ರಾಷ್ಟ್ರಗೀತೆಯನ್ನು ಹಾಡಲು ಆರಂಭಿಸಿ ನೂರು ವರ್ಷಗಳಾದವು ಎಂದು ಮುಖ್ಯ ಶಿಕ್ಷಕಿ ವೆಂಕಟರತ್ನಮ್ಮ ತಿಳಿಸಿದರು.
ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ರಾಷ್ಟ್ರಗೀತೆ ರಚನಾ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
1911ರ ಡಿಸೆಂಬರ್ 27 ರಂದು ಭಾರತದ ರಾಷ್ಟ್ರಗೀತೆಯನ್ನು ಮೊಟ್ಟ ಮೊದಲ ಬಾರಿಗೆ ಕೊಲ್ಕತ್ತಾದಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಅಧಿವೇಶನದಲ್ಲಿ ಹಾಡಲಾಯಿತು. ಈ ಗೀತೆಯನ್ನು 1950ರ ಜನವರಿ 24ರಂದು ಸಂವಿಧಾನಾತ್ಮಕವಾಗಿ ರಾಷ್ಟ್ರಗೀತೆಯನ್ನಾಗಿ ಅಂಗೀಕರಿಸಲಾಯಿತು. ಕವಿ ರವೀಂದ್ರನಾಥ್ ಟಾಗೂರ್ ಅವರ ಸಂಸ್ಕೃತ ಬಂಗಾಲಿಗಳ ಮೂಲ ರಚನೆಯನ್ನು ಅಬಿದ್ ಅಲಿ ಹಿಂದಿಗೆ ಅನುವಾದಿಸಿದ್ದಾರೆ ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಸದಸ್ಯ ಎ.ಎಂ.ತ್ಯಾಗರಾಜ್ ಮಾತನಾಡಿ, ನಾವೆಲ್ಲ ಒಂದೇ, ಭಾರತೀಯರು ಎಂಬ ಭಾವನೆ ಮೂಡಬೇಕು. ಅ ಕಾರಣಕ್ಕೆ ರಾಷ್ಟ್ರಗೀತೆಯನ್ನು ಹಾಡುತ್ತೇವೆ. ಈ ಗೀತೆಯನ್ನು ಜನವರಿ 14, 1950ರಲ್ಲಿ ಭಾರತ ಸರಕಾರವು ರಾಷ್ಟ್ರಗೀತೆ ಎಂದು ಘೋಷಿಸಿತು, ಇದಕ್ಕೆ ಸಂಗೀತ ಅಳವಡಿಸಿದ್ದು ರಾಮ್ ಸಿಂಗ್ ರಾಕೂರ್. ರಾಷ್ಟ್ರಗೀತೆಯನ್ನು ರಾಷ್ಟ್ರ ಧ್ವಜ ವನ್ನು ಹಾರಿಸಿದ ನಂತರ 52 ಸೆಕೆಂಡುಗಳಿಗೆ ಮೀರದಂತೆ ಹಾಡಿ ಮುಗಿಸಬೇಕು. ರಾಷ್ಟ್ರಗೀತೆ ಹಾಡುವಾಗ ಎಲ್ಲರೂ ಎದ್ದು ನಿಂತು ಭಾರತ ಮಾತೆಗೆ ವಂದಿಸಬೇಕು, ರಾಷ್ಟ್ರಗೀತೆ ಹಾಡುವುದನ್ನು ಅಡ್ಡಿಪಡಿಸಿದರೆ ನಮ್ಮ ಕಾನೂನಿನಲ್ಲಿ ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸಲ್ಪಡುತ್ತದೆ ಎಂದು ವಿವರಿಸಿದರು.
ಶಿಕ್ಷಕ ಚಾಂದ್ ಪಾಷ ರಾಷ್ಟ್ರಗೀತೆ ಹಾಡುವುದರ ನಿಯಮ, ಗೌರವ ಸಲ್ಲಿಸುವ ವಿಧಾನ ಮುಂತಾದವುಗಳ ಬಗ್ಗೆ ಮಕ್ಕಳಿಗೆ ತಿಳಿಸಿದರು. ಸಿಬ್ಬಂದಿ ವೆಂಕಟಮ್ಮ ಹಾಜರಿದ್ದರು.
- Advertisement -
- Advertisement -
- Advertisement -
- Advertisement -