ರೈತರು ಮತ್ತು ರೀಲರುಗಳು ಈದಿನ ಬೀದಿಗೆ ಇಳಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ತಿಂಗಳಿನಲ್ಲಿ ಒಂದು ಕೆಜಿ ರೇಷ್ಮೆ ಗೂಡಿಗೆ 500 ರೂ ಇದ್ದದ್ದು ಈದಿನ 200 ರೂಗೆ ಇಳಿದಿದೆ. ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ಬೆಲೆಯ ಸ್ಥಿರತೆಗೆ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಒತ್ತಾಯಿಸಿದರು.
ನಗರದ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಮಂಗಳವಾರ ರಾಜ್ಯ ರೈತ ಸಂಘ ಹಾಗೂ ರೇಷ್ಮೆ ಬೆಳೆಗಾರರು ಒಗ್ಗೂಡಿ ನಡೆಸಿದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಕಳೆದ ಮೂರ್ನಾಕು ವರ್ಷದ ಹಿಂದಿನ ಧಾರಣೆಯಷ್ಟು ರೇಷ್ಮೆ ಗೂಡಿನ ಬೆಲೆ ಈಗ ದಿಢೀರನೆ ಕುಸಿತ ಕಂಡಿದೆ. ಗೂಡಿನ ಬೆಲೆ ಹೆಚ್ಚಾಗಬೇಕು. ರೀಲರುಗಳಿಗೂ ರೇಷ್ಮೆ ಬೆಲೆ ಹೆಚ್ಚಾಗಬೇಕು. ರೈತ ಮತ್ತು ರೀಲರು ಇಬ್ಬರ ಬದುಕನ್ನೂ ಕಟ್ಟಿಕೊಡುವ ಕೆಲಸ ಸರ್ಕಾರದಿಂದ ಆಗಬೇಕು. ಸರ್ಕಾರದ ಮೇಲೆ ಒತ್ತಡ ಹೇರುವ ನಿಟ್ಟಿನಲ್ಲಿ ರೇಷ್ಮೆ ಗೂಡಿನ ಮಾರುಕಟ್ಟೆಯ ಮುಂದೆ ಸಾಂಕೇತಿಕವಾಗಿ ರಾಜ್ಯ ರೈತ ಸಂಘ ಹಾಗೂ ರೇಷ್ಮೆ ಬೆಳೆಗಾರರು ಸೇರಿ ಒಗ್ಗಟ್ಟಾಗಿ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ.
ಬಸವರಾಜ್ ಅವರ ವರದಿಯ ಪ್ರಕಾರ ರೇಷ್ಮೆ ಗೂಡಿನ ಬೆಲೆ ಒಂದು ಕೇಜಿಗೆ 280 ರೂಗಳಿಗಿಂತ ಒಳಗೆ ಬಂದಾಗ ಸರ್ಕಾರ ಮಧ್ಯಪ್ರವೇಶ ಮಾಡಬೇಕು ಎಂದಿದೆ. ಆದರೆ ಇದುವರೆಗೂ ಆ ವರದಿಯು ಕಾರ್ಯಗತವಾಗಿಲ್ಲ. ರೈತರು ಮತ್ತು ರೀಲರುಗಳ ಹಿತದೃಷ್ಟಿಯಿಂದ ತಯಾರಾದ ವರದಿ ಇನ್ನೂ ವರದಿಯಾಗಿಯೇ ಉಳಿದಿರುವುದು ವಿಪರ್ಯಾಸವಾಗಿದೆ.
ರಾಜ್ಯದಲ್ಲಿ ಒಂದೂಕಾಲು ಕೋಟಿ ಮಂದಿ ರೇಷ್ಮೆಯನ್ನು ನಂಬಿ ಜೀವನ ನಡೆಸುತ್ತಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹದಿನೈದೂವರೆ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರೇಷ್ಮೆ ಬೆಳೆದಿದ್ದರೆ, ರಾಜ್ಯದಲ್ಲಿ ತೊಂಬತ್ತಮೂರು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ನೂರು ವರ್ಷದ ಇತಿಹಾಸ ಇರುವ ರೇಷ್ಮೆ ಇಲಾಖೆ ಉಳಿಯಬೇಕಾದರೆ, ರೇಷ್ಮೆ ಬೆಳೆಗಾರ ಉಳಿಯಬೇಕಿದೆ. ಸರ್ಕಾರ ಒಂದೆಡೆ ರೇಷ್ಮೆ ಬೆಳೆಯಿರಿ ಎನ್ನುತ್ತದೆ ಆದರೆ ಅವರ ಬೆಂಬಲವಾಗಿ ಮಾತ್ರ ನಿಲ್ಲುತ್ತಿಲ್ಲ. ಅಂತರರಾಷ್ಟ್ರೀಯ ಮಟ್ಟದಲ್ಲಿ ನಮ್ಮ ರೇಷ್ಮೆ ಗೂಡಿನ ಮಾರುಕಟ್ಟೆ ಬೆಳೆಯಬೇಕು. ಅದಕ್ಕೆ ಸರ್ಕಾರ ರೇಷ್ಮೆ ಬೆಳೆಗಾರರ ಹಿತವನ್ನು ಕಾಪಾಡಲು ಕಟಿಬದ್ಧವಾಗಬೇಕು.
