ಶ್ರೀರಾಮ ಜಯರಾಮ ಜಯ ಜಯ ರಾಮ ಎಂಬುದು ತಾರಕ ಮಂತ್ರ. ಇದನ್ನು ಜಪಿಸುವುದರಿಂದ ಜನ್ಮಾಂತರದ ಪಾಪಗಳು ಕರಗಿ ಹೋಗುತ್ತವೆ. ನಮ್ಮಲ್ಲಿ ರಾಮ ನಾಮ ಭಜನೆಯಿಂದ ಏಕಾಗ್ರತೆ, ಸಹನೆ, ತಾಳ್ಮೆಯ ಗುಣ ಹೆಚ್ಚುತ್ತದೆ. ಮನಸ್ಸಿಗೆ ಪ್ರಶಾಂತತೆ ಸಿಗುತ್ತದೆ. ನಮ್ಮ ದೇಹದಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಾಗಿ ಅಂದುಕೊಂಡ ಕೆಲಸದಲ್ಲಿ ಸಫಲತೆ ಕಾಣುತ್ತೇವೆ ಎಂದು ಶ್ರೀ ಸಾಯಿನಾಥ ಜ್ಞಾನಮಂದಿರದ ಮುಖ್ಯಸ್ಥ ನಾರಾಯಣಸ್ವಾಮಿ ತಿಳಿಸಿದರು.
ತಾಲ್ಲೂಕಿನ ಮಳ್ಳೂರು ಸಮೀಪದ ಭಟ್ರೇನಹಳ್ಳಿಯ ಸಾಯಿನಾಥ ಜ್ಞಾನಮಂದಿರದಲ್ಲಿ ಭಾನುವಾರ ಮುಂಜಾನೆ ಪ್ರಾರಂಭವಾದ ಶ್ರೀರಾಮನಾಮದ ಅಖಂಡ ಭಜನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಂಗಳವಾರ ಮಧ್ಯಾಹ್ನದವರೆಗೂ ಶ್ರೀರಾಮನಾಮದ ಅಖಂಡ ಭಜನೆ ಕಾರ್ಯಕ್ರಮ ನಡೆಯಲಿದೆ. ಪ್ರತಿ ಲಕ್ಷ ರಾಮನಾಮ ಜಪದ ನಂತರವೂ ಪ್ರತ್ಯೇಕ ಪೂಜೆ, ನೈವೇದ್ಯ ಸಮರ್ಪಣೆ ಮಾಡಲಾಗುವುದು. ರಾಮ ನಾಮ ಜಪಿಸುವುದು ಗಾಂಧೀಜಿಯವರಿಗೂ ಪ್ರಿಯವಾಗಿತ್ತು. ಯಾವ ಭೇದಭಾವವಿಲ್ಲದೆ ಎಲ್ಲರೂ ಸುಲಭವಾಗಿ ಜಪಿಸುವ ರಾಮ ಮಂತ್ರ ಜಪಿಸುವುದರಿಮ್ದ ರಾಮನ ಆದರ್ಶಗಳು ನಮ್ಮಲ್ಲಿ ಹುಟ್ಟುತ್ತವೆ ಎಂದು ಹೇಳಿದರು.
ರಾಮ ಕೋಟಿಯ ಭಜನಾ ತಂಡದವರಿಂದ ಶ್ರೀರಾಮ ಜಯರಾಮ ಜಯ ಜಯ ರಾಮ ಎಂಬ ಜಪ ಪ್ರಾರಂಭವಾಯಿತು. ಈ ಸಂದರ್ಭದಲ್ಲಿ ಶ್ರೀರಾಮ, ಸೀತೆ, ಲಕ್ಷ್ಮಣ, ಹನುಮಂತರ ಮೂರ್ತಿಗಳಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು.
- Advertisement -
- Advertisement -
- Advertisement -







