ಕ್ಷಯರೋಗ ಒಂದು ಮಾರಾಣಾಂತಿಕ ಕಾಯಿಲೆಯಲ್ಲ, ಸರ್ಕಾರಿ ಆಸ್ಪತ್ರೆಗಳಲ್ಲಿ ಸೂಕ್ತ ಉಚಿತ ಚಿಕಿತ್ಸೆ ಲಭ್ಯವಿದ್ದು ರೋಗದ ಲಕ್ಷಣಗಳು ಕಾಣಿಸಿಕೊಂಡವರು ತಕ್ಷಣ ಸಮೀಪದ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬೇಕು ಎಂದು ನಗರಸಭಾ ಅಧ್ಯಕ್ಷ ಅಫ್ಸರ್‌ಪಾಷ ತಿಳಿಸಿದರು.
ನಗರದ ಗಾಂಧಿನಗರ ಅಂಗನವಾಡಿ ಕೇಂದ್ರದಲ್ಲಿ ಮಂಗಳವಾರ ವಿಶ್ವ ಕ್ಷಯರೋಗ ದಿನಾಚರಣೆಯ ಅಂಗವಾಗಿ ಪರಿಷ್ಕೃತ ರಾಷ್ಟ್ರೀಯ ಕ್ಷಯರೋಗ ನಿಯಂತ್ರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕ್ಷಯ ರೋಗದ ಕುರಿತು ಜನರಿಗೆ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ. ಸತತವಾಗಿ ಎರಡು ವಾರಗಳಿಗೂ ಮೇಲ್ಪಟ್ಟು ಕೆಮ್ಮು, ಕೆಮ್ಮುವಿನೊಂದಿಗೆ ಕಫ, ಸಂಜೆ ವೇಳೆ ಜ್ವರ, ರಾತ್ರಿಯಲ್ಲಿ ಬೆವರುವುದು, ಎದೆನೋವು, ಉಸಿರಾಟದ ತೊಂದರೆ, ಹಸಿವಾಗದಿರುವುದು, ದೇಹದ ತೂಕ ಕಡಿಮೆಯಾಗುವುದು ಇಂತಹ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣ ಸರ್ಕಾರಿ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಉಚಿತವಾಗಿ ಸಿಗುವ ಔಷಧಿಗಳನ್ನು ನಿಯಮಿತವಾಗಿ ನಿಗದಿತ ಸಮಯದವರೆಗೂ ತೆಗೆದುಕೊಂಡರೆ ಸಂಪೂರ್ಣವಾಗಿ ಗುಣಮುಖರಾಗಲು ಅವಕಾಶವಿದೆ ಎಂದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಅನಿಲ್ ಕುಮಾರ್ ಮಾತನಾಡಿ, ಕ್ಷಯರೋಗ ಬಂದಿದೆ ಎನ್ನುವ ಕೀಳರಿಮೆಯನ್ನು ಬಿಟ್ಟು, ರೋಗವನ್ನು ನಿಯಂತ್ರಣ ಮಾಡಿಕೊಳ್ಳುವುದರ ಜೊತೆಗೆ, ರೋಗಗಳು ಹರಡದಂತೆ ಮುಂಜಾಗ್ರತೆ ವಹಿಸುವುದು ಸೂಕ್ತ. ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗ ಪತ್ತೆ ಮಾಡಲು ಪರೀಕ್ಷೆಗಳು ಹಾಗೂ ಚಿಕಿತ್ಸೆ ಸಂಪೂರ್ಣವಾಗಿ ಉಚಿತವಾಗಿರುತ್ತದೆ. ವೈದ್ಯರೊಂದಿಗೆ ನಿಮ್ಮ ಸಮಸ್ಯೆಗಳನ್ನು ಹಂಚಿಕೊಳ್ಳುವಾಗ ಮುಜುಗರ ಪಡೆದೆ ಹಂಚಿಕೊಂಡು ಈ ಎಲ್ಲಾ ಮಾಹಿತಿಗಳನ್ನು ಇತರರೊಂದಿಗೆ ಹಂಚಿಕೊಂಡು ರೋಗಗಳನ್ನು ನಿಯಂತ್ರಣ ಮಾಡಲು ಸಹಕಾರ ನೀಡಬೇಕು. ಜುಲೈ 2 ರಿಂದ ೧೩ ರವರೆಗೆ ರೋಗ ಪತ್ತೆ ಕಾರ್ಯವನ್ನು ಮಾಡಲಾಗುತ್ತದೆ ಎಂದರು.
ಮನೆ ಮನೆಗೂ ಭೇಟಿ ನೀಡಿ ಕ್ಷಯರೋಗ ತಡೆಗಟ್ಟುವ ಬಗ್ಗೆ ಮಾಹಿತಿ ಇರುವ ಸ್ಟಿಕ್ಕರ್ ಬಾಗಿಲುಗಳಿಗೆ ಅಂಟಿಸಿ ಜಾಗೃತಿ ಮೂಡಿಸಲಾಯಿತು.
ಸರ್ಕಾರಿ ವೈದ್ಯ ಡಾ.ವಿಜಯ್, ನಗರಸಭೆ ಆಯುಕ್ತ ಚಲಪತಿ, ಆರೋಗ್ಯ ಸಹಾಯಕಿ ಮುನಿರತ್ನ, ನಗರಸಭಾ ಸದಸ್ಯೆ ಶಬಾನಾ, ಚಾಂದ್ ಪಾಷ, ಅಕ್ಕಲರೆಡ್ಡಿ ಹಾಜರಿದ್ದರು.
- Advertisement -
- Advertisement -
- Advertisement -