Sidlaghatta : “EPIC ಕಾರ್ಡ್ ಹೊಂದಿರುವ ಮತದಾರರು ತಮ್ಮ Aadhaar ಸಂಖ್ಯೆಯನ್ನು ಮತದಾರರ ಗುರುತಿನ ಚೀಟಿಗೆ ಲಿಂಕ್ ಮಾಡಬೇಕು. ವೋಟರ್ ಹೆಲ್ಪ್ ಲೈನ್ಆ್ಯಪ್, ಗರುಡ ಆ್ಯಪ್ ಹಾಗೂ ಬೂತ್ ಮಟ್ಟದ ಅಧಿಕಾರಿಗೆ ಆಧಾರ್ ಸಂಖ್ಯೆ ನೀಡಿ ಚುನಾವಣಾ ಗುರುತಿನ ಚೀಟಿಗೆ ಜೋಡಣೆ ಮಾಡಲಾಗುತ್ತದೆ” ಎಂದು ಜಿಲ್ಲೆಯಾದ್ಯಂತ ಆಂದೋಲನ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಎಂ.ಎನ್.ನಾಗರಾಜ್ ತಿಳಿಸಿದರು.
ಮತದಾರರ ಪಟ್ಟಿಯೊಂದಿಗೆ ಆಧಾರ್ ಕಾರ್ಡ್ ಲಿಂಕ್ ಸಂಬಂದಿಸಿದಂತೆ ವಿಶೇಷ ಆಂದೋಲನದ ಅಂಗವಾಗಿ ನಗರದ ತಾಲ್ಲೂಕು ಕಚೇರಿಗೆ ಶನಿವಾರ ಹಠಾತ್ ಆಗಿ ಬೇಟಿ ನೀಡಿ ಪ್ರಗತಿ ಪರಿಶೀಲಿಸಿ ಅವರು ಮಾತನಾಡಿದರು.
ಶಿಡ್ಲಘಟ್ಟ ತಾಲ್ಲೂಕು ಹಾಗೂ ನಗರ ಶಿಡ್ಲಘಟ್ಟ ನಗರ ಚಿಕ್ಕಬಳ್ಳಾಪುರ ಜಿಲ್ಲೆಗೆ ಪ್ರಥಮ ಸ್ಥಾನದಲ್ಲಿದ್ದು, ಇದಕ್ಕೆ ಕಾರಣಕರ್ತರಾದ ಎಲ್ಲಾ ಮತಗಟ್ಟೆ ಅಧಿಕಾರಿಗಳು, ಚುನಾವಣಾ ನಿರತ ಸಿಬ್ಬಂದಿ ಹಾಗೂ ತಹಶೀಲ್ದಾರ್ ಬಿ.ಎಸ್. ರಾಜೀವ್ ಮತ್ತು ಪೌರಾಯುಕ್ತ ಶ್ರೀಕಾಂತ್ ಅವರನ್ನು ಜಿಲ್ಲಾ ಆಡಳಿತದ ಪರವಾಗಿ ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ಶ್ಲಾಘಿಸಿದರು.
ಈಗಾಗಲೇ ಚುನಾವಣೆ ಗುರುತಿನ ಚೀಟಿಗೆ ಸಾಕಷ್ಟು ಜನರು ಆಧಾರ್ ಲಿಂಕ್ ಮಾಡಿದ್ದಾರೆ. ಮರಣ ಹೊಂದಿರುವವರು, ಸ್ಥಳಾಂತರವಾಗಿರುವವರು, ಡಬಲ್ ಎಂಟ್ರಿ ಆಗಿರುವುದು ಸೇರಿದಂತೆ ಇತರೆ ಮಾಹಿತಿಯನ್ನು ಗರುಡಾ ಆ್ಯಪ್‌ನಲ್ಲಿ ಎಂಟ್ರಿಮಾಡಲು ಬಿಎಲ್‌ಓಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.
ಮತದಾರರ ಗುರುತಿನ ಚೀಟಿಗೆ ಆಧಾರ್ ಜೋಡಣೆಯಿಂದ ಎರಡು ಕಡೆ ಮತದಾನ ಸೇರಿದಂತೆ ಚುನಾವಣೆ ಅಕ್ರಮ ತಡೆಯಬಹುದು. ಕೆಲವು ಮತದಾರರು ಸಹಕರಿಸದಿರುವ ಬಗ್ಗೆ ಮಾಹಿತಿ ಬಂದಿದೆ. ಪ್ರತಿಯೊಬ್ಬರ ಮನವೊಲಿಸಿ ಲಿಂಕ್ ಮಾಡಿಸಬೇಕು ಎಂದು ಅಧಿಕಾರಿಗಳಿಗೆ ಹೇಳಿದರು.
ತಹಶೀಲ್ದಾರ್ ಬಿ.ಎಸ್. ರಾಜೀವ್, ಪೌರಾಯುಕ್ತ ಶ್ರೀಕಾಂತ್, ಶಿರಸ್ತೆದಾರ್ ಮಂಜುನಾಥ್ ಹಾಜರಿದ್ದರು.