ಸರ್ಕಾರ ವಿದ್ಯಾರ್ಥಿಗಳಿಗಾಗಿ ಉಪಯುಕ್ತ ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ಸಾರ್ವಜನಿಕ ಶಿಕ್ಷಣ ಇಲಾಖೆ ಆಯೋಜಿಸಿದ್ದ ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶೈಕ್ಷಣಿಕ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳುವುದರ ಮೂಲಕ ತರಗತಿಯಲ್ಲಿ ಉತ್ತಮ ಸಾಧನೆ ಮಾಡಬೇಕು. ವಿದ್ಯಾರ್ಥಿಗಳು ಸಮಯದ ಸದುಪಯೋಗ ಮತ್ತು ದೇಹಾರೋಗ ಹೆಚ್ಚಿಸಿಕೊಳ್ಳಲು ಸೈಕಲ್ ಬಳಕೆ ಅತ್ಯುತ್ತಮ ಸಾಧನೆಯಾಗಿದೆ. ಶಾಲೆಯಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸಲು ಉಚಿತ ಸೈಕಲ್ ವಿತರಣಾ ಯೋಜನೆ ಯಶಸ್ವಿಯಾಗಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರಘುನಾಥರೆಡ್ಡಿ ಮಾತನಾಡಿ, ತಾಲ್ಲೂಕಿನಾದ್ಯಂತ ಬಸ್ಪಾಸ್ ಹೊಂದಿರುವ ಮತ್ತು ಹಾಸ್ಟೆಲ್ ಸೌಲಭ್ಯವಿರುವವರನ್ನು ಹೊರತುಪಡಿಸಿ, ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಎಂಟನೇ ತರಗತಿಯ ಗಂಡು ಮಕ್ಕಳಿಗೆ 920 ಸೈಕಲ್ಗಳು ಮತ್ತು ಹೆಣ್ಣು ಮಕ್ಕಳಿಗೆ 930 ಸೈಕಲ್ಗಳು ಸೇರಿದಂತೆ ಒಟ್ಟು 1,850 ಸೈಕಲ್ಗಳನ್ನು ವಿತರಿಸುತ್ತಿದ್ದೇವೆ ಎಂದು ತಿಳಿಸಿದರು.
ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ, ಪುರಸಭಾ ಉಪಾಧ್ಯಕ್ಷೆ ಸುಮಿತ್ರಾ ರಮೇಶ್, ಸದಸ್ಯ ಅಫ್ಸರ್ಪಾಷ, ಲಕ್ಷ್ಮಣ್, ತಾಲ್ಲೂಕು ಪಂಚಾಯತಿ ಅಧ್ಯಕ್ಷೆ ಆಂಜಿನಮ್ಮ, ಪ್ರಾಂಶುಪಾಲ ಆನಂದ್, ಶಿಕ್ಷಣ ಸಂಯೋಜಕ ಮನ್ನಾರಸ್ವಾಮಿ, ಸೂರ್ಯನಾರಾಯಣಗೌಡ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -