ಶಿಡ್ಲಘಟ್ಟ ತಾಲ್ಲೂಕಿನವರೇ ಆದ ಸೋಲಿಲ್ಲದ ಸರದಾರ ಎಂದೇ ಹೆಸರಾಗಿರುವ ಕೆ.ಎಚ್.ಮುನಿಯಪ್ಪ ವಿರುದ್ದ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ಮುನಿಸ್ವಾಮಿ ಸುಮಾರು ೨,೦೯,೭೦೪ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದು ತಿಳಿದೊಡನೆಯೇ ಬಿಜೆಪಿ ಪಕ್ಷದ ಕಾರ್ಯಕರ್ತರಲ್ಲದೆ ವಿವಿಧ ವರ್ಗದ ಜನರೂ ಸಹ ಸಂಭ್ರಮ ಆಚರಣೆ ನಡೆಸಿದರು.
ಬಿಜೆಪಿ ಕಾರ್ಯಕರ್ತರು ಕೋಟೆ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ, ಬೈಕ್ ನಲ್ಲಿ “ಮೋದಿ, ಮೋದಿ” ಎಂದು ಘೋಷಣೆ ಕೂಗುತ್ತಾ ಪ್ರಮುಖ ರಸ್ತೆಯಲ್ಲಿ ಸಾಗಿದರು. ಆಟೋ ಚಾಲಕರು ರೈಲ್ವೆ ನಿಲ್ದಾಣದ ಬಳಿ ಪಟಾಕಿ ಸಿಡಿಸಿ ಸಂಭ್ರಮಿಸಿದರೆ, ವಿಜಯಲಕ್ಷ್ಮಿ ವೃತ್ತ ಹಾಗೂ ಉಲ್ಲೂರುಪೇಟೆಯಲ್ಲಿ ಕೆಲವಾರು ಯುವಕರು ಸ್ವಯಂಪ್ರೇರಿತರಾಗಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ತಾಲ್ಲೂಕಿನ ಕಂಬದಹಳ್ಳಿಯವರಾದ ಕೆ.ಎಚ್.ಮುನಿಯಪ್ಪ ಅವರನ್ನು ಏಳು ಬಾರಿ ಸಂಸದರಾಗಲು ಬೆಂಬಲಿಸಿದ್ದ ಶಿಡ್ಲಘಟ್ಟ ಕ್ಷೇತ್ರದ ಜನರು ಈ ಬಾರಿ ಮುಖ ಪರಿಚಯವೂ ಇಲ್ಲದ ಬಿಜೆಪಿ ಅಭ್ಯರ್ಥಿ ಮುನಿಸ್ವಾಮಿ ಅವರಿಗೆ ಹೆಚ್ಚಿನ ಮತ ನೀಡಿದ್ದಾರೆ. ಕೆ.ಎಚ್.ಮುನಿಯಪ್ಪ ಅವರ ಮೇಲಿನ ಕೋಪ ಅಥವಾ ವಿರೋಧಿ ಅಲೆಯು ಈ ಫಲಿತಾಂಶಕ್ಕೆ ಕಾರಣವಾಗಿದೆ ಎಂಬುದಾಗಿ ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಬಿಜೆಪಿ ಪಕ್ಷದ ಗೆಲುವಿಗಿನ ಜೊತೆಗೆ ಜನರು ಕೆ.ಎಚ್.ಸೋಲಿಗೂ ಸಂಭ್ರಮ ಆಚರಿಸಿದ್ದು ಕಂಡುಬಂದಿತು.
ಶಿಡ್ಲಘಟ್ಟ ಕ್ಷೇತ್ರದಲ್ಲಿ ಬಿಜೆಪಿ ಮುನ್ನಡೆಗೆ ಹಲವು ಕಾರಣಗಳು
ಸಾಮಾನ್ಯವಾಗಿ ಶಿಡ್ಲಘಟ್ಟ ಕ್ಷೇತ್ರದ ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳು ಠೇವಣಿ ಕಳೆದುಕೊಳ್ಳುತ್ತಿದ್ದರು. ಆದರೆ, ವಿಸ್ಮಯವೆಂಬಂತೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮುಖ ಪರಿಚಯವೇ ಇಲ್ಲದಿದ್ದರೂ ಬಿಜೆಪಿ ಅಭ್ಯರ್ಥಿ ಮುನಿಸ್ವಾಮಿ ಅವರಿಗೆ ಕಾಂಗ್ರೆಸ್ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಅವರಿಗಿಂತ ೧೭,೩೦೮ ಮತಗಳು ಹೆಚ್ಚು ನೀಡಿದ್ದಾರೆ.
ಕಾಂಗ್ರೆಸ್ ಅಥವಾ ಜೆ.ಡಿ.ಎಸ್ ಪಕ್ಷಕ್ಕೆ ಮಾತ್ರ ತಮ್ಮ ಒಲವನ್ನು ಪ್ರದರ್ಶಿಸುತ್ತಾ ಬಂದಿದ್ದ ಶಿಡ್ಲಘಟ್ಟ ಕ್ಷೇತ್ರದ ಮತದಾರರು, ಕೆ.ಎಚ್.ಮುನಿಯಪ್ಪ ಜೆ.ಡಿ.ಎಸ್ ಮತ್ತು ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯಾಗಿದ್ದರೂ ಎರಡೂ ಪಕ್ಷಗಳ ಬೆಂಬಲಿಗರು ಈ ಬಾರಿ ಬಿಜೆಪಿ ಬೆಂಬಲಿಸಿರುವುದು ಇದರಿಂದ ಸ್ಪಷ್ಟವಾಗಿದೆ.
ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಶಿಡ್ಲಘಟ್ಟ ಕ್ಷೇತ್ರದ ಒಟ್ಟು ಮತಗಳ ಸಂಖ್ಯೆ ೧,೫೬,೨೩೦. ಕಳೆದ ಏಳು ಬಾರಿ ಸತತವಾಗಿ ಸಂಸದರಾಗಿದ್ದ ಶಿಡ್ಲಘಟ್ಟ ತಾಲ್ಲೂಕಿನವರೇ ಆದ ಕಾಂಗ್ರೆಸ್ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಅವರಿಗೆ ೬೫,೬೧೯ ಮತಗಳು ಬಿದ್ದರೆ, ಬಿಜೆಪಿ ಅಭ್ಯರ್ಥಿ ಮುನಿಸ್ವಾಮಿ ಅವರಿಗೆ ೮೨,೯೨೭ ಮತಗಳು ಬಿದ್ದಿವೆ.
ಬಿಜೆಪಿ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಹಾಗೂ ಶಿಡ್ಲಘಟ್ಟ ಕ್ಷೇತ್ರದಲ್ಲಿ ಹೆಚ್ಚು ಮತಗಳು ಬೆಜೆಪಿ ಬೀಳಲು ಹಲವು ಕಾರಣಗಳನ್ನು ವಿಶ್ಲೇಷಕರು ಹೇಳುತ್ತಾರೆ.
ಸೇಡು ತೀರಿಸಿಕೊಂಡ ಶಾಸಕ ವಿ.ಮುನಿಯಪ್ಪ
“ಲೋಕಸಭಾ ಚುನಾವಣೆಯಲ್ಲಿ ನನ್ನ ಬೆಂಬಲ ಕಾಂಗ್ರೆಸ್ ಗೆ, ಕೆ.ಎಚ್.ಮುನಿಯಪ್ಪಗೆ ಅಲ್ಲ” ಎಂದು ಲೋಕಸಭೆ ಚುನಾವಣೆಯ ಮುಂಚೆಯೇ ಅಡ್ಡಗೋಡೆಯ ಮೇಲೆ ದೀಪವಿರಿಸಿದಂತೆ ಮಾತನಾಡಿದ್ದ ಶಿಡ್ಲಘಟ್ಟ ಶಾಸಕ ವಿ.ಮುನಿಯಪ್ಪ ಮತ್ತು ಏಳು ಬಾರಿ ಸಂಸದರಾಗಿದ್ದ ಕೆ.ಎಚ್.ಮುನಿಯಪ್ಪ ಅವರ ನಡುವಿನ ವೈಮನಸ್ಯ ಬಹಿರಂಗ ಸತ್ಯವಾಗಿತ್ತು. ಕೆ.ಎಚ್.ಮುನಿಯಪ್ಪ ಅವರಿಗೆ ಕಾಂಗ್ರೆಸ್ ಪಕ್ಷದಿಂದ ಟಿಕೇಟು ಕೊಡದಂತೆ ದೆಹಲಿಗೆ ಹೋಗಿದ್ದ ಕೋಲಾರ ಕ್ಷೇತ್ರದ ಶಾಸಕರು ಹಾಗೂ ಹಿರಿಯ ಮುಖಂಡರೊಂದಿಗೆ ಶಾಸಕ ವಿ.ಮುನಿಯಪ್ಪ ಸಹ ಇದ್ದರು.
“ಕೆ.ಎಚ್.ಮುನಿಯಪ್ಪ ಸಂಸದರಾದ ನಂತರ ಸಂಸದರ ನಿಧಿಯಿಂದ ಕ್ಷೇತ್ರಕ್ಕೆ ಏನೆಲ್ಲಾ ಕೊಡುಗೆ ನೀಡಿದ್ದಾರೆ ಎಂಬುದು ಶಾಸಕನಾದ ನನಗೆ ಗೊತ್ತಿಲ್ಲ. ಇನ್ನು ಕ್ಷೇತ್ರದ ಜನರಿಗೇನು ಗೊತ್ತಿರುತ್ತದೆ. ಸಂಸದರ ನಿಧಿಯನ್ನು ಕೇವಲ ಅವರ ಹಿಂಬಾಲಕರಿಗೆ ಮಾತ್ರ ನೀಡುವ ಮೂಲಕ ಸ್ಥಳೀಯ ಶಾಸಕರನ್ನು ಮೂಲೆ ಗುಂಪು ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ” ಎಂದು ಚುನಾವಣೆಗೆ ಮುನ್ನವೇ ಶಾಸಕ ವಿ.ಮುನಿಯಪ್ಪ ಆರೋಪಿಸಿದ್ದರು.
“ಬಿಜೆಪಿ ಅಭ್ಯರ್ಥಿ ಮುನಿಸ್ವಾಮಿ ಅವರು ಶಾಸಕ ವಿ.ಮುನಿಯಪ್ಪ ಅವರ ಮಗ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಶಿಧರ್ ಅವರೊಂದಿಗೆ ಸಂಪರ್ಕದಲ್ಲಿದ್ದಾರೆ. ಈ ಬಾರಿ ಅವರು ನಮ್ಮ ಪಕ್ಷಕ್ಕೆ ಬೆಂಬಲಿಸಲಿದ್ದಾರೆ” ಎಂದು ಬಿಜೆಪಿ ಕಾರ್ಯಕರ್ತರು ಚುನಾವಣೆಗೆ ಮುನ್ನವೇ ಮಾತನಾಡಿಕೊಂಡರು. ಅದರಂತೆಯೇ ಶಾಸಕ ವಿ.ಮುನಿಯಪ್ಪ ಅವರ ಬೆಂಬಲಿಗರು ಬಿಜೆಪಿ ಗೆ ಮತ ಹಾಕುವಂತೆ ಕಾಂಗ್ರೆಸಿಗರಿಗೆ ಹೇಳುತ್ತಿದ್ದುದೂ ಬಹಿರಂಗವಾಯಿತು. ಬಿಜೆಪಿ ಹೆಚ್ಚು ಮತ ಗಳಿಸಲು ಇದು ಪ್ರಮುಖ ಕಾರಣವೆನ್ನುತ್ತಾರೆ ವಿಶ್ಲೇಷಕರು.
ಕ್ಷೇತ್ರ ಅಭಿವೃದ್ಧಿ ಮಾಡಿಲ್ಲ ಎಂಬ ಕೋಪ
ನೀರಿನ ಸಮಸ್ಯೆ ಶಿಡ್ಲಘಟ್ಟ ಕ್ಷೇತ್ರವನ್ನು ಸಾಕಷ್ಟು ಕಾಡುತ್ತಿದೆ. ಯಾವುದೇ ಕೈಗಾರಿಕೆಯಾಗಲೀ, ಶಿಕ್ಷಣ ಸಂಸ್ಥೆಗಳಾಗಲೀ, ಆರ್ಥಿಕ ಬೆಳವಣಿಗೆಗೆ ಸಹಾಯಕವಾದ ಯೋಜನೆಗಳನ್ನು ರೂಪಿಸಿಲ್ಲ. ಏಳು ಬಾರಿ ಸಂಸದರಾದರೂ ಕೋಲಾರ ಕ್ಷೇತ್ರ ಅದೇ ಸಮಸ್ಯೆಗಳಿಂದ ನಲುಗುತ್ತಿದೆ. ಪ್ರತಿ ಬಾರಿಯೂ ನೀರು ತರುತ್ತೇನೆ ಎಂದೇ ಹೇಳುತ್ತಾರೆ ಎಂಬ ಆರೋಪ ಜನರದ್ದು. ರೈಲಿನ ಕಾಮಗಾರಿಯಲ್ಲಿ ಪ್ರತಿಯೊಂದು ಅಂಡರ್ ಪಾಸ್ ಕೂಡ ಕಳಪೆಯಿಂದ ಕೂಡಿದ್ದು ಸಾಕಷ್ಟು ಅವ್ಯವಹಾರದ ಆರೋಪವಿದೆ. ಜಮೀನಿನ ಹಗರಣವನ್ನು ಚುನಾವಣೆಯ ಸಂದರ್ಭದಲ್ಲಿ ಬೆಳಕಿಗೆ ತಂದಿದ್ದು, ಜನರಿಗೆ ಅವರ ಸ್ವಾರ್ಥ ರಾಜಕಾರಣದ ಬಗ್ಗೆ ಸಿಟ್ಟು ಬರಿಸಿತ್ತು.
ಪ್ರಯೋಜನವಾಗದ ಜೆಡಿಎಸ್ ಮೈತ್ರಿ
ಶಾಸಕ ವಿ.ಮುನಿಯಪ್ಪ ಅವರಿಂದ ಬೆಂಬಲ ಸಿಗುವುದಿಲ್ಲ ಎಂದು ತಿಳಿದೊಡನೆ ಜೆಡಿಎಸ್ ಮುಖಂಡ ಮೇಲೂರು ಬಿ.ಎನ್.ರವಿಕುಮಾರರ ಬೆಂಬಲ ಕೋರಿದ್ದರು ಕೆ.ಎಚ್.ಮುನಿಯಪ್ಪ. ರಾಜ್ಯ ಸರ್ಕಾರದ ಹಾಗೂ ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್.ಡಿ.ದೇವೇಗೌಡ ಅವರ ಸೂಚನೆಯ ಮೇರೆಗೆ ಜೆಡಿಎಸ್ ಮುಖಂಡ ಮೇಲೂರು ಬಿ.ಎನ್.ರವಿಕುಮಾರ್ ಹಲವಾರು ಪ್ರಚಾರ ಸಭೆ ನಡೆಸಿದರು. ಆದರೆ, ಈ ಬಗ್ಗೆ ಜೆಡಿಎಸ್ ಪಕ್ಷದವರಿಂದಲೇ ಅದಕ್ಕೆ ವಿರೋಧ ವ್ಯಕ್ತವಾಗಿತ್ತು. ಚುನಾವಣೆ ಫಲಿತಾಂಶ ನೋಡಿದಾಗ ಜೆಡಿಎಸ್ ಕಾರ್ಯಕರ್ತರು ಮೈತ್ರಿ ನೀತಿಗೆ ತಿಲಾಂಜಲಿಯಿಟ್ಟಿರುವುದು ಕಂಡುಬರುತ್ತಿದೆ.
ಪುಲ್ವಾಮ ದಾಳಿ
ನೀರಿನಲ್ಲಿ ಬಿದ್ದ ಕಲ್ಲು ತನ್ನ ಕಂಪನವನ್ನು ಸುತ್ತಲೂ ಮೂಡಿಸುವಂತೆ ಪುಲ್ವಾಮದಲ್ಲಿ 40 ಮಂದಿ ಯೋಧರು ಹುತಾತ್ಮರಾದ ಬಳಿಕ ಪಾಕಿಸ್ತಾನದ ಮೇಲೆ ಭಾರತೀಯ ಸೇನೆ ಸೇಡು ತೀರಿಸಿಕೊಂಡ ರೀತಿ ಮೋದಿಯವರ ಬಗ್ಗೆ ಅದುವರೆಗೂ ಇದ್ದ ಭಾವನೆಯನ್ನೇ ಬದಲಿಸಿತು. ಪ್ರತಿಯೊಂದು ಹಳ್ಳಿಗಳಲ್ಲೂ ಮೋದಿಯ ಅಲೆ ಮೂಡಿಬಿಟ್ಟಿತು. ಅದನ್ನು ತಡೆಯಲು ಯಾರ ಕೈಲೂ ಆಗದೇ ಹೋಯಿತು. ಇಲ್ಲಿ ಯಾವ ಪಕ್ಷವೇ ಇರಲಿ ಕೇಂದ್ರದಲ್ಲಿ ಮೋದಿಯೇ ಬರಲಿ ಎಂದು ಎಲ್ಲಾ ವರ್ಗದ ಜನರ ಮನದಲ್ಲೂ ಹುಟ್ಟಿದ ಅಲೆ ಬಿಜೆಪಿ ಅಭ್ಯರ್ಥಿಗೆ ವರವಾಯಿತು.
ಪರ – ವಿರೋಧ ಪ್ರಚಾರ
ಕಾಂಗ್ರೆಸ್ ಪಕ್ಷದ ಒಳ ಜಗಳದ ಪರಿಣಾಮವಾಗಿ ವಿ.ಮುನಿಯಪ್ಪ ಬೆಂಬಲಿಗರು ಶಿಡ್ಲಘಟ್ಟ ಕ್ಷೇತ್ರದಲ್ಲಿ ಕೆ.ಎಚ್.ಮುನಿಯಪ್ಪ ಅವರ ವಿರುದ್ಧವಾಗಿ ಪ್ರಚಾರ ನಡೆಸಿದರೆ, ಜೆಡಿಎಸ್ ಕಾರ್ಯಕರ್ತರು ಮೋದಿಗೆ ಮತ ಹಾಕಲು ಪ್ರಚಾರ ನಡೆಸಿದ್ದು ಬಿಜೆಪಿ ಅಭ್ಯರ್ಥಿ ಮುನಿಸ್ವಾಮಿ ಮುಖ ಪರಿಚಯವಿಲ್ಲದಿದ್ದರೂ ಹೆಚ್ಚು ಮತಗಳನ್ನು ಪಡೆಯುವಲ್ಲಿ ಕಾರಣವಾಯಿತು.
ಒಟ್ಟಾರೆ, ಶಿಡ್ಲಘಟ್ಟ ಕ್ಷೇತ್ರದಲ್ಲಿ ಸ್ಥಳೀಯ ಕಾಂಗ್ರೆಸ್ ಶಾಸಕ ವಿ.ಮುನಿಯಪ್ಪ ಅವರೊಂದಿಗಿನ ವೈಮನಸ್ಯ, ಜಮೀನಿನ ಹಗರಣ, ಅಭಿವೃದ್ಧಿ ಮಾಡದೆ, ನೀರಿನ ಯೋಜನೆ ರೂಪಿಸದೇ ಅಧಿಕಾರ ಅನುಭವಿಸಿದ್ದು ಹಾಗೂ ಮೋದಿ ಅಲೆಯು ಕೆ.ಎಚ್.ಮುನಿಯಪ್ಪ ಅವರ ಹಿನ್ನಡೆಗೆ ಕಾರಣವೆನ್ನಲಾಗುತ್ತಿದೆ.







