“ನನಗೆ ಓದಲು ಇಷ್ಟ, ಆದರೆ ಮನೆಯಲ್ಲಿ ಶಾಲೆಗೆ ಹೋಗಬೇಡ ಅನ್ನುತ್ತಾರೆ. ನಾನು ಶಾಲೆಗೆ ಬರಲು ಹೆಚ್ಚು ಓದಲು ಅವಕಾಶ ಮಾಡಿಕೊಡಿ” ಎಂದು ಮೇಲೂರಿನ ಸರ್ಕಾರಿ ಶಾಲೆಯ ಏಳನೇ ತರಗತಿಯ ವಿದ್ಯಾರ್ಥಿನಿ ಯಾಸ್ಮೀನ್ ಹೇಳುತ್ತಿದ್ದಂತೆಯೇ ವೇದಿಕೆಯಲ್ಲಿದ್ದ ಗಣ್ಯರೆಲ್ಲರೂ ಒಂದು ಕ್ಷಣ ದಿಗ್ಮೂಢರಾದರು.
ತಾಲ್ಲೂಕಿನ ಮೇಲೂರು ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಶುಕ್ರವಾರ ಗ್ರಾಮಾಂತರ ಟ್ರಸ್ಟ್, ಸಿ.ಎಂ.ಸಿ.ಎ ಸಂಸ್ಥೆ ಮತ್ತು ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ನಡೆದ “ಮಕ್ಕಳ ವಿಶೇಷ ಗ್ರಾಮಸಭೆಯಲ್ಲಿ” ವಿದ್ಯಾರ್ಥಿಗಳು ತಮ್ಮ ಶಾಲೆ ಹಾಗೂ ಗ್ರಾಮದ ಸಮಸ್ಯೆಗಳ ಬಗ್ಗೆ ಮಾತನಾಡಿದರು.
ಶಾಲೆಯ ಕಟ್ಟಡವನ್ನು ನವೀಕರಿಸಿ ಎಂದು ಚಂದ್ರಿಕ, ಕಿರಣ್, ಸಾಯಿಪ್ರಕಾಶ್ ಕೋರಿದರೆ, ಚೌಡಸಂದ್ರದ ನಿತಿನ್ ರಂಗಮಂದಿರದ ಬೇಡಿಕೆಯಿಟ್ಟ. ಕುಸುಮ ಕಂಬದಹಳ್ಳಿಯಲ್ಲಿ ರಾತ್ರಿ ವೇಳೆ ನಾಯಿಗಳ ಕಾಟವೆಂದರೆ, ಎಂ.ಅಕ್ಷಯ ಆಟದ ಮೈದಾನ ಬೇಕೆಂದನು. ಚೌಡಸಂದ್ರದ ಮೀನಾಕ್ಷಿ ಆಟದ ಮೈದಾನದಲ್ಲಿ ಕಲ್ಲು ಮುಳ್ಳುಗಳಿವೆ ಎಂಬುದನ್ನು ತಿಳಿಸಿದರೆ, ಚರಣ್ ಕಸದ ತೊಟ್ಟಿಯಿಲ್ಲದೆ ಕಸ ಎಲ್ಲೆಂದರಲ್ಲಿ ಹಾಕುತ್ತಾರೆ ಎಂಬ ಸಂಗತಿಯನ್ನು ವಿವರಿಸಿದನು. ಹೀಗೆ ವಿವಿಧ ಸಮಸ್ಯೆಗಳನ್ನು ವಿದ್ಯಾರ್ಥಿಗಳು ವಿವರಿಸಿದರು.
ಮಕ್ಕಳ ಅಭಿವೃದ್ಧಿ ಅಧಿಕಾರಿ ಗೋಪಾಲ್ ಮಾತನಾಡಿ,”ಶಿಕ್ಷಣವು ಮಕ್ಕಳ ಹಕ್ಕು. ಅದನ್ನು ಯಾರೂ ಕಸಿಯುವಂತಿಲ್ಲ. ವಿದ್ಯಾವಂತ ಹೆಣ್ಣುಮಕ್ಕಳು ದೇಶದ ಆಸ್ತಿಯಿದ್ದಂತೆ. ಸಾಧಕ ಮಹಿಳೆಯರ ಉದಾಹರಣೆಗಳನ್ನು ನೀಡಿ ಶಿಕ್ಷಕರು ಪೋಷಕರಿಗೆ ಅರಿವು ಮೂಡಿಸಬೇಕು. ಓದಿ ಸಾಧನೆ ಮಾಡಿದ ಹೆಣ್ಣು ಮಗು ಪೋಷಕರು ಹೆಮ್ಮೆ ಪಡುವಂತೆ ಜೀವನ ನಡೆಸಬಹುದಾಗಿದೆ. ವಿದ್ಯಾರ್ಥಿಗಳ ಸಮಸ್ಯೆಗಳನ್ನು ಪರಿಹರಿಸಬೇಕಾದ್ದು ನಮ್ಮ ಕರ್ತವ್ಯ. ಮಕ್ಕಳು ತಿಳಿಸಿದ ಎಲ್ಲಾ ಸಮಸ್ಯೆಗಳಿಗೂ ಪರಿಹಾರವಿದೆ. ಸಾರ್ವಜನಿಕರು ಕೂಡ ಸಹಕರಿಸಬೇಕು. ಸ್ವಚ್ಛತೆಗೆ ಆದ್ಯತೆಯನ್ನು ನೀಡಬೇಕು. ನಮ್ಮ ಗ್ರಾಮ ಎಂಬ ಮನೋಭಾವ ಬಂದರೆ ಒಗ್ಗಟ್ಟಿನಿಂದ ಅಭಿವೃದ್ಧಿಯತ್ತ ಸಾಗಬಹುದು” ಎಂದರು.
ಈ ಸಂದರ್ಭದಲ್ಲಿ ಮಕ್ಕಳು ತಿಳಿಸಿದ ಸಮಸ್ಯೆಗಳಿಗೆ ಸಂಬಂಧಪಟ್ಟ ಅಧಿಕಾರಿಗಳು ಪರಿಹಾರಗಳನ್ನು ತಿಳಿಸಿದರು. ಗ್ರಾಮ ಪಂಚಾಯಿತಿ ವತಿಯಿಂದ ಆಗುವ ಕೆಲಸಗಳನ್ನು ಶೀಘ್ರವಾಗಿ ಮಾಡುವುದಾಗಿ ತಿಳಿಸಲಾಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಮುನಾ ಧರ್ಮೇಂದ್ರ, ಉಪಾಧ್ಯಕ್ಷ ಆಂಜನೇಯರೆಡ್ಡಿ, ಸದಸ್ಯೆ ವಿಮಲಮ್ಮ, ಅಭಿವೃದ್ಧಿ ಅಧಿಕಾರಿ ಕೆ.ವಿ.ಶಾರದಾ, ಸಿ.ಡಬ್ಲು.ಸಿ ಸಂಸ್ಥೆಯ ನಾಗಮಣಿ, ಗ್ರಾಮಾಂತರ ಟ್ರಸ್ಟ್ ನ ಉಷಾಶೆಟ್ಟಿ, ಅನಂತಲಕ್ಷ್ಮಿ, ಮುಖ್ಯಶಿಕ್ಷಕ ಗಂಗಪ್ಪ, ಎಂ.ನಳಿನ ಹಾಜರಿದ್ದರು.
- Advertisement -
- Advertisement -
- Advertisement -







