ನಗರದ ರೈಲ್ವೆ ನಿಲ್ದಾಣದಲ್ಲಿ ರೈಲಿನ ಚಾಲಕ ಉಮಾಶಂಕರ್ ಅವರನ್ನು ಕಸಾಪ ತಾಲ್ಲೂಕು ಘಟಕದ ವತಿಯಿಂದ ಸನ್ಮಾನಿಸಿ ಪ್ರಯಾಣಿಕರಿಗೆ ಕನ್ನಡ ಪುಸ್ತಕಗಳನ್ನು ಉಚಿತವಾಗಿ ನೀಡಿ ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಎ.ಎಂ.ತ್ಯಾಗರಾಜ್ ಮಾತನಾಡಿದರು.
ರೈಲಿನ ಪ್ರಯಾಣಿಕರಿಗೆ ಪುಸ್ತಕಗಳನ್ನು ಹಂಚುವ ಮೂಲಕ ಖ್ಯಾತ ಸಂಗೀತ ವಿದ್ವಾಂಸ ಮಲ್ಲಿಕಾರ್ಜುನ ಮನ್ಸೂರ್ ಅವರ ಜನುಮ ದಿನವನ್ನು ವಿಶಿಷ್ಟವಾಗಿ ಆಚರಿಸುತ್ತಿದ್ದೇವೆ ಎಂದು ಅವರು ತಿಳಿಸಿದರು.
ನಮ್ಮ ದೇಶದ ನರನಾಡಿಯಂತಿರುವ ರೈಲುಗಳಲ್ಲಿ ಪ್ರತಿ ದಿನ ಲಕ್ಷಾಂತರ ಮಂದಿ ಪ್ರಯಾಣಿಸುತ್ತಾರೆ. ನಮ್ಮ ಭಾಗದಲ್ಲೂ ರೈಲನ್ನು ಅವಲಂಬಿಸಿರುವವರು ಅನೇಕ ಮಂದಿ. ರೈಲಿನಲ್ಲೂ ಕನ್ನಡ ಸದಾ ಉಲಿಯುತ್ತಿರಬೇಕು. ಅದಕ್ಕಾಗಿ ಕನ್ನಡ ಪುಸ್ತಕಗಳನ್ನು ಹಂಚಿದೆವು. ಸಾವಿರಾರು ಮಂದಿಯ ಸುರಕ್ಷಕರಾದ ರೈಲಿನ ಚಾಲಕರನ್ನು ಸಹ ಗುರುತಿಸಿ ಗೌರವಿಸುವುದು ನಮ್ಮ ಕರ್ತವ್ಯವಾಗಿದೆ. ಈ ಸಂದರ್ಭದಲ್ಲಿ ಕನ್ನಡ ನಾಡು ಕಂಡ ಶ್ರೇಷ್ಠ ಸಂಗೀತ ಪ್ರತಿಭೆ ಮಲ್ಲಿಕಾರ್ಜುನ ಮನ್ಸೂರ್ ಅವರ ಬಗ್ಗೆಯೂ ತಿಳಿಸಿದೆವು ಎಂದು ಹೇಳಿದರು.
ರೈಲಿನಲ್ಲಿ ಕನ್ನಡ ಬಳಕೆ ಮಾಡಬೇಕು. ಪ್ರಕಟಣೆಗಳಲ್ಲಿ, ನಾಮಫಲಕಗಳಲ್ಲಿ ಕನ್ನಡವಿರಲಿ. ಜ್ಞಾನಪೀಠ ತಂದುಕೊಟ್ಟ ಸಾಹಿತಿಗಳ ಹಾಗೂ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಮಹಾನುಭಾವರ ಚಿತ್ರಸಹಿತ ಮಾಹಿತಿ ಮತ್ತು ಕನ್ನಡನಾಡಿನ ವೈಭವವನ್ನು ಬಿಂಬಿಸುವ ಚಿತ್ರಗಳು ರೈಲ್ವೆ ನಿಲ್ದಾಣದಲ್ಲಿ ಶೋಭಿಸಲಿ. ಕನ್ನಡಿಗರಿಗೆ ರೈಲ್ವೆ ಇಲಾಖೆಯಲ್ಲಿ ಕೆಲಸ ಸಿಗಲಿ ಎಂದು ಈ ಸಂದರ್ಭದಲ್ಲಿ ಒತ್ತಾಯಿಸಿದರು.
ರೈಲ್ವೆ ಚಾಲಕ ಉಮಾಶಂಕರ್, ಸ್ಟೇಷನ್ ಮಾಸ್ಟರ್ ಮುಖೇಶ್ ಕುಮಾರ್, ಸಿಗ್ನಲ್ ಟೆಕ್ನೀಶಿಯನ್ ಗಳಾದ ಬೀರೇಂದ್ರ ಪ್ರಸಾದ್, ಪ್ರಜ್ವಲ್ ಗೌಡ, ಕಸಾಪ ತಾಲ್ಲೂಕು ಕಾರ್ಯದರ್ಶಿ ಚಾಂದ್ ಪಾಷ, ಸಂಘ ಸಂಸ್ಥೆಗಳ ಪ್ರತಿನಿಧಿ ಶಂಕರ್, ಮುನಿಯಪ್ಪ, ಮಂಜುನಾಥ್, ಅಜಿತ್ ಕುಮಾರ್ ಯಾದವ್ ಹಾಜರಿದ್ದರು.
- Advertisement -
- Advertisement -
- Advertisement -