ಹವಾಮಾನ ವೈಪರೀತ್ಯದಿಂದ ಬರ ಪರಿಸ್ಥಿತಿ ನಿರ್ಮಾಣವಾಗಿದೆ. ಉತ್ತಮ ಮಳೆಯಾದರೂ ನೀರನ್ನು ಸಂಗ್ರಹಿಸಿ ಇಟ್ಟುಕೊಳ್ಳುವಲ್ಲಿ ವಿಫಲರಾಗಿದ್ದೇವೆ. ಇದರಿಂದ ನೀರಿಗೆ ಹಾಹಾಕಾರ ಉಂಟಾಗಿದೆ. ಮಳೆ ನೀರು ಸಂರಕ್ಷಿಸುವುದು ಮತ್ತು ಗಿಡ ಮರ ಬೆಳಸುವುದು ಎಲ್ಲರ ಜವಾಬ್ದಾರಿ ಎಂದು ಯುವ ಶಕ್ತಿ ಸಂಘಟನೆಯ ಅಧ್ಯಕ್ಷ ವಿಜಯ ಕುಮಾರ್ ಭಾವರೆಡ್ಡಿ ತಿಳಿಸಿದರು.
ತಾಲ್ಲೂಕಿನ ದಿಬ್ಬೂರಹಳ್ಳಿಯ ಶ್ರೀ ವೆಂಕಟೇಶ್ವರ ಪ್ರಾಢಶಾಲೆ ಆವರಣದಲ್ಲಿ ಶನಿವಾರ ಶಿಡ್ಲಘಟ್ಟ ವಲಯ ಅರಣ್ಯ ಇಲಾಖೆ, ಯುವಶಕ್ತಿ ಮತ್ತು ಶ್ರೀ ವೆಂಕಟೇಶ್ವರ ಪ್ರೌಢಶಾಲೆ ದಿಬ್ಬೂರಹಳ್ಳಿ ಇವರ ಸಹಯೋಗದಲ್ಲಿ 30 ಸಾವಿರ ಬೀಜದುಂಡೆ ತಯಾರಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಹೊಂಗೆ, ಬೇವು, ಬಿದಿರು, ಹುಣಸೆ, ಅಶೋಕ, ನೇರಳೆ ಮುಂತಾದ ಬೇರೆ ಬೇರೆ ಜಾತಿ ಬೀಜಗಳನ್ನು ಮಣ್ಣು ಮತ್ತು ಗೊಬ್ಬರದ ಮಿಶ್ರಣಕ್ಕೆ ಸೇರಿಸಿ ಅದನ್ನು ಚೆಂಡಿನ ಆಕಾರ ಮಾಡಿ ಒಣಗಿಸಿಡುವುದು ಬೀಜದುಂಡೆ ಎನ್ನುವರು. ಕೆಂಪು ಮಣ್ಣು, ಕೆರೆಮಣ್ಣು ಅಥವಾ ಆಯಾ ಪ್ರದೇಶಕ್ಕೆ ಅನುಗುಣವಾದ ಮಣ್ಣನ್ನು ಬಳಸಲಾಗುತ್ತದೆ. ಮೂರು ಭಾಗದ ಮಣ್ಣಿಗೆ ಒಂದು ಭಾಗದಷ್ಟು ಸಗಣಿ ಗೊಬ್ಬರ ಮಿಶ್ರಣ ಮಾಡಿದ್ದೇವೆ. ಬರಡು ನೆಲದಲ್ಲೂ ಈ ಪದ್ಧತಿಯಲ್ಲಿ ಮೊಳಕೆ ಬರುತ್ತದೆ. ಶಾಲಾ ವಿದ್ಯಾರ್ಥಿಗಳ ಸಹಕಾರದೊಂದಿಗೆ ಬೀಜದುಂಡೆಗಳನ್ನು ತಯಾರಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ತಲಕಾಯಲ ಬೆಟ್ಟಗಳ ಸಾಲಿನಲ್ಲಿ ಇವನ್ನು ಸಣ್ಣ ಗುಂಡಿ ತೆಗೆದು ನಾಟಿ ಮಾಡುತ್ತೇವೆ. ಮಳೆ ಬೀಳುತ್ತಿದ್ದಂತೆಯೇ ಬೀಜ ಮೊಳಕೆಯೊಡೆದು ಜೊತೆಗಿರುವ ಗೊಬ್ಬರದ ಪೋಷಕಾಂಶ ಬಳಸಿಕೊಂಡು ಸದೃಢವಾಗಿ ಬೆಳೆಯುತ್ತದೆ ಎಂದು ವಿವರಿಸಿದರು.
ವಲಯ ಅರಣ್ಯಾಧಿಕಾರಿ ತಿಮ್ಮರಾಯಪ್ಪ ಮಾತನಾಡಿ, ರೈತ ಕುಟುಂಬದಲ್ಲಿ ಹುಟ್ಟಿ, ತಾನು ಉನ್ನತ ಹುದ್ದೆಗೇರಿದರೂ ಬೇರಿನ ಸೆಳೆತದಿಂದ ಹುಟ್ಟಿಕೊಂಡ ಸಂಘಟನೆಯೇ ಯುವಶಕ್ತಿ. ತನ್ನ ಜಿಲ್ಲೆಗೆ, ತನ್ನ ಗ್ರಾಮಕ್ಕೆ ಏನಾದರೂ ಉತ್ತಮ ಕಾರ್ಯಗಳನ್ನು ಮಾಡುವ ನಿಟ್ಟಿನಲ್ಲಿ ಯುವಕರನ್ನು ಒಗ್ಗೂಡಿಸಿ ಯುವಶಕ್ತಿ ಎಂಬ ಸಂಘಟನೆಯೊಂದಿಗೆ ಜಿಲ್ಲೆಯ ಸಮಸ್ಯೆಗಳಿಗೆ ಸ್ಪಂದಿಸುವ ವಿಜಯ್ ಅಭಿನಂದನೀಯ. ಉಪಅರಣ್ಯ ಸಂರಕ್ಷಣಾಧಿಕಾರಿಗಳ ಮಾರ್ಗದರ್ಶನದಲ್ಲಿ ಬೀಜದುಂಡೆ ತಯಾರಿಕೆಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದ್ದೇವೆ. ಯುವಶಕ್ತಿ ಮತ್ತು ಶಾಲೆಗಳ ಸಹಕಾರದಿಂದ 30 ಸಾವಿರ ಬೀಜದುಂಡೆಗಳ ತಯಾರಿ ನಡೆಸಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಶಾಲಾ ಆವರಣದಲ್ಲಿ ಗಿಡಗಳನ್ನು ನೆಡಲಾಯಿತು. ಉಪವಲಯ ಅರಣ್ಯಾಧಿಕಾರಿಗಳಾದ ರಾಮಾಂಜಿನೇಯುಲು, ಭಾಸ್ಕರ್‌ಬಾಬು, ಅರಣ್ಯ ರಕ್ಷಕರಾದ ಹುಸೇನಿ ನಿಂಬಾಳ್, ಶ್ರೀಕಲಾ, ಯುವಶಕ್ತಿ ಸಂಘಟನೆಯ ವಿಶ್ವನಾಥ್, ಹಿತ್ತಲಹಳ್ಳಿ ಮುನಿರಾಜು, ರಾಘವೇಂದ್ರ, ಮಧು, ಶಿವಪ್ರಸಾದ್, ನವೀನ್, ಶ್ರೀ ವೆಂಕಟೇಶ್ವರ ಪ್ರಾಢಶಾಲೆ ಮುಖ್ಯಶಿಕ್ಷಕ ಗೋಪಿನಾಥ್, ದಿಬ್ಬೂರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಜಗದೀಶ್ವರ ಕಾನ್ವೆಂಟ್, ಎಸ್‌ಎಂಇ ಕಾನ್ವೆಂಟ್ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಬೀಜದುಂಡೆಗಳ ತಯಾರಿಕೆಯಲ್ಲಿ ಪಾಲ್ಗೊಂಡಿದ್ದರು.
- Advertisement -
- Advertisement -
- Advertisement -