ಯಾವುದೇ ಮಕ್ಕಳು ದೈಹಿಕವಾಗಿ, ಮಾನಸಿಕವಾಗಿ ಅಂಗವೈಕಲ್ಯವನ್ನು ಹೊಂದಿದ್ದಾರೆ ಎಂಬ ಒಂದೇ ಕಾರಣಕ್ಕೆ ಶಿಕ್ಷಣದಿಂದ ವಂಚಿತರನ್ನಾಗಿಸುವುದು ಸರಿಯಲ್ಲ. ಬದಲಿಗೆ ಪೋಷಕರ ಮನವೊಲಿಸಿ ಅಂತಹ ಮಕ್ಕಳಿಗೆ ವಿಶೇಷ ಪ್ರಾಧಾನ್ಯತೆ ನೀಡಿ ಶಿಕ್ಷಣ ನೀಡುವ ನಿಟ್ಟಿನಲ್ಲಿ ಪ್ರತಿಯೊಬ್ಬ ಶಿಕ್ಷಕರೂ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರಘುನಾಥರೆಡ್ಡಿ ಹೇಳಿದರು.
ನಗರದ ಉಲ್ಲೂರುಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಶುಕ್ರವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ತಾಲ್ಲೂಕು ಯೋಜನಾ ಸಮನ್ವಯಾಧಿಕಾರಿಗಳ ಕಚೇರಿ ಮತ್ತು ಸರ್ವ ಶಿಕ್ಷಣ ಅಭಿಯಾನ ಇವರ ಸಂಯುಕ್ತಾಶ್ರಯದಲ್ಲಿ ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಏರ್ಪಡಿಸಲಾಗಿದ್ದ ವೈದ್ಯಕೀಯ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಯಾವ ಮಕ್ಕಳು ಇತರೆ ಮಕ್ಕಳಂತೆ ಸಹಜವಾಗಿ ಕಲಿಯಲು ತೊಂದರೆ ಅನುಭವಿಸುತ್ತಾರೋ ಅಂತಹ ಮಕ್ಕಳನ್ನು ವಿಶೇಷ ಅಗತ್ಯವುಳ್ಳ ಮಕ್ಕಳು ಎಂದು ಗುರುತಿಸಲಾಗುತ್ತದೆ. ಇವರಿಗೆ ಇನ್ನೊಬ್ಬರ ಅಗತ್ಯತೆ ಇರುವುದರಿಂದ ಅವರೂ ಸಹ ಇತರೆ ಮಕ್ಕಳಂತೆ ಕಲಿಯಲು ಬೇಕಾದ ವಾತಾವರಣ ನಿರ್ಮಿಸುವಲ್ಲಿ ಪಾಲಕರೂ ಸೇರಿದಂತೆ ಶಿಕ್ಷಕರ ಪಾತ್ರ ಬಹಳಷ್ಟಿರುತ್ತದೆ.
ಈ ನಿಟ್ಟಿನಲ್ಲಿ ಇಂತಹ ಮಕ್ಕಳಿಗೂ ಸಾಮಾನ್ಯ ಮಕ್ಕಳಂತೆ ಶಿಕ್ಷಣ ನೀಡಬೇಕು ಎಂಬ ನಿಟ್ಟಿನಲ್ಲಿ ಇಲಾಖೆ ಸಮನ್ವಯ ಶಿಕ್ಷಣ ಜಾರಿಗೆ ತಂದಿದ್ದು ತಾಲ್ಲೂಕಿನಲ್ಲಿ ಇದೀಗ ನಾಲ್ವರು ಶಿಕ್ಷಕರನ್ನು ಇದಕ್ಕಾಗಿ ನೇಮಿಸಲಾಗಿದೆ. ಸಮನ್ವಯ ಶಿಕ್ಷಣದಿಂದ ವಿಶೇಷ ಅಗತ್ಯವುಳ್ಳ ಮಕ್ಕಳು ಸಾಮಾನ್ಯ ಮಕ್ಕಳೊಂದಿಗೆ ಆರೋಗ್ಯಕರ ಸಾಮಾಜಿಕ ಸಂಬಂಧಗಳನ್ನು ಬೆಳೆಸಿಕೊಳ್ಳಲು ಸಹಕಾರಿಯಾಗುತ್ತದೆ. ಇದರಿಂದ ಅವರಲ್ಲಿ ಧೈರ್ಯ ಹಾಗು ಆತ್ಮವಿಶ್ವಾಸ ಬೆಳೆಯುತ್ತದೆ ಎಂದರು.
ಅಂಗವಿಕಲತೆ ಮಾನವನನ್ನು ಅನಾದಿ ಕಾಲದಿಂದಲೂ ಕಾಡುತ್ತಿದ್ದರೂ ನಾಗರೀಕತೆ ಬೆಳೆದಂತೆ ಜನರ ಮನೋಭಾವ ಬದಲಾಗುವ ಮೂಲಕ ಇದೀಗ ಅಂಗವೈಪಲ್ಯ ಯಾವುದೇ ಶಾಪವಲ್ಲ. ಬದಲಿಗೆ ಅವರಿಗೆ ಅಗತ್ಯವಿರುವ ಶಿಕ್ಷಣ ನೀಡಿದಲ್ಲಿ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತದೆ. ಹಾಗಾಗಿ ಪೋಷಕರೂ ಸೇರಿದಂತೆ ಶಿಕ್ಷಕರು ಇಂತಹ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಿ ಅವರಿಗೆ ಬೇಕಾದ ಆರೋಗ್ಯ ತಪಾಸಣೆ ಸೇರಿದಂತೆ ಇಲಾಖೆಯಿಂದ ಸಿಗುವ ಎಲ್ಲಾ ಸವಲತ್ತುಗಳನ್ನು ಬಳಸಿಕೊಂಡು ಉತ್ತಮ ಶಿಕ್ಷಣ ಕೊಡಿಸಲು ಮುಂದಾಗಬೇಕು ಎಂದರು.
ಶಿಬಿರದಲ್ಲಿ ಸುಮಾರು ೨೬೦ ವಿಶೇಷ ಅಗತ್ಯವುಳ್ಳ ಮಕ್ಕಳ ಆರೋಗ್ಯ ತಪಾಸಣೆ ನಡೆಸಲಾಯಿತು.
ಜಂಗಮಕೋಟೆ ಸಿಆರ್‌ಸಿ ಸುಂದರಾಚಾರಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ವಿ.ಶ್ರೀರಾಮಯ್ಯ, ಕ್ಷೇತ್ರ ಸಮನ್ವಯಾಧಿಕಾರಿ ರಾಜು. ವಿಶೇಷ ಶಿಕ್ಷಣ ಸಂಪನ್ಮೂಲ ವ್ಯಕ್ತಿಗಳಾದ ಜಗದೀಶ್, ಸತ್ಯನಾರಾಯಣ, ಸುಬ್ರಮಣಿ, ಪಿಡಿಓ ವಿ.ಮಂಜುನಾಥ್, ವೈದ್ಯರಾದ ಡಾ.ಪ್ರಮೋದ್, ಡಾ.ಅನುಷ, ಡಾ.ಹೇಮಂತ್ ಹಾಜರಿದ್ದರು.
- Advertisement -
- Advertisement -
- Advertisement -