ನೇರವಾಗಿ ಸಂಬಂಧಪಟ್ಟ ಆಯುಕ್ತರು, ಮಂತ್ರಿಗಳು, ಮುಖ್ಯಮಂತ್ರಿಯವರು ಮಧ್ಯಪ್ರವೇಶಿಸಬೇಕು. ಏಸಿ ರೂಮಿಗೆ ರೇಷ್ಮೆ ಇಲಾಖೆಯ ಆಯುಕ್ತರು ಸೀಮಿತರಾಗಬಾರದು. ರೇಷ್ಮೆಯನ್ನು ನಂಬಿರುವ ರಾಜ್ಯದ ಒಂದೂಕಾಲು ಕೋಟಿ ಜನ ಬೀದಿಗೆ ಬಿದ್ದರೆ ರಾಜ್ಯದ ಪರಿಸ್ಥಿತಿ ಏನಾಗುತ್ತದೆ ಊಹಿಸಿ. ಈ ಉದ್ಯನಕ್ಕೆ ಜೀವ ತುಂಬುವ ಕೆಲಸ ಮಾಡದೇ ಪರಿಸ್ಥಿತಿ ಹೀಗೇ ಮುಂದುವರೆದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರಗತಿಪರ ರೈತ ಹಿತ್ತಲಹಳ್ಳಿ ಗೋಪಾಲಗೌಡ ಮಾತನಾಡಿ, ರೇಷ್ಮೆ ಬೆಳೆಗಾರರ ಸಂಕಷ್ಟ ರಾಜ್ಯ ಸರ್ಕಾರಕ್ಕೆ ಮುಟ್ಟಬೇಕು. ರೇಷ್ಮೆ ಗೂಡಿನ ಬೆಲೆ ದಿಢೀರನೆ ಕುಸಿತ ಕಂಡಾಗ ರೈತರಿಗೆ ಆಗುವ ಪರಿಣಾಮಗಳನ್ನು ಗಮನಿಸುವವರು ಯಾರಿದ್ದಾರೆ. ಶಾಸಕರು, ಮಂತ್ರಿಗಳು, ಜನಪ್ರತಿನಿಧಿಗಳು, ಅಧಿಕಾರಿಗಳು ಎಲ್ಲರೂ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸದಿದ್ದರೆ ರೈತರು ಆರ್ಥಿಕವಾಗಿ ಸಾಲದ ಸುಳಿಗೆ ಸಿಲುಕುತ್ತಾರೆ. ಒಂದು ಕೇಜಿ ಗೂಡಿಗೆ 220 ರೂಗಳು ನಷ್ಟವಾದರೆ ರೈತ ವಿಷಕುಡಿಯದೇ ಅನ್ಯ ಮಾರ್ಗವಿಲ್ಲದಂತಾಗುತ್ತದೆ. ಬೆಂಬಲ ಬೆಲೆ ಐದು ನೂರು ರೂಗಳು ಸಿಗದಿದ್ದರೆ ರೈತರು ಹಿಪ್ಪುನೇರಳೆ ಕಡ್ಡಿಗಳನ್ನು ಕಿತ್ತುಹಾಕುತ್ತಾರೆ. ಇಚ್ಛಾಶಕ್ತಿಯಿರುವ ರಾಜಕಾರಣಿಗಳು ಮತ್ತು ಅಧಿಕಾರಿಗಳು ತಕ್ಷಣ ರೈತರ ಬೆಂಬಲಕ್ಕೆ ನಿಲ್ಲಲಿ ಎಂದು ಒತ್ತಾಯಿಸಿದರು.
ರೇಷ್ಮೆ ಗೂಡಿನ ಮಾರುಕಟ್ಟೆ ಉಪನಿರ್ದೇಶಕರ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿ ನಂತರ ಉಪನಿರ್ದೇಶಕ ಸುಭಾಷ್ ಸಂತೇನಹಳ್ಳಿ ಅವರಿಗೆ ಪ್ರತಿಭಟನಾಕಾರರು ಮನವಿಪತ್ರವನ್ನು ಸಲ್ಲಿಸಿದರು.
ರೇಷ್ಮೆ ಹಿತರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಯಲುವಳ್ಳಿ ಸೊಣ್ಣೇಗೌಡ, ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ತಾಲ್ಲೂಕು ಘಟಕದ ಅಧ್ಯಕ್ಷ ತಾದೂರು ಮಂಜುನಾಥ್, ಉಪಾಧ್ಯಕ್ಷ ವೀರಾಪುರ ಮುನಿನಂಜಪ್ಪ, ನಾರಾಯಣದಾಸರಹಳ್ಳಿ ಟಿ.ಕೃಷ್ಣಪ್ಪ, ಮಳ್ಳೂರು ಹರೀಶ್, ಎಚ್.ಸುರೇಶ್, ವೇಣುಗೋಪಾಲ್, ರಾಮಕೃಷ್ಣಪ್ಪ, ರಮೇಶ್, ಹರೀಶ್, ಬೋದಗೂರು ವೆಂಕಟಸ್ವಾಮಿರೆಡ್ಡಿ, ದೇವರಾಜ್, ಹೊಸಪೇಟೆ ಜಯಣ್ಣ ಹಾಜರಿದ್ದರು.
- Advertisement -
- Advertisement -
- Advertisement -