ನಿವೃತ್ತಿಯಾದ ಸರಕಾರಿ ನೌಕರರ ಮೇಲೆಯೂ ಭ್ರಷ್ಟಾಚಾರದ ಪ್ರಕರಣವನ್ನು ದಾಖಲಿಸಿ, ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳುವ ಅಧಿಕಾರ ಎಸಿಬಿ ಪೊಲೀಸರಿಗೆ ಇದೆ ಎಂದು ಜಿಲ್ಲಾ ಎಸಿಬಿ ಡಿವೈಎಸ್ಪಿ ಬಿ.ಪಿ.ಪ್ರಸಾದ್ ತಿಳಿಸಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ಎಸಿಬಿ ಪೊಲೀಸರು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ಸಂದರ್ಭದಲ್ಲಿ ಅವರು ಮಾತನಾಡಿದರು.
ಲಂಚವನ್ನು ಪಡೆಯುವುದು ಕಾನೂನು ಪ್ರಕಾರ ಎಷ್ಟು ತಪ್ಪೋ ಲಂಚವನ್ನು ಕೊಡುವುದೂ ಸಹ ಅಷ್ಟೆ ತಪ್ಪು. ಕೆಲಸವನ್ನು ನಿಗದಿತ ಅವಧಿಯಲ್ಲಿ ಮಾಡದೆ ಉದ್ದೇಶಪೂರ್ವಕವಾಗಿ ವಿಳಂಬ ಮಾಡಬೇಡಿ ಎಂದು ಹೇಳಿದರು.
ಜಿಲ್ಲೆಯ ಬೇರೆ ತಾಲ್ಲೂಕುಗಳಿಗೆ ಹೋಲಿಸಿದರೆ ಶಿಡ್ಲಘಟ್ಟ ತಾಲ್ಲೂಕಿನಿಂದ ಕಡಿಮೆ ದೂರುಗಳು ಸಲ್ಲಿಕೆ ಆಗುತ್ತಿವೆ. ಆದರೂ ಕಂದಾಯ ಇಲಾಖೆಗೆ ಸಂಬಂದಿಸಿದಂತೆ ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಲೆಕ್ಕಿಗರ ವಿರುದ್ಧ ಸಾಕಷ್ಟು ದೂರುಗಳು ಬರುತ್ತಿವೆ. ಹಾಗೆಯೆ ಗ್ರಾಮ ಪಂಚಾಯಿತಿಗಳ ಪಿಡಿಒಗಳ ಮೇಲೆ ಸಾಕಷ್ಟು ದೂರುಗಳು ಕೇಳಿ ಬರುತ್ತಿದ್ದು ಈ ಬಗ್ಗೆ ಸಂಬಂದಿಸಿದವರು ಎಚ್ಚೆತ್ತು ಕೆಲಸ ಮಾಡಿದರೆ ಒಳ್ಳೆಯದು ಎಂದು ಹೇಳಿದರು.
ತುಮ್ಮನಹಳ್ಳಿ ಗ್ರಾಮ ಪಂಚಾಯಿತಿ ದೊಡ್ಡದಾಸರಹಳ್ಳಿಯ ನಾರಾಯಣಪ್ಪ ಎನ್ನುವವರು ದೂರು ನೀಡಿದರು.
ಕಾರ್ಯನಿರ್ವಾಕ ಅಧಿಕಾರಿ ಎಂ.ವೆಂಕಟೇಶ್, ಪೌರಾಯುಕ್ತ ಜಿ.ಎನ್.ಚಲಪತಿ, ಎಸಿಬಿ ಇಲಾಖೆ ಪ್ರಥಮ ದರ್ಜೆ ಗುಮಾಸ್ತ ರವಿಶಂಕರ್, ತಾಲ್ಲೂಕು ಮಟ್ಟದ ಎಲ್ಲ ಅಧಿಕಾರಿಗಳು ಹಾಜರಿದ್ದರು.