ಗ್ರಾಮಾಂತರ ಪ್ರದೇಶಗಳಲ್ಲಿನ ರೈತರು ಕಷ್ಟಪಟ್ಟು ಬೆಳೆದು ಮಾರಾಟಕ್ಕಾಗಿ ಬೆಂಗಳೂರಿನ ಕೆ.ಆರ್.ಮಾರುಕಟ್ಟೆಗೆ ತೆಗೆದುಕೊಂಡು ಹೋದರೆ ಅಲ್ಲಿ ಹಫ್ತಾ ವಸೂಲಿ ಮಾಡಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಭಕ್ತರಹಳ್ಳಿ ಭೈರೇಗೌಡ ಆರೋಪಿಸಿದರು.
ನಗರದ ಕೆ.ಎಸ್.ಆರ್.ಟಿ.ಸಿ.ಬಸ್ ನಿಲ್ದಾಣ ಸಮೀಪದಿಂದ ಬೆಂಗಳೂರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಚೇರಿಗೆ ಮುತ್ತಿಗೆ ಹಾಕುವ ಕಾರ್ಯಕ್ರಮಕ್ಕೆ ಸೋಮವಾರ ತೆರಳುವ ಮುನ್ನ ಅವರು ಮಾತನಾಡಿದರು.
ನಾವು 1,500 ಅಡಿಗಳಿಂದ ನೀರು ತೆಗೆದು ಬಹಳಷ್ಟು ಕಷ್ಟಪಟ್ಟು ತರಕಾರಿಯಂತಹ ಬೆಳೆಗಳನ್ನು ಬೆಳೆದು, ಮಹಾನಗರದ ಜನತೆ ಸೇರಿದಂತೆ ರಾಜ್ಯದ ಜನತೆಯ ಹಸಿವು ನೀಗಿಸುತ್ತಿದ್ದೇವೆ. ಯಾವುದೇ ಸರ್ಕಾರಗಳು ಬಂದರೂ ನಮ್ಮ ಸಮಸ್ಯೆಗಳಿಗೆ ಶಾಶ್ವತವಾದ ಪರಿಹಾರವನ್ನು ಒದಗಿಸಲು ಸಾಧ್ಯವಾಗಿಲ್ಲ, ನಾವು ಬೆಳೆದ ಬೆಳೆಗಳಿಗೆ ವೈಜ್ಞಾನಿಕವಾದ ಬೆಲೆಗಳನ್ನು ನಿಗದಿ ಪಡಿಸಲು ಸಾಧ್ಯವಾಗಿಲ್ಲ, ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿಯೂ ಕೂಡಾ ನಾವು ಕಷ್ಟಪಟ್ಟು ಬೆಳೆದಂತಹ ಬೆಳೆಯನ್ನು ಮಾರುಕಟ್ಟೆಗೆ ತಂದರೆ ನಮ್ಮಿಂದ ತೆರಿಗೆಯ ನೆಪದಲ್ಲಿ ಹಫ್ತಾ ವಸೂಲಿ ಮಾಡುವ ಕೆಲಸ ನಡೆಯುತ್ತಿದೆ.
ಹಫ್ತಾ ನೀಡಲು ನಿರಾಕರಿಸಿದ ರೈತರ ಮೇಲೆ ಗೂಂಡಾಗಳಂತೆ ವರ್ತಿಸುತ್ತಿರುವ ಕೆಲವು ಕಿಡಿಗೇಡಿಗಳು, ರೈತರಲ್ಲಿ ಭಯದ ವಾತಾವರಣ ನಿರ್ಮಾಣ ಮಾಡುತ್ತಿದ್ದಾರೆ.
ಮಾರುಕಟ್ಟೆಯ ಬಳಿ ರೈತರಿಗೆ ಮೀಸಲಾಗಿದ್ದ ಶೆಡ್ ಗಳನ್ನು ಕೋಟ್ಯಾಂತರ ರೂಪಾಯಿಗಳ ಲಾಭಕ್ಕಾಗಿ ಹರಾಜು ಮಾಡಿಕೊಳ್ಳುತ್ತಿದ್ದಾರೆ. ಇಷ್ಟೆಲ್ಲಾ ನಡೆಯುತ್ತಿದ್ದರೂ ಅಲ್ಲಿನ ಬಿ.ಬಿ.ಎಂ.ಪಿ ಮಾತ್ರ ಕಣ್ಣು ಮುಚ್ಚಿ ಕುಳಿತಿದೆ. ಆದ್ದರಿಂದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರೈತರು ಬಿ.ಬಿ.ಎಂ.ಪಿ.ಕಚೇರಿಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸುತ್ತೇವೆ.
ಸರ್ಕಾರ, ಮಾರುಕಟ್ಟೆಗೆ ಹೋಗುವಂತಹ ರೈತರಿಗೆ ಸೂಕ್ತ ಭದ್ರತೆ ನೀಡಬೇಕು, ತೆರಿಗೆ ರೂಪದಲ್ಲಿ ವಸೂಲಿ ಮಾಡುತ್ತಿರುವ ಹಫ್ತಾ ವಸೂಲಿ ನಿಲ್ಲಿಸಬೇಕು. ರೈತರು ಬೆಳೆಯುವ ಬೆಳೆಗಳಿಗೆ ವೈಜ್ಞಾನಿಕವಾದ ಬೆಲೆ ನಿಗದಿ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಟಾಟಾ ಏಸ್, ಸುಮೋಗಳಲ್ಲಿ ರೈತರು ಬೆಂಗಳೂರಿಗೆ ಪ್ರಯಾಣ ಬೆಳೆಸಿದರು.
ರೈತ ಸಂಘದ ಮುಖಂಡರಾದ ಮುನಿನಂಜಪ್ಪ, ಚಂದ್ರಶೇಖರ ಸೇರಿದಂತೆ ನೂರಾರು ಮಂದಿ ರೈತರು ಇದ್ದರು.
- Advertisement -
- Advertisement -
- Advertisement -