ಕೊರೊನಾ ಲಾಕ್ ಡೌನ್ ಹಿನ್ನಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಬಡ ಕುಟುಂಬಗಳಿಗೆ ಆಹಾರ ಧಾನ್ಯಗಳ ಕಿಟ್ ವಿತರಿಸುವ ಕೆಲಸಕ್ಕೆ ಇಂದು ಚಾಲನೆ ನೀಡಲಾಗಿದೆ ಎಂದು ನಗರಸಭೆ ಸದಸ್ಯೆ ಸಿ.ಎಂ.ಸುಮಿತ್ರ ರಮೇಶ್ ಹೇಳಿದರು.
ಶ್ರೀ ಎಚ್.ಡಿ.ದೇವೇಗೌಡ ಮತ್ತು ಜಯಪ್ರಕಾಶ್ ನಾರಾಯಣ್ ಸೇವಾಭಿವೃದ್ಧಿ ಚಾರಿಟೆಬಲ್ ಟ್ರಸ್ಟ್ ಹಾಗೂ ಎಸ್.ಎಂ.ಆರ್.ಬಾಯ್ಸ್ ವತಿಯಿಂದ ಸಿದ್ದಾರ್ಥನಗರದ ಗಂಗಮ್ಮ ದೇವಾಲಯದಲ್ಲಿ ಶುಕ್ರವಾರ ಪೂಜೆ ನೆರವೇರಿಸಿದ ನಂತರ ನಗರದ 7, 8, ಹಾಗು 9 ನೇ ವಾರ್ಡಿನ ಸುಮಾರು 1,500 ಕುಟುಂಬಗಳಿಗೆ ಆಹಾರ ದಾನ್ಯಗಳ ಕಿಟ್ ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.
ಕೊರೊನಾ ಸೋಂಕು ಹರಡದಂತೆ ಸರ್ಕಾರ ಜಾರಗೆ ತಂದಿರುವ ಲಾಕ್ ಡೌನ್‌ನಿಂದ ಬಹುತೇಕ ಬಡ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಅದರಲ್ಲಿಯೂ ನಗರದ 7, 8, ಹಾಗು 9 ನೇ ವಾರ್ಡಿನ ಬಹುತೇಕ ಜನತೆ ಕೂಲಿ ನಾಲಿ ಮಾಡಿ ಜೀವನ ನಡೆಸುವವರಾಗಿದ್ದಾರೆ. ಸಂಕಷ್ಟದಲ್ಲಿ ಅವರ ನೆರವಿಗೆ ನಿಲ್ಲಬೇಕೆಂಬ ನಿಟ್ಟಿನಲ್ಲಿ ಜೆಡಿಎಸ್ ಮುಖಂಡ ಬಿ.ಎನ್.ರವಿಕುಮಾರ್‌ರ ಸೂಚನೆಯ ಮೇರೆಗೆ ಪ್ರತಿಯೊಂದು ಮನೆಗೂ ದಿನಸಿ ಕಿಟ್ ವಿತರಿಸುವ ಕೆಲಸ ಮಾಡುತ್ತಿದ್ದೇವೆ ಎಂದರು.
ನಗರಸಭೆ ಪೌರಾಯುಕ್ತ ತ್ಯಾಗರಾಜ್ ಮಾತನಾಡಿ, ನಗರದ ಸಿದ್ದಾರ್ಥನಗರದ ಸುತ್ತಮುತ್ತಲಿನ ಮೂರು ವಾರ್ಡುಗಳ ಜನತೆಗೆ ನಗರಸಭೆ ಸದಸ್ಯೆ ಸುಮಿತ್ರಾ ರಮೇಶ್ ದಂಪತಿಗಳು ದಿನಸಿ ಕಿಟ್ ವಿತರಣೆ ಮಾಡುತ್ತಿರುವುದು ಸಂತೋಷದ ವಿಷಯ, ಇದೇ ರೀತಿ ನಗರದ ಎಲ್ಲಾ ವಾರ್ಡುಗಳ ಬಡ ಜನತೆಗೆ ದಿನಸಿ ಕಿಟ್ ವಿತರಿಸಲು ಸ್ಥಳೀಯ ಜನಪ್ರತಿನಿಧಿಗಳು ಮುಂದಾಗಲಿ ಎಂದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶ್‌ಮೂರ್ತಿ ಮಾತನಾಡಿ, ಕೊರೋನಾ ಸೋಕು ಹರಡದಂತೆ ಜಾರಿಯಿರುವ ಲಾಕ್ ಡೌನ್ ಸಂದರ್ಭದಲ್ಲಿ ಜನರು ಸ್ವಲ್ಪ ಮಟ್ಟಿಗೆ ಚೇತರಿಸಿಕೊಳ್ಳಲಿ ಎಂಬ ಉದ್ದೇಶದಿಂದ ದಿನಸಿ ಕಿಟ್ ವಿತರಿಸುತ್ತಿರುವ ಕಾರ್ಯ ಶ್ಲಾಘನೀಯ. ಇಂತಹ ಕಾರ್ಯಗಳು ಹೆಚ್ಚು ಹೆಚ್ಚಾಗಿ ನಡೆಯಲಿ ಎಂದರು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಎಸ್.ಎಂ.ರಮೇಶ್, ತಾಲ್ಲೂಕು ಆಡಳಿತ ವೈದ್ಯಾಧಿಕಾರಿ ಡಾ.ವಾಣಿ, ಸ್ಥಳೀಯ ಮುಖಂಡರಾದ ಎಂ.ಮುನಿಕೃಷ್ಣ, ಜೆ.ಮಧು, ದೇವರಾಜ್, ಎನ್.ಕೃಷ್ಣಪ್ಪ, ಆರ್.ಶ್ರೀನಿವಾಸ್, ಎನ್.ರಾಮದಾಸ್, ಎಂ.ಮಂಜುನಾಥ್, ಎನ್.ಪ್ರಕಾಶ್ ಹಾಜರಿದ್ದರು.