ತಾಲ್ಲೂಕಿನ ಲಕ್ಕಹಳ್ಳಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ನಮ್ಮ ನಾಡಿನ ಖ್ಯಾತ ಪತ್ರಕರ್ತರಾಗಿದ್ದ ಎಂ.ವೆಂಕಟಕೃಷ್ಣಯ್ಯ ಅವರ ಜನುಮ ದಿನದ ಪ್ರಯುಕ್ತ, ಕಸಾಪ ನಡೆಸಿದ ಕಾರ್ಯಕ್ರಮದಲ್ಲಿ ಕಸಾಪ ತಾಲ್ಲೂಕು ಅಧ್ಯಕ್ಷ ಎ.ಎಂ.ತ್ಯಾಗರಾಜ್ ಮಾತನಾಡಿದರು.
“ಪತ್ರಿಕೋದ್ಯಮ ಪಿತಾಮಹ”ರೆಂಬ ಬಿರುದು ಪಡೆದು, ವಿದ್ಯಾರ್ಥಿಗಳಿಂದ ‘ತಾತಯ್ಯ’ ಎಂಬ ನಾಮಾಂಕಿತ, ಬಡ-ಬಗ್ಗರ ಸೇವೆಯಲ್ಲಿ ‘ದಯಾಸಾಗರ’ ಎಂಬ ಹಿರಿಮೆ, ಗಾಂಧಿಯವರಿಂದ ‘ಭೀಷ್ಮಾಚಾರ್ಯ’ ಎಂಬ ಪ್ರಶಂಸೆಗೆ ಪಾತ್ರರಾಗಿದ್ದವರು ಹಿರಿಯ ಪತ್ರಕರ್ತ ಎಂ. ವೆಂಕಟಕೃಷ್ಣಯ್ಯನವರು. ‘ಜನ ಸೇವೆಯೇ ಜನಾರ್ಧನ ಸೇವೆ’ ಎಂದು ನುಡಿದುದನ್ನು ನಡೆಯಲ್ಲಿ ತೋರಿಸಿ ಮಹತ್ವಪೂರ್ಣ, ಚಿರಸ್ಮರಣೀಯವಾದ ಜೀವನವನ್ನು ನಡೆಸಿ ಮಾದರಿಯಾಗಿದ್ದಾರೆ ಎಂದು ಅವರು ತಿಳಿಸಿದರು.
1883 ರಲ್ಲಿ ಹಿತಬೋಧಿನಿ ಪತ್ರಿಕೆಯ ಮೂಲಕ ಪತ್ರಕರ್ತರಾಗಿ ಜೀವನ ಆರಂಭಿಸಿದ ಎಂ. ವೆಂಕಟಕೃಷ್ಣಯ್ಯನವರು ಮುಂದೆ ಸಾಧ್ವಿ, ವೃತ್ತಾಂತ, ಚಿಂತಾಮಣಿ, ಮೈಸೂರು ಹೆರಾಲ್ಡ್ ಮುಂತಾದ ಪತ್ರಿಕೆಗಳ ಮೂಲಕ ಕನ್ನಡ ಪತ್ರಿಕೋದ್ಯಮಕ್ಕೆ ಭದ್ರ ಬುನಾದಿ ಹಾಕಿದವರು. ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಮೈಸೂರಿನಲ್ಲಿ ಅನಾಥಾಲಯ ಸ್ಥಾಪನೆ ಮಾಡಿದವರು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ವಿದ್ಯಾರ್ಥಿಗಳಿಗೆ ಪತ್ರಿಕೆಗಳ ಮೂಲಕ ಮನವರಿಕೆ ಮಾಡಿಕೊಡುತ್ತಿದ್ದರು. ಅಸ್ಪೃಶ್ಯತೆ, ಜೀತ ವ್ಯವಸ್ಥೆ ವಿರುದ್ಧ ಹೋರಾಟ ಮಾಡಿದವರು ಅವರು. ಸ್ವಾತಂತ್ರ್ಯ ಪೂರ್ವದಲ್ಲಿ ವಿಧವಾ ವಿವಾಹಕ್ಕೆ ಉತ್ತೇಜನ ನೀಡಿದವರು. ಪತ್ರಿಕೋದ್ಯಮ, ಶಿಕ್ಷಣ, ಸಾಮಾಜಿಕ ಸುಧಾರಣೆಗಳ ಮೂಲಕ ಇಡೀ ಬದುಕನ್ನು ಸಮಾಜಕ್ಕೆ ಅರ್ಪಿಸಿಕೊಂಡ ಎಂ. ವೆಂಕಟಕೃಷ್ಣಯ್ಯನವರು ಕುರಿತು ವಿಚಾರಗಳನ್ನು ಈಗಿನವರು ತಿಳಿಯುವುದು ಅವಶ್ಯಕ ಎಂದು ಹೇಳಿದರು.
ಶಾಲಾ ವಿದ್ಯಾರ್ಥಿಗಳಿಗೆ ಕಸಾಪ ವತಿಯಿಂದ ಸಿಹಿಯನ್ನು ವಿತರಿಸಲಾಯಿತು.
ಶಾಲೆಯ ಮುಖ್ಯಶಿಕ್ಷಕ ಶಿವಕುಮಾರ್, ಶಿಕ್ಷಕ ರಮೇಶ್, ಎಸ್.ಡಿ.ಎಂ.ಸಿ ಅಧ್ಯಕ್ಷ ಗಂಗಾಧರ್, ನರಸಿಂಹಮೂರ್ತಿ, ಬಚ್ಚಪ್ಪ, ಎಂ.ಗೋಪಾಲಪ್ಪ, ನಾರಾಯಣಸ್ವಾಮಿ, ಬಾಬು ಹಾಜರಿದ್ದರು.
- Advertisement -
- Advertisement -
- Advertisement -