29.5 C
Sidlaghatta
Wednesday, July 9, 2025

ವಿಶ್ವ ನೀರಿನ ದಿನಾಚರಣೆ ಕಾರ್ಯಕ್ರಮ

- Advertisement -
- Advertisement -

ದಿಬ್ಬೂರಹಳ್ಳಿ ರಸ್ತೆಯಲ್ಲಿರುವ ಸಾಮಾಜಿಕ ಅರಣ್ಯ ವಲಯದ ನರ್ಸರಿ ಆವರಣದಲ್ಲಿ ಶುಕ್ರವಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಮ್ಮಿಕೊಂಡಿದ್ದ “ವಿಶ್ವ ನೀರಿನ ದಿನಾಚರಣೆ” ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಗುರುದತ್ ಹೆಗೆಡೆ ಮಾತನಾಡಿದರು.
ಮಳೆನೀರು ಕೊಯ್ಲು ಮತ್ತು ಹಸುರೀಕರಣಕ್ಕೆ ನಾವೀಗ ಮನಸ್ಸು ಮಾಡದಿದ್ದರೆ ಮುಂದಿನ ಪೀಳಿಗೆ ನಮ್ಮನ್ನು ಕ್ಷಮಿಸುವುದಿಲ್ಲ. ಪ್ರತಿಯೊಂದು ಹನಿ ನೀರೂ ಅಮೂಲ್ಯವಾದುದು. ಜವಾಬ್ದಾರಿಯುತವಾಗಿ ನೀರನ್ನು ಬಳಸಬೇಕು ಮತ್ತು ಸಾಧ್ಯತೆ ಮೀರಿ ಹಸುರೀಕರಣ ಕಾರ್ಯವನ್ನು ಎಲ್ಲರೂ ಮಾಡುವಂತಾಗಬೇಕು ಎಂದು ಅವರು ತಿಳಿಸಿದರು.
ಈಗಾಗಲೇ ಜಿಲ್ಲೆಯ ಬಹುತೇಕ ಕೆರೆಗಳು ಬತ್ತಿವೆ. ನೀರಿನ ತೊಂದರೆಯನ್ನು ಜನರು ಅನುಭವಿಸುವಂತಾಗಿದೆ. ಯಾವುದೇ ನೀರಿನ ಯೋಜನೆ ಪರಿಪೂರ್ಣಗೊಂಡರೂ ಜಿಲ್ಲೆಯ ಸಂಪೂರ್ಣ ನೀರಿನ ಬವಣೆಯನ್ನು ಪರಿಹರಿಸಲು ಸಾಧ್ಯವಿಲ್ಲ. ಹಾಗಾಗಿ ಪ್ರತಿಯೊಬ್ಬರೂ ನೀರಿನ ಕುರಿತಾಗಿ ಕಾಳಜಿ ವಹಿಸಬೇಕು. ಕನಿಷ್ಠ ತಮ್ಮ ಸೂರಿನ ಮೇಲೆ ಬೀಳುವ ಮಳೆ ನೀರನ್ನು ಹಿಡಿದಿಟ್ಟುಕೊಂಡರೂ ಸಾಕಷ್ಟು ದಿನಕ್ಕೆ ಆಗುವಷ್ಟು ನೀರು ಸಿಗುತ್ತದೆ. ಎಷ್ಟು ಸಾಢ್ಯವೋ ಅಷ್ಟು ಗಿಡಗಳನ್ನು ನೆಡುತ್ತಾ ಹೋಗಿ. ಇದು ಮಾತ್ರವೇ ನಮ್ಮ ಮುಂದಿನ ಪೀಳಿಗೆಗೆ ನಾವು ಕೊಡಬಲ್ಲ ಅತ್ಯುತ್ತಮ ಕಾಣಿಕೆ ಎಂದರು.
ಚುನಾವಣೆ ಸಮೀಪಿಸಿದೆ. ನಿಶ್ಕಲ್ಮಷ ಮನಸ್ಸಿನಿಂದ ಯಾವುದೇ ಆಮಿಷಕ್ಕೆ ಒಳಗಾಗದಂತೆ, ಜಾತಿ, ಹಣವನ್ನು ಮೀರಿ ನಿಲ್ಲುವಂತವರಾಗಿ. ಉತ್ತಮ ಮನಸ್ಥಿತಿ ಉಳ್ಳವರನ್ನು, ಜನಸೇವೆ ಮಾಡುವವರನ್ನು, ಕೆಲಸ ಮಾಡುವವರನ್ನು ಆರಿಸೋಣ. ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಹೇಳಿದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಿ.ಶಿವಕುಮಾರ್ ಮಾತನಾಡಿ, ಜೀವ ವ್ಯವಸ್ಥೆ ನಿಂತಿರುವುದೇ ನೀರಿನ ಆಧಾರದ ಮೇಲೆ. ನೀರು ಮಾನವನ ಪಾಲಿನ ಜೀವ ಜಲ. ಬಡವರು ಬಲ್ಲಿದರೆಂಬ ಭೇದವಿಲ್ಲದೆ ಪ್ರತಿಯೊಬ್ಬರ ಮನೆಯ ಮೇಲೂ ಅವರ ಇಡೀ ಕುಟುಂಬಕ್ಕೆ ಒಂದು ವರ್ಷಕ್ಕೆ ಅಗತ್ಯ ಇರುವುದಕ್ಕಿಂತಲೂ ಅಧಿಕ ಪ್ರಮಾಣದಲ್ಲಿ ನೀರು ಮಳೆಯ ರೂಪದಲ್ಲಿ ಛಾವಣಿಯ ಮೇಲೆ ಸುರಿಯುತ್ತಿದ್ದು ಆ ನೀರನ್ನು ಅವರವರ ಬಾವಿ ಅಥವಾ ಇಂಗು ಗುಂಡಿಗಳಿಗೆ ಮರು ಪೂರಣಗೊಳಿಸಿದಲ್ಲಿ ಬೇಸಗೆಯಲ್ಲಿ ಎದುರಾಗುವ ನೀರಿನ ಸಮಸ್ಯೆಯನ್ನು ಹೋಗಲಾಡಿಸಬಹುದು ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿ ಎಂ.ಎಚ್.ನಾಗೇಶ್, ಸಹಾಯಕ ಯೋಜನಾಧಿಕಾರಿ ಮುನಿರಾಜು, ಜಿಲ್ಲಾ ಅರಣ್ಯ ಅಧಿಕಾರಿ ಶ್ರೀನಾಥ್ ಮಾತನಾಡಿದರು.
ಈ ಸಂದರ್ಭದಲ್ಲಿ ಜಲಸಾಕ್ಷರತೆ ಕುರಿತಂತೆ ಪ್ರತಿಜ್ಞಾ ವಿಧಿ ಮತ್ತು ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಮತದಾರರ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು. ಇ.ಎಂ.ವಿ ಮತಯಂತ್ರದ ಪ್ರಾತ್ಯಕ್ಷಿಕೆಯನ್ನು ತೋರಿಸಿ, ಭಾಗವಹಿಸಿದ್ದ ಪಿ.ಡಿ.ಒ, ಜಲಗಾರರು ಮತ್ತು ಸಾರ್ವಜನಿಕರಿಗೆ ಸಸಿಗಳನ್ನು ವಿತರಿಸಿದರು.
ವಲಯ ಅರಣ್ಯಾಧಿಕಾರಿ ವಿ.ಮುನಿಯಪ್ಪ, ನಗರಸಭೆ ಆಯುಕ್ತ ಚಲಪತಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಆಂಜನೇಯ ಹಾಜರಿದ್ದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!