ಶಿಡ್ಲಘಟ್ಟ ತಾಲ್ಲೂಕಿನ ಸಾಹಿತ್ಯ ಪರಿಚಾರಕ ಬಿ.ಆರ್.ಅನಂತಕೃಷ್ಣ ಮತ್ತು ಪ್ರಗತಿಪರ ಕೃಷಿಕ ಎಚ್.ಕೆ.ಸುರೇಶ್ ಅವರು ೨೦೧೯ ನೇ ಸಾಲಿನ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಬಿ.ಆರ್.ಅನಂತಕೃಷ್ಣ :
ವೃತ್ತಿಯಲ್ಲಿ ದಿನಸಿ ಅಂಗಡಿಯ ಮಾಲೀಕರಾದರೂ ಬಿ.ಆರ್.ಅನಂತಕೃಷ್ಣ ಅವರು ಪ್ರವೃತ್ತಿಯಲ್ಲಿ ಕನ್ನಡ ಸಾಹಿತ್ಯದ ಪರಿಚಾರಕರು. ಕನ್ನಡ ಭಾಷೆ, ನಾಡು ನುಡಿ, ಸಂಸ್ಕೃತಿಯನ್ನು ಬೆಳೆಸುವ ಕಾಯಕದಲ್ಲಿ ಸದಾ ನಿರತರು. ಕಸಾಪ ತಾಲ್ಲೂಕು ಅಧ್ಯಕ್ಷರಾಗಿದ್ದಾಗ ಲಕ್ಷಾಂತರ ರೂ ಬೆಲೆಯ ಪುಸ್ತಕಗಳನ್ನು ತಾಲ್ಲೂಕಿನ ೧೩೦ ಶಾಲೆಗಳ ಗ್ರಂಥಾಲಯಗಳಿಗೆ ಕೊಡುಗೆಯಾಗಿ ನೀಡಿದ್ದಾರೆ. “ಕವಿಯ ನೆನೆದು” ಕಾರ್ಯಕ್ರಮದಡಿ ಕನ್ನಡದ ಕವಿಗಳ ಪರಿಚಯ, ವಿದ್ಯಾರ್ಥಿಗಳನ್ನು ಓದಲು ಹಚ್ಚಿಸುವ “ನನ್ನ ಮೆಚ್ಚಿನ ಪುಸ್ತಕ”, “ಸಾಧಕರ ಸಾಧನೆ ವಿದ್ಯಾರ್ಥಿಗಳಿಗೆ ಪ್ರೇರಣೆ” ಕಾರ್ಯಕ್ರಮದಡಿ ವಿಜ್ಞಾನಿಗಳು, ನಟರು, ಯೋಧರು, ಹಾಡುಗಾರರು, ಸಾಹಿತಿಗಳು ಮೊದಲಾದ ಸಾಧಕರನ್ನು ಕರೆಸಿ ಮಕ್ಕಳಿಗೆ ವಿವಿಧ ಕ್ಷೇತ್ರಗಳ ಸಾಧಕರನ್ನು ಪರಿಚಯಿಸಿದ್ದಾರೆ. ಕ್ಸಾಪ ಅಧ್ಯಕ್ಷರಾಗಿದ್ದ ಕೇವಲ ಒಂದು ವರ್ಷದ ಅವಧಿಯಲ್ಲಿಯೇ ದಾಖಲೆಯ ನೂರಾರು ಕಾರ್ಯಕ್ರಮಗಳನ್ನು ಮಾಡಿ, ನಂತರ ಕನ್ನಡ ಸಾರಸ್ವತ ಪರಿಚಾರಿಕೆ ಎಂಬ ಸಂಸ್ಥೆಯ ಮೂಲಕ “ಓದುಗರ ಅರಮನೆಯಲ್ಲಿ ಪುಸ್ತಕ ಪರಿಚಯ” ಎಂಬ ವಿನೂತನ ಕಾರ್ಯಕ್ರಮವನ್ನು ಪ್ರತಿ ತಿಂಗಳು ಗ್ರಂಥಾಲಯದಲ್ಲಿ ಆಯೋಜಿಸುತ್ತಾ ಹಲವಾರು ಸಾಹಿತಿಗಳನ್ನು ಪರಿಚಯಿಸುತ್ತಿದ್ದಾರೆ. ವಿಪ್ರಪ್ರತಿಭಾ ಪುರಸ್ಕಾರ ಸೇವಾ ಟ್ರಸ್ಟ್ ಅಧ್ಯಕ್ಷರಾಗಿ ಹೆಚ್ಚು ಅಂಕಗಳನ್ನು ಪಡೆವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಮಾಡುತ್ತಿದ್ದಾರೆ. ಶಿಡ್ಲಘಟ್ಟದ ರುದ್ರಭೂಮಿಗೆ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರ ನೆರವು ಪಡೆದು ಸಿಲಿಕಾನ್ ಚೇಂಬರ್ ಅಳವಡಿಸಿದ್ದಲ್ಲದೆ, ಶವ ಸಾಗಾಣಿಕೆ ವಾಹನವನ್ನೂ ಸಹ ಶಾಸಕರ ಅನುದಾನದಲ್ಲಿ ತರಲು ಶ್ರಮಿಸಿದ್ದಾರೆ.
