ಮಾಡುವುದಾಗಿ ತಿಳಿಸಿದರು.
ಜೆಡಿಎಸ್ ಕಾರ್ಯಕರ್ತರೊಂದಿಗೆ ಮೆರವಣಿಗೆಯಲ್ಲಿ ಸಾರ್ವಜನಿಕರ ಆಸ್ಪತ್ರೆಗೆ ತೆರಳಿ ರೋಗಿಗಳಿಗೆ ಮತ್ತು ಬಾಣಂತಿಯರಿಗೆ ಹಣ್ಣು, ಹಾಲು ಮತ್ತು ಬ್ರೆಡ್ ವಿತರಿಸಿದರು. ಆಶಾಕಿರಣ ಅಂಧ ಮಕ್ಕಳ ಶಾಲೆಯ ಮಕ್ಕಳಿಗೆ ಊಟದ ವ್ಯವಸ್ಥೆಯನ್ನು ಮಾಡಿದ್ದರು.
ತಾಲ್ಲೂಕು ಪಂಚಾಯತಿ ಅದ್ಯಕ್ಷ ಕೆ.ಲಕ್ಷ್ಮೀನಾರಾಯಣ ರೆಡ್ಡಿ, ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕರಾದ ಶಿವಾರೆಡ್ಡಿ, ನಗರಸಭೆ ಸದಸ್ಯರಾದ ವೆಂಕಟಸ್ವಾಮಿ , ಸಿಕಂದರ್, ಲಕ್ಷ್ಮಣ್, ಮುಖಂಡರಾದ ಚೀಮನಹಳ್ಳಿ ಗೋಪಾಲ್, ಹುಜುಗೂರು ರಾಮಣ್ಣ, ಲಕ್ಷ್ಮೀನಾರಾಯಣ್, ರಾಮಕೃಷ್ಣಪ್ಪ, ಆದಿಲ್ ಪಾಷ ,ಗಂಜಿಗುಂಟೆ ಮೂರ್ತಿ, ರಾಜೇಶ್, ಶ್ರೀನಿವಾಸಗೌಡ ,ಗಿರೀಶ್ ಹಾಜರಿದ್ದರು.
- Advertisement -
- Advertisement -
- Advertisement -