ಮತದಾನ ಎಂಬುದು ಅಖಂಡ ಪ್ರಜಾ ಸಮೂಹದ ದನಿ. ಮತದಾನದ ಪ್ರಾಮುಖ್ಯತೆ ಮತ್ತು ಪ್ರಜೆಗಳ ಮೇಲಿರುವ ಹೊಣೆಯ ಕುರಿತು ಜಾಗೃತಿ ಮೂಡಿಸುವುದಕ್ಕಾಗಿಯೇ ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಗುತ್ತದೆ ಎಂದು ಹಿರಿಯ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶರಾದ ಡಿ.ಆರ್.ಮಂಜುನಾಥ್ ತಿಳಿಸಿದರು.
ನಗರದ ನ್ಯಾಯಾಲಯದ ಆವರಣದಲ್ಲಿ ಗುರುವಾರ ತಾಲ್ಲೂಕು ಕಾನೂನು ಸೇವಾ ಸಮಿತಿ ಆಯೋಜಿಸಿದ್ದ ‘ಮತದಾರರ ದಿನಾಚರಣೆ ಹಾಗೂ ಉತ್ತಮ ಗುಣಮಟ್ಟದ ಕಡ್ಡಾಯ ಹೆಲ್ಮೆಟ್ ಧರಿಸುವ ಬಗ್ಗೆ’ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರತಿ ಪ್ರಜೆಯೂ ತನ್ನನ್ನು ಆಳುವ ಪ್ರತಿನಿಧಿಯನ್ನು ಆಯ್ಕೆಮಾಡಲು ಇರುವ ವ್ಯವಸ್ಥೆಯೇ ಮತದಾನ. ಪ್ರಜಾತಂತ್ರ ದೇಶದ ಪ್ರಜೆಗಳ ಪ್ರಮುಖ ಹಕ್ಕು ಇದು. ತಮ್ಮ ಒಳಿತನ್ನು ಬಯಸುವ ಜನಪರ ನಾಯಕನನ್ನು ತಾವೇ ಆಯ್ಕೆ ಮಾಡಿ ಕಳಿಸಲು ಮತದಾನ ಎಂಬ ಪ್ರಕ್ರಿಯೆ ಬೇಕು. ದೇಶಕ್ಕೆ ಒಳಿತುಮಾಡುವ ನಾಯಕನನ್ನು ಚುನಾಯಿಸುವುದು ಪ್ರಜೆಗಳ ಜವಾಬ್ದಾರಿ ಎಂದರು.
ಭಾರತೀಯ ಮೋಟಾರು ವಾಹನ ಕಾಯ್ದೆ-1988ರ ಸೆಕ್ಷನ್ 129ರ ಪ್ರಕಾರ, ದ್ವಿಚ್ರಕ ವಾಹನಗಳ ಸವಾರರು ಕಡ್ಡಾಯವಾಗಿ ಐಎಸ್‌ಐ ಗುರುತಿನ ಹೆಲ್ಮೆಟ್ ಧರಿಸಬೇಕಾಗಿದೆ. ಅಂತೆಯೇ ಹೊಸ ನಿಯಮದ ಪ್ರಕಾರ, ಸವಾರರಷ್ಟೆ ಅಲ್ಲದೆ, ಹಿಂಬದಿ ಸವಾರರು ಕೂಡ ಹೆಲ್ಮೆಟ್ ಧರಿಸುವುದು ಕಡ್ಡಾಯವಾಗಿದೆ. ಭಾರತೀಯ ಮಾನದಂಡ ಸಂಸ್ಥೆಯ (ಐಎಸ್‌ಐ) ಗುರುತಿರುವ ಹೆಲ್ಮೆಟ್‌ಗಳನ್ನೇ ಧರಿಸಬೇಕು. ಅಲ್ಲದೆ, ಹಿಂದೆ ಕುಳಿತು ಸವಾರಿ ಮಾಡುವ ಮಕ್ಕಳು ಸಹ ಇದಕ್ಕೆ ಹೊರತಲ್ಲ ಎಂಬುದು ನಿಯಮದಲ್ಲಿ ಸ್ಪಷ್ಟವಾಗಿದೆ. ಗುಣಮಟ್ಟದ ಹೆಲ್ಮೆಟ್ ಧರಿಸುವ ಮೂಲಕ ತಮ್ಮ ಪ್ರಾಣವನ್ನೂ ರಕ್ಷಿಸಿಕೊಳ್ಳಿ ಎಂದರು.
ಸಿವಿಲ್ ನ್ಯಾಯಾಧೀಶರಾದ ಎನ್.ಎ.ಶ್ರೀಕಂಠ, ಟಿ.ಎಲ್.ಸಂದೀಶ್, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಟಿ.ವಿ.ಚಂದ್ರಶೇಖರಗೌಡ, ಪ್ರಧಾನ ಕಾರ್ಯದರ್ಶಿ ಎಂ.ಬಿ.ಲೋಕೇಶ್, ವಕೀಲರಾದ ಕೆ.ಮಂಜುನಾಥ್, ವಿ.ಎಂ.ಬೈರಾರೆಡ್ಡಿ, ಬಿ.ಎಂ.ಮಂಜುನಾಥ್, ನಾಗೇಂದ್ರಬಾಬು, ಜಿ.ಎನ್.ನಾಗರಾಜ್, ಎಸ್.ಎನ್.ಚಂದ್ರಶೇಖರ್ ಹಾಜರಿದ್ದರು.
- Advertisement -
- Advertisement -
- Advertisement -
- Advertisement -