“ಕನ್ನಡ ಸಾಹಿತ್ಯ, ಸಂಸ್ಕೃತಿ, ಸಾಧನೆಯನ್ನು ಪಸರಿಸುವ ಪರಿಚಾರಕನ ಕೆಲಸವನ್ನು ಮಾಡುವ ನನ್ನ ಸೇವೆಯನ್ನು ಜಿಲ್ಲಾಡಳಿತ ಗುರುತಿಸಿ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಕೊಡುತ್ತಿರುವುದು ಜವಾಬ್ದಾರಿಯನ್ನು ಹೆಚ್ಚಿಸಿದೆ. ಇನ್ನಷ್ಟು ಕೆಲಸ ಮಾಡಲು ಹುಮ್ಮಸ್ಸು ಬಂದಿದೆ” ಎಂದು ಬಿ.ಆರ್.ಅನಂತಕೃಷ್ಣ ತಿಳಿಸಿದರು.
ಎಚ್.ಕೆ.ಸುರೇಶ್ :
ಶಿಡ್ಲಘಟ್ಟ ತಾಲ್ಲೂಕಿನ ಹಿತ್ತಲಹಳ್ಳಿಯ ಎಚ್.ಕೆ.ಸುರೇಶ್, ಪ್ರಗತಿಪರ ಕೃಷಿಕರು. ಕೃಷಿ ಅಧ್ಯಯನಕ್ಕಾಗಿ ಇಸ್ರೇಲ್, ಈಜಿಪ್ಟ್ ಮತ್ತು ದುಬೈ ದೇಶಗಳಿಗೆ ಹೋಗಿ ಬಂದು ತಮ್ಮ ಜಮೀನಿನಲ್ಲಿ ಇಸ್ರೇಲ್ ಮಾದರಿಯ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡಿದ್ದಾರೆ. ತಮ್ಮ ಹಿಪ್ಪುನೇರಳೆ ತೋಟದ ಪಕ್ಕದಲ್ಲಿಯೇ ವಾಸದ ಮನೆ ಹಾಗೂ ಹುಳುಸಾಕಾಣಿಕೆಯ ಮನೆಯನ್ನು ನಿರ್ಮಿಸಿಕೊಂಡಿರುವ ರೈತ ಸುರೇಶ್ ಮನೆಯಲ್ಲಿ ಬಳಸಿದ ನಂತರ ಹೊರ ಬರುವ ತ್ಯಾಜ್ಯದ ನೀರು, ಮನೆಯ ಮೇಲ್ಚಾವಣಿ ಹಾಗೂ ಹುಳು ಮನೆಯ ಮೇಲೆ ಬೀಳುವ ಮಳೆ ನೀರನ್ನು ಶೋಧಿಸಿ ೨೨ ಅಡಿ ಉದ್ದ, ೨೪ ಅಡಿ ಅಗಲ ಮತ್ತು ೧೨ ಅಡಿ ಆಳದ ಗುಂಡಿಯಲ್ಲಿ ಸಂಗ್ರಹಿಸುತ್ತಾರೆ. ಇಸ್ರೇಲ್ ತಂತ್ರಜ್ಞಾನವನ್ನೆ ಬಳಸಿ ಮನೆಯ ಬಚ್ಚಲು, ಅಡುಗೆ ಮನೆಯಿಂದ ವ್ಯರ್ಥವಾಗಿ ಹರಿಯುವ ನೀರನ್ನು ಸಂಗ್ರಹಿಸಿ ಅದನ್ನು ಹಿಪ್ಪುನೇರಳೆ ತೋಟಕ್ಕೆ ಹರಿಸಿ ಸೊಪ್ಪು ತೆಗೆಯುವ, ಅಂತರ್ಜಲ ವೃದ್ಧಿಸುವ ಕ್ರಮ ಕೈಗೊಂಡಿದ್ದಾರೆ. ಇಸ್ರೇಲ್ ತಂತ್ರಜ್ಞಾನವನ್ನೇ ಬಳಸಿ ೨೦೦ ಜಿಸಿಎಂ ಪಾಲಿಥೀನ್ ಮೇಣದ ಪೇಪರ್‌ನ ಹೊದಿಕೆಯನ್ನು ಗುಂಡಿಯ ನಾಲ್ಕೂ ಭಾಗಗಳು ಆವರಿಸಿಕೊಳ್ಳುವಂತೆ ಹಾಸಿದ್ದಾರೆ. ಇದರಿಂದ ನೀರು ಬಿಸಿಲಿಗೆ ಆವಿಯಾಗುವುದನ್ನು ತಡೆಯಬಹುದಲ್ಲದೆ, ಕಸ ಕಡ್ಡಿ ಬೆರೆಯದಂತೆಯೂ ನೋಡಿಕೊಳ್ಳಬಹುದಾಗಿದೆ.
“ನನ್ನ ಕೃಷಿ ಕಾಯಕವನ್ನು ಗುರುತಿಸಿ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಕೊಡುತ್ತಿರುವುದು ಖುಷಿಯಾಗಿದೆ” ಎಂದು ಎಚ್.ಕೆ.ಸುರೇಶ್ ಹೇಳಿದರು.
- Advertisement -
- Advertisement -
- Advertisement -