ಜೆಡಿಎಸ್ ಪಕ್ಷದ ವತಿಯಿಂದ ಫೆಬ್ರುವರಿ ೧೭ ರ ಶನಿವಾರ ಬೆಂಗಳೂರಿನ ಹೊರವಲಯದಲ್ಲಿ ಹಮ್ಮಿಕೊಂಡಿರುವ ರಾಜ್ಯಮಟ್ಟದ ವಿಕಾಸಪರ್ವ ಬೃಹತ್ ಸಮಾವೇಶದಲ್ಲಿ ಪಾಲ್ಗೊಳ್ಳಲು ತಾಲ್ಲೂಕಿನಿಂದ ಸುಮಾರು ೧೫೦ ಬಸ್ಸುಗಳಲ್ಲಿ ಕಾರ್ಯಕರ್ತರೊಂದಿಗೆ ತೆರಳುವುದಾಗಿ ಎಚ್.ಡಿ.ದೇವೇಗೌಡ ಹಾಗೂ ಜಯಪ್ರಕಾಶ್ ನಾರಾಯಣ್ ಸೇವಾಭಿವೃದ್ಧಿ ಟ್ರಸ್ಟ್‌ನ ಅಧ್ಯಕ್ಷ ಹಾಗೂ ಜೆಡಿಎಸ್ ಮುಖಂಡ ಬಿ.ಎನ್.ರವಿಕುಮಾರ್ ತಿಳಿಸಿದರು.
ನಗರದ ಬಸ್ ನಿಲ್ದಾಣದ ಬಳಿಯಿರುವ ಅಂಜನಾದ್ರಿ ಪಾರ್ಟಿ ಹಾಲ್ ನಲ್ಲಿ ಶುಕ್ರವಾರ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಸಭೆ ನಡೆಸಿ ಅವರು ಮಾತನಾಡಿದರು.
ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರೂ ಆದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ನಿರ್ದೇಶನದ ಪ್ರಕಾರ ಕ್ಷೇತ್ರದಿಂದ ಸುಮಾರು ೧೫೦ ಬಸ್‌ಗಳ ಮೂಲಕ ಕಾರ್ಯಕರ್ತರನ್ನು ಸಮಾವೇಶಕ್ಕೆ ಕರೆದೊಯ್ಯಲಾಗುವುದು ಎಂದರು.
ಕ್ಷೇತ್ರದಾದ್ಯಂತ ಇರುವ ಎಲ್ಲಾ ಗ್ರಾಮ ಪಂಚಾಯಿತಿಗಳಿಗೂ ಬಸ್‌ಗಳನ್ನು ಕಳುಹಿಸಿಕೊಡಲಿದ್ದು ಅಲ್ಲಿನ ಸ್ಥಳೀಯ ಮುಖಂಡರು ಸ್ಥಳೀಯ ಕಾರ್ಯಕರ್ತರನ್ನು ತಾಲ್ಲೂಕಿನ ತಾದೂರು ಗ್ರಾಮದ ಬಳಿ ಗುರುತಿಸಿರುವ ಜಾಗಕ್ಕೆ ಕರೆತಂದು ಉಪಹಾರ ಸೇವಿಸಿ ಒಟ್ಟಾಗಿ ಅಲ್ಲಿಂದ ೧೨ ಗಂಟೆಯೊಳಗೆ ಬೆಂಗಳೂರಿನಲ್ಲಿ ನಡೆಯಲಿರುವ ಸಮಾವೇಶದಲ್ಲಿ ಪಾಲ್ಗೊಳ್ಳಲು ಹೊರಡಿಸಲಾಗುವುದು ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯ ಬಂಕ್ ಮುನಿಯಪ್ಪ ಮಾತನಾಡಿ, ತಾಲ್ಲೂಕಿನಲ್ಲಿ ಜಾತ್ಯಾತೀತ ಜನತಾದಳದ ಪರ ಜನಬೆಂಬಲವಿದೆ. ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರ ನಾಯಕತ್ವದ ಬಗ್ಗೆ ಅಚಲವಾದ ನಂಬಿಕೆಯಿದೆ. ರೈತರ ಉಳಿವಿಗಾಗಿ ಸಾಲ ಮನ್ನಾ ಮತ್ತು ಶಾಶ್ವತ ನೀರು ಯೋಜನೆ ಮಾಡುವ ಇಚ್ಛಾಶಕ್ತಿಯನ್ನು ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮಾತ್ರ ಇರುವುದರಿಂದ ಅವರು ರಾಜ್ಯದ ಜನರಿಗೆ ಭರವಸೆಯಾಗಿದ್ದಾರೆ. ಕುಮಾರಣ್ಣನವರನ್ನು ಮುಂದಿನ ಮುಖ್ಯಮಂತ್ರಿ ಮಾಡುವ ಉದ್ದೇಶದಿಂದ ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕು ಎಂದರು.
ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಪಿ.ವಿ.ನಾಗರಾಜ್, ಪಿ.ಶಿವಾರೆಡ್ಡಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಲಕ್ಮಿನಾರಾಯಣರೆಡ್ಡಿ, ಉಪಾಧ್ಯಕ್ಷ ಎಚ್.ನರಸಿಂಹಯ್ಯ, ಮುಖಂಡರಾದ ಗೊರಮಡುಗು ರಾಮಾಂಜಿನಪ್ಪ, ದೊಣ್ಣಹಳ್ಳಿ ರಾಮಣ್ಣ, ಕೇಶವಮೂರ್ತಿ, ಕದಿರಿಯೂಸುಫ್, ಬಾಂಬ್ ಶಮಿ, ಸೈಯ್ಯದ್, ಆದಿಲ್‌ಪಾಷ, ಗೋಪಾಲಪ್ಪ, ಅಮ್ಜದ್, ನಗರಸಭೆಯ ಸದಸ್ಯರಾದ ಲಕ್ಷ್ಮಣ್, ವೆಂಕಟಸ್ವಾಮಿ, ನಂದಕಿಶನ್, ಮಡಿವಾಳ ಸಂಘದ ರಾಜಣ್ಣ, ಹೈದರಾಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -