ಪಡಿತರ ಚೀಟಿಗಳನ್ನು ಸಕ್ರಮಗೊಳಿಸಿಕೊಳ್ಳಲಿಕ್ಕಾಗಿ ರಾಜ್ಯ ಸರ್ಕಾರ, ನ್ಯಾಯಬೆಲೆ ಅಂಗಡಿಗಳಲ್ಲಿ ಕುಟುಂಬದ ಸದಸ್ಯರೆಲ್ಲರೂ ಬಯೋಮೆಟ್ರಿಕ್ ನೀಡುವಂತೆ ಆದೇಶ ಹೊರಡಿಸಿದ್ದು, ಇದರಿಂದ ಸಾಕಷ್ಟು ಸಮಸ್ಯೆಗಳು ಉದ್ಭವವಾಗುತ್ತಿದೆ. ಸಮಸ್ಯೆಗಳನ್ನು ನಿವಾರಣೆ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕರ್ನಾಟಕ ಮಾದಿಗ ದಂಡೋರ ತಾಲ್ಲೂಕು ಅಧ್ಯಕ್ಷ ಗುರುಮೂರ್ತಿ ಆಹಾರ ಮತ್ತು ನಾಗರಿಕರ ಸರಬರಾಜು ಇಲಾಖೆಯ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.
ತಾಲ್ಲೂಕಿನಲ್ಲಿ ಈಗಾಗಲೇ ಪಡಿತರಚೀಟಿಗಳನ್ನು ಸೈಬರ್ ಸೆಂಟರ್‌ಗಳಲ್ಲಿ ನವೀಕರಣ ಮಾಡಿಸುವ ಸಮಯದಲ್ಲಿ ಮರಣ ಹೊಂದಿರುವವರು ಮತ್ತು ಮದುವೆ ಆಗಿ ಗಂಡನ ಮನೆಗೆ ಹೋದವರನ್ನು ಬಿಟ್ಟು ಉಳಿದ ಕುಟುಂಬದ ಎಲ್ಲಾ ಸದಸ್ಯರು ಬೆರಳಚ್ಚುಗಳನ್ನು ನೀಡಬೇಕು. ಈ ವೇಳೆ ಕುಟುಂಬದವರಲ್ಲಿ ಇರುವವರೆಲ್ಲರೂ ಬೆರಳಚ್ಚುಗಳನ್ನು ನೀಡಬೇಕು.
ಕುಟುಂಬದ ಸದಸ್ಯರ ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳನ್ನು ಭರ್ತಿ ಮಾಡಿ, ನವೀಕರಿಸಿದ ನಂತರ ಬರುವ ರಸೀದಿಯನ್ನು ಮುದ್ರಣ ಚೀಟಿಯನ್ನು ತೆಗೆದುಕೊಂಡು ಆಹಾರ ನಿರೀಕ್ಷರ ಕಚೇರಿಗೆ ಹೋದರೆ ಅಲ್ಲಿ ಇ-ಕೆವೈಸಿ ಎಸ್ ಎಂದು ತೋರಿಸುತ್ತದೆ. ಈ ಪ್ರಕ್ರಿಯೆ ಮುಗಿದ ನಂತರ ಪುನಃ ನ್ಯಾಯಬೆಲೆ ಅಂಗಡಿಗಳಿಗೆ ವಾಪಸ್ಸು ಬಂದು ಇ-ಕೆವೈಸಿ ಮಾಡಿಸಬೇಕು ಎಂದು ಆನ್‌ಲೈನ್‌ನಲ್ಲಿ ಬರುತ್ತಿದೆ.
ಬಡವರು, ಕೂಲಿ ಕಾರ್ಮಿಕರು, ಶಾಲಾ ಕಾಲೇಜುಗಳಲ್ಲಿ ಬೇರೆ ಬೇರೆ ಕಡೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು, ವೃದ್ಧರೂ ಸೇರಿದಂತೆ ಮನೆ ಮಂದಿಯೆಲ್ಲಾ ನ್ಯಾಯಬೆಲೆ ಅಂಗಡಿಗಳ ಮುಂದೆ ಸಾಲಿನಲ್ಲಿ ದಿನವಿಡೀ ನಿಂತರೂ ಸರ್ವರ್ ಸಮಸ್ಯೆಯಿಂದಾಗಿ ಪದೇ ಪದೇ ಅಲೆದಾಡಬೇಕಾಗಿದೆ.
ಆಧಾರ್‌ಕಾರ್ಡ್‌ನಲ್ಲಿ ೫ ವರ್ಷದ ಹಿಂದೆ ತೆಗೆಸಿರುವ ಬೆರಳಚ್ಚುಗಳು ಈಗ ತಾಳೆಯಾಗುತ್ತಿಲ್ಲ. ಅಂತಹ ಮಕ್ಕಳಿಗೆ ಪುನಃ ಆಧಾರ್‌ಕಾರ್ಡುಗಳನ್ನು ಮಾಡಿಸಬೇಕಾದರೆ ಆಧಾರ್ ಸೇವಾ ಕೇಂದ್ರಗಳು ಗ್ರಾಮೀಣ ಭಾಗದಲ್ಲಿ ಇಲ್ಲದ ಕಾರಣ ತೊಂದರೆಯಾಗುತ್ತಿದೆ.
ಮದುವೆಯಾಗಿರುವ ಹೆಣ್ಣು ಮಕ್ಕಳು ಗಂಡನ ಮನೆಯವರ ಪಡಿತರ ಚೀಟಿಯಲ್ಲಿ ಸೇರಿಸಬೇಕಾದರೆ ಅವರ ಆದಾಯ ಪ್ರಮಾಣ ಪತ್ರವನ್ನು ಕೇಳಲಾಗುತ್ತಿದೆ. ಗಂಡನ ಮನೆ ವಿಳಾಸದಲ್ಲಿ ಆದಾಯ ಪ್ರಮಾಣಪತ್ರ ಮಾಡಿಸಲು ಹೋದರೆ ಕಂದಾಯ ಇಲಾಖೆಯವರು ಆ ವಿಳಾಸದಲ್ಲಿರುವ ಹೆಸರು ಮತ್ತು ಬಾವಚಿತ್ರ ಇರುವ ಪಡಿತರ ಚೀಟಿ ಕೇಳುತ್ತಾರೆ. ತಂದೆ-ತಾಯಿ ಪಡಿತರ ಚೀಟಿಯಿಂದ ಆದಾಯ ಪ್ರಮಾಣ ಪತ್ರವನ್ನು ಗಂಡನ ಪಡಿತರ ಚೀಟಿಗೆ ವರ್ಗಾವಣೆ ಮಾಡಿಸಿಕೊಡುವ ವ್ಯವಸ್ಥೆಯಾಗಬೇಕು.
ಸರ್ವರ್‌ಗಳ ಸಮಸ್ಯೆಗಳಿಂದಾಗಿ ಜನರು ದಿನವಿಡೀ ನ್ಯಾಯಬೆಲೆ ಅಂಗಡಿಗಳ ಮುಂದೆ, ಕೂಲಿ ಕೆಲಸವನ್ನು ಬಿಟ್ಟು ಸಾಲಿನಲ್ಲೆ ಇದ್ದು ಸಂಜೆ ೪ ಗಂಟೆಗೆ ಬಂದದಾರಿಗೆ ಸುಂಕವಿಲ್ಲದಂತೆ ವಾಪಸ್ಸಾಗುವಂತಾಗಿದ್ದು, ಸರ್ಕಾರ ಈ ವಿಚಾರಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಮನವಿಯಲ್ಲಿ ಕೋರಿದ್ದಾರೆ.
ಆಹಾರ ಇಲಾಖೆಯ ಇನ್‌ಸ್ಪೆಕ್ಟರ್ ತ್ರಿವೇಣಿ ಮಾತನಾಡಿ, ರಾಜ್ಯಾದ್ಯಂತ ಒಂದೇ ರೀತಿ ನಿಯಮ ಜಾರಿಯಲ್ಲಿದೆ. ಸರ್ವರ್ ಸಮಸ್ಯೆ ತೀವ್ರವಾಗಿ ಕಾಡುತ್ತಿದೆ. ಇದುವರೆಗೂ ನಮ್ಮ ಕಚೇರಿಯಲ್ಲೆ ಜಿ.ಎಸ್.ಸಿ.ಮಾಡಲಿಕ್ಕೆ ಸಾಧ್ಯವಾಗುತ್ತಿಲ್ಲ. ಬೆಳಿಗ್ಗೆ ೧೦ ಗಂಟೆಯಿಂದ ೪ ಗಂಟೆಯ ತನಕ ಮಾಡಲಿಕ್ಕೆ ಅವಕಾಶ ನೀಡಿದ್ದಾರೆ. ಸರ್ವರ್ ಸಮಸ್ಯೆಯಿಂದ ಏನೂ ಮಾಡಲಿಕ್ಕೆ ಆಗುತ್ತಿಲ್ಲ ಎಂದರು.
- Advertisement -
- Advertisement -
For Daily Updates
WhatsApp 'HI' to 7406303366
- Advertisement -
- Advertisement -







