ಪ್ರತಿಯೊಬ್ಬ ರೈತರೂ ಆಧುನಿಕ ಯಂತ್ರೋಪಕರಣಗಳನ್ನು ಬಳಸಿಕೊಂಡು ಕಡಿಮೆ ಖರ್ಚಿನಲ್ಲಿ ಕೃಷಿಯನ್ನು ಮಾಡುವ ಮೂಲಕ ಹೆಚ್ಚು ಉತ್ಪಾದನೆ ಮಾಡುವಂತಾಗಬೇಕು ಎಂಬುದು ನಮ್ಮ ಉದ್ದೇಶವಾಗಿದೆ ಎಂದು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆ ಕೃಷಿ ಯಂತ್ರಧಾರೆ ಪ್ರಭಂದಕ ಬೋರಣ್ಣ ತಿಳಿಸಿದರು.
ಜಂಗಮಕೋಟೆಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಹೋಬಳಿಯ ಹೊಸಪೇಟೆಯಲ್ಲಿ ಕರ್ನಾಟಕ ಸರ್ಕಾರದ ಕೃಷಿ ಇಲಾಖೆ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆ ಸಹಭಾಗಿತ್ವದಲ್ಲಿ ಕಳೆದ 5 ವರ್ಷಗಳಿಂದ ನಿರಂತರವಾಗಿ ರೈತರ ಕೃಷಿ ಚಟುವಟಿಕೆಗಳಾದ ಉಳುಮೆ, ಬಿತ್ತನೆ, ಕಟಾವು, ಔಷಧಿ ಸಿಂಪರಣೆ ಹಾಗೂ ಇನ್ನಿತರ ಕೃಷಿ ಕಾರ್ಯಗಳಿಗೆ ಕಡಿಮೆ ಬಾಡಿಗೆ ದರದಲ್ಲಿ ಆಧುನಿಕ ಕೃಷಿ ಯಂತ್ರೋಪಕರಣಗಳನ್ನು ರೈತರಿಗೆ ಒದಗಿಸುತ್ತಿದ್ದೇವೆ. ಇದರಿಂದ ರೈತರಿಗೆ ಸಾಕಷ್ಟು ಉಪಯೋಗವಾಗಿದೆ ಎಂದರು.
ಪ್ರಸ್ತುತ ಮುಂಗಾರಿನ ಹಂಗಾಮಿನಲ್ಲಿ ಮಿನಿ ಟ್ರಾಕ್ಟರ್, ಟಿಲ್ಲರ್, ಟ್ರಾಕ್ಟರ್, ಕಲ್ಟಿವೇಟರ್, ಬಿತ್ತನೆ ಕೂರಿಗೆ ಯಂತ್ರ, ಲೆವೆಲರ್, ಹಲುಬೆ, ಡಿಸ್ಕ್, ರೋಟವೇಟರ್, ಡಿಗ್ಗರ್ ಯಂತ್ರಗಳು ಮತ್ತು ಕಟಾವು ಹಾಗೂ ಒಕ್ಕಣೆ ಸಂದರ್ಭದಲ್ಲಿ ಹಾರ್ವೇಸ್ಟರ್ ರೀಪರ್, ರೀಪರ್ ಕಂಬೈಂಡರ್, ಹುಲ್ಲು ಸಹಿತ ಒಕ್ಕಣೆ ಯಂತ್ರ ಹಾಗೂ ಮಲ್ಟಿಕ್ರಾಪ್ ತ್ರೆಶರ್ ಯಂತ್ರಗಳು ಬಾಡಿಗೆಗೆ ಲಭ್ಯವಿದೆ. ಸದಾಸೇವೆಯಲ್ಲಿ ನಿಮ್ಮ ಕೃಷಿ ಯಂತ್ರಧಾರೆಯಿದೆ. ಸದುಪಯೋಗಪಡಿಸಿಕೊಳ್ಳಿ ಎಂದು ರೈತರಲ್ಲಿ ಮನವಿ ಮಾಡಿದರು.
ಲಾಕ್ ಡೌನ್ ಸಮಯದಲ್ಲಿ ಕಾರ್ಯನಿರ್ವಹಿಸಿದ ಕೃಷಿ ಯಂತ್ರಧಾರೆ:
ಕೋವಿಡ್-19 ಪರಿಣಾಮದಿಂದ ಭಾರತ ಸರ್ಕಾರ ಮಾರ್ಚ್ 23 ರಂದು ಇಡೀ ದೇಶವನ್ನು ಲಾಕ್‌ಡೌನ್ ಮಾಡಿ ಆದೇಶಿಸಿತ್ತು. ರೈತರಿಗೆ ಸೇವೆ ನೀಡುವ ಉದ್ದೇಶದಿಂದ ಸರ್ಕಾರದಿಂದ ಅನುಮತಿ ಪಡೆದುಕೊಂಡು ದಿನಾಂಕ ಏಪ್ರಿಲ್ I ರಿಂದ ಸೇವೆಯನ್ನು ಆರಂಭಿಸಿ 530 ರೈತರಿಗೆ 1400 ಗಂಟೆಗಳ ಕೆಲಸವನ್ನು ನಿರ್ವಹಿಸಿ ರೈತರಿಗೆ ಅನುಕೂಲ ಮಾಡಿಕೊಟ್ಟಿದೆ.
ಸಂಪರ್ಕ : ಕೃಷಿ ಯಂತ್ರಧಾರೆ ಪ್ರಭಂದಕರಾದ ಬೋರಣ್ಣ (ದೂರವಾಣಿ ಸಂಖ್ಯೆ-7795648